ನಾಲ್ಕು ರಾಜ್ಯಗಳಲ್ಲಿ 9 ಎಫ್‌ಐಆರ್‌: ನೂಪುರ್‌ ಶರ್ಮಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇಕೆ?

ಹಲವು ಕಡೆ ಎಫ್‌ಐಆರ್‌ ದಾಖಲಿಸಿದ್ದು, ಅವುಗಳೆಲ್ಲವನ್ನೂ ಸೇರಿಸಿ ಒಂದೇ ಎಫ್‌ಐಆರ್‌ ಆಗಿಸಿ ದೆಹಲಿ ಪೊಲೀಸ್‌ ತನಿಖೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಶರ್ಮಾ ಕೋರಿದ್ದರು.
Supreme Court and Nupur Sharma
Supreme Court and Nupur Sharmatwitter

ರಾಷ್ಟ್ರೀಯ ಸುದ್ದಿ ವಾಹಿನಿಯ ಚರ್ಚೆಯಲ್ಲಿ ಪ್ರವಾದಿ ಮುಹಮ್ಮದ್‌ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೇಶದ ಹಲವೆಡೆ ಬಿಗುವಿನ ವಾತಾವರಣ ಉಂಟಾಗಲು ಕಾರಣವಾಗಿರುವ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಪಡಿಸಲು ಕೋರಿದ್ದ ಮನವಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ.

ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ವಜಾ ಮಾಡಬೇಕು ಎಂಬುದು ನೂಪುರ್‌ ಅವರ ಮೊದಲ ಕೋರಿಕೆಯಾಗಿತ್ತು. ಅದು ಸಾಧ್ಯವಿಲ್ಲದ ಪಕ್ಷದಲ್ಲಿ ದೇಶದ ವಿವಿಧೆಡೆ ದಾಖಲಾಗಿರುವ ಎಫ್‌ಐಆರ್‌ಗಳೆಲ್ಲವನ್ನೂ ಸೇರಿಸಿ ಒಂದೇ ಎಫ್‌ಐಆರ್‌ ಮಾಡಿ ದೆಹಲಿ ಪೊಲೀಸರಿಗೆ ತನಿಖೆ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬುದು ಅವರ ಮನವಿಯಲ್ಲಿನ ಪರ್ಯಾಯ ಕೋರಿಕೆಯಾಗಿತ್ತು.

ದೆಹಲಿ (1), ಮಹಾರಾಷ್ಟ್ರ (5), ಪಶ್ಚಿಮ ಬಂಗಾಳ (2) ಮತ್ತು ತೆಲಂಗಾಣದಲ್ಲಿ (1) ಒಟ್ಟು 9 ಎಫ್‌ಐಆರ್‌ಗಳು ದಾಖಲಾಗಿವೆ. ಮಹಾರಾಷ್ಟ್ರದ ಮುಂಬೈನ ಪೈಧೋನಿ ಠಾಣೆಯಲ್ಲಿ (ಮೇ 28), ಥಾಣೆಯ ಮುಂಬ್ರಾ ಠಾಣೆಯಲ್ಲಿ (ಮೇ 30), ಪುಣೆಯ ಕೊಂಧ್ವಾ (ಮೇ 31) ಮತ್ತು ಭಿವಂಡಿ (ಮೇ 30), ಪರ್ಭಾನಿಯ ನಾನಲಪೇಠ್‌ ಠಾಣೆಯಲ್ಲಿ (ಜೂನ್‌ 13) ಎಫ್‌ಐಆರ್‌ಗಳು ದಾಖಲಾಗಿವೆ. ತೆಲಂಗಾಣದ ಹೈದರಾಬಾದ್‌ನ ಸೈಬರ್‌ ಸೆಲ್‌ ಠಾಣೆಯಲ್ಲಿ (ಮೇ 30), ಪಶ್ಚಿಮ ಬಂಗಾಳದ ನರ್ಕೆಲದಂಗ ಠಾಣೆಯಲ್ಲಿ (ಜೂನ್‌ 4) ಮತ್ತು ಕೋಲ್ಕತ್ತಾದ ಅಮ್ಹೆರೆಸ್ಟ್‌ ಠಾಣೆಯಲ್ಲಿ ಹಾಗೂ ದೆಹಲಿಯ ಐಎಫ್‌ಎಸ್‌ಒ ಠಾಣೆಯಲ್ಲಿ (ಜೂನ್‌ 6) ಪ್ರಕರಣ ದಾಖಲಾಗಿವೆ ಎಂದು ಹೇಳಲಾಗಿದೆ.

ಇದಲ್ಲದೆ ಅಸ್ಸಾಂ, ಕರ್ನಾಟಕ, ರಾಜಸ್ಥಾನ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದ ವಿವಿಧೆಡೆ ಕೂಡ ಎಫ್‌ಐಆರ್‌ಗಳು ದಾಖಲಾಗಿರುವ ಮಾಹಿತಿಯಿದ್ದು ಅವುಗಳ ವಿವರ ಲಭ್ಯವಿಲ್ಲ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಆಧಾರರಹಿರ ಆರೋಪಗಳನ್ನು ಎಫ್‌ಐಆರ್‌ನಲ್ಲಿ ಮಾಡಲಾಗಿದೆ. ದೇಶಾದ್ಯಂತ ಒಂದರ ಹಿಂದೆ ಒಂದರಂತೆ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗಿರುವುದು ಅದರ ಹಿಂದಿನ ಉದ್ದೇಶವನ್ನು ತಿಳಿಸುತ್ತದೆ. ಅರ್ಜಿದಾರರ ವಿರುದ್ಧ ಆರೋಪ ಮಾಡಿರುವ ಯಾವುದೇ ಅಪರಾಧದ ಅಂಶಗಳಿಗೆ ಆಧಾರವಿಲ್ಲ. ಹೀಗಾಗಿ ಎಫ್‌ಐಆರ್‌ಗಳನ್ನು ರದ್ದುಗೊಳಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ವಿವರಿಸಲಾಗಿದೆ. ಹೀಗಾಗಿ, ಮನವಿಯಲ್ಲಿ ಎಫ್‌ಐಆರ್‌ ವಜಾ ಮಾಡಬೇಕು ಎಂದು ಕೋರಲಾಗಿದೆ.

ವಿವಿಧ ರಾಜ್ಯಗಳಲ್ಲಿ ಎಫ್‌ಐಆರ್‌ ದಾಖಲಿಸಿರುವುದರಿಂದ ತನಿಖಾ ಪ್ರಕ್ರಿಯೆಯಲ್ಲಿ ಮರುಕಳಿಕೆ ಉಂಟಾಗಲಿದ್ದು, ಅರ್ಜಿದಾರರಿಗೆ ಅನಗತ್ಯ ಕಿರುಕುಳ ಉಂಟಾಗಲಿದೆ ಎಂದು ಮನವಿಯಲ್ಲಿ ಹೇಳಲಾಗಿದೆ. ಅಲ್ಲದೆ, ಈ ಹಿನ್ನೆಲೆಯಲ್ಲಿ ಸತೀಂದರ್‌ ಸಿಂಗ್‌ ಭಾಸಿನ್‌ ಮತ್ತು ಟಿ ಟಿ ಆಂಟನಿ ಪ್ರಕರಣಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com