ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ ಕಾಯಿಲೆ: ಮಗುವಿಗೆ ಐಜಿಐಸಿಎಚ್‌ನಲ್ಲಿ ಆರೋಗ್ಯ ತಪಾಸಣೆಗೆ ಹೈಕೋರ್ಟ್‌ ಆದೇಶ

ಐಜಿಐಸಿಎಚ್‌ ವೈದ್ಯ ಡಾ. ಜಿ ಎನ್ ಸಂಜೀವ್ ಮಗುವಿನ ಆರೋಗ್ಯ ಸ್ಥಿತಿ ಕುರಿತು ತಪಾಸಣೆ ನಡೆಸಿ, ತಜ್ಞರ ಸಮಿತಿಗೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಕೇಂದ್ರ ಸರ್ಕಾರವು ಪೀಠಕ್ಕೆ ವಿವರಿಸಿದೆ.
Justice Krishna S Dixit and Karnataka HC
Justice Krishna S Dixit and Karnataka HC

ಬೆನ್ನುಮೂಳೆ ಸ್ನಾಯುಗಳ ಕ್ಷೀಣತೆ (ಸ್ಪೈನಲ್ ಮಸ್ಕ್ಯುಲರ್ ಆಸ್ಟ್ರೊಫಿ ಟೈಪ್-1) ಕಾಯಿಲೆಯಿಂದ ಬಳಲುತ್ತಿರುವ 17 ತಿಂಗಳ ಮಗು ಜನೀಶ್‌ಗೆ ಕೂಡಲೇ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (ಐಜಿಐಸಿಎಚ್) ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸುವಂತೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಜನೀಶ್ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಮಗುವಿನ ತಂದೆ ನವೀನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಸೆಪ್ಟೆಂಬರ್‌ 27ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠವು ಮಗುವಿನ ಚಿಕಿತ್ಸೆಗೆ ಆರ್ಥಿಕ ನೆರವು ಒದಗಿಸುವ ವಿಚಾರದಲ್ಲಿ ನಿಲುವು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಕೇಂದ್ರ ಸರ್ಕಾರದ ಪರ ವಕೀಲರು ಶುಕ್ರವಾರ ಮೆಮೊ ಸಲ್ಲಿಸಿದ್ದು, ಅಪರೂಪದ ಕಾಯಿಲೆಗಳ ಚಿಕಿತ್ಸೆಗೆಂದೇ ಪ್ರತ್ಯೇಕ ನೀತಿ ಇದೆ. ಆ ಪ್ರಕಾರ ಮಗುವನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿ ವರದಿ ನೀಡಬೇಕಿದೆ. ಹೀಗಾಗಿ, ಮಗುವನ್ನು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಆವರಣದಲ್ಲಿರುವ ಐಜಿಐಸಿಎಚ್‌ಗೆ ಕರೆದೊಯ್ಯಬಹುದು. ಅಲ್ಲಿನ ವೈದ್ಯ ಡಾ. ಜಿ ಎನ್ ಸಂಜೀವ್ ಮಗುವಿನ ಆರೋಗ್ಯ ಸ್ಥಿತಿ ಕುರಿತು ತಪಾಸಣೆ ನಡೆಸಿ, ತಜ್ಞರ ಸಮಿತಿಗೆ ವರದಿ ಸಲ್ಲಿಸುತ್ತಾರೆ. ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಪೀಠಕ್ಕೆ ವಿವರಿಸಿದರು.

ಮಗುವನ್ನು ಇಂದೇ ವೈದ್ಯ ಜಿ ಎನ್ ಸಂಜೀವ್ ಬಳಿ ಕರೆದೊಯ್ಯಬೇಕು. ಮಗುವಿನ ಪಾಲಕರು ಅಥವಾ ಪೋಷಕರು ಕೂಡಲೇ ವೈದ್ಯರನ್ನು ಇ-ಮೇಲ್ ಅಥವಾ ದೂರವಾಣಿ ಕರೆ ಮೂಲಕ ಸಂಪರ್ಕಿಸಬೇಕು. ವೈದ್ಯರು ಅದಕ್ಕೆ ತಕ್ಷಣವೇ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕು. ಒಂದೊಮ್ಮೆ ವೈದ್ಯರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಸಿತು.

ಒಂದು ವೇಳೆ, ಅರ್ಜಿಯಲ್ಲಿನ ಪ್ರತಿವಾದಿಗಳ ದೆಸೆಯಿಂದ ವಿಳಂಬವಾಗಿ ಮಗುವಿನ ಜೀವಕ್ಕೆ ಯಾವುದೇ ರೀತಿಯ ಅಪಾಯವಾದರೂ ಅದಕ್ಕೆ ಅವರೇ ಹೊಣೆಯಾಗಲಿದ್ದಾರೆ ಎಂದೂ ಪೀಠ ಎಚ್ಚರಿಸಿದ್ದು ಪ್ರಕರಣದ ಪ್ರಗತಿ ಕುರಿತು ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಅಕ್ಟೋಬರ್‌ 7ಕ್ಕೆ ಮುಂದೂಡಿತು.

Also Read
ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಆರ್ಥಿಕ ನೆರವು: ನಿಲುವು ತಿಳಿಸಲು ಕೇಂದ್ರಕ್ಕೆ ಹೈಕೋರ್ಟ್‌ ಆದೇಶ

ಕೋರಿಕೆಯಲ್ಲಿ ಏನಿದೆ?: ಅನುವಂಶೀಯ ಸ್ಪೈನಲ್ ಮಸ್ಕ್ಯುಲರ್ ಆಸ್ಟ್ರೊಫಿ ಟೈಪ್-1 ಕಾಯಿಲೆಯಿಂದ ಬಳಲುತ್ತಿರುವ ಜನೀಶ್‌ಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಆದರೆ, ಭಾರತದಲ್ಲಿ ಯಾವುದೇ ಔಷಧ ಲಭ್ಯವಿಲ್ಲ. ಚಿಕಿತ್ಸೆಗೆ ಅಗತ್ಯವಿರುವ ಜೊಲ್ಗೆನ್‌ಸ್ಮ ಚುಚ್ಚುಮದ್ದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಿದ್ದು, ಅದಕ್ಕಾಗಿ ಅಂದಾಜು 16 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಸದ್ಯ ಕ್ರೌಡ್ ಫಂಡಿಗ್‌, ಹಿತೈಷಿಗಳು ಹಾಗೂ ದಾನಿಗಳ ಮೂಲಕ 8.24 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಇನ್ನೂ 7.76 ಕೋಟಿ ರೂಪಾಯಿ ಅಗತ್ಯವಿದೆ. ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, 18ರಿಂದ 24 ತಿಂಗಳು ತುಂಬುವುದರೊಳಗೆ ಚಿಕಿತ್ಸೆ ಕೊಡಿಸದಿದ್ದರೆ, ಜೀವಕ್ಕೇ ಅಪಾಯವಿದೆ. ಆದ್ದರಿಂದ, ಮಗುವಿನ ಚಿಕಿತ್ಸೆ ಮೇಲ್ವಿಚಾರಣೆಗಾಗಿ ವೈದ್ಯಕೀಯ ಮಂಡಳಿಯೊಂದನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಸದ್ಯ ಸಂಗ್ರಹಿಸಲಾಗಿರುವ ಹಣವನ್ನು ಮಂಡಳಿಗೆ ವರ್ಗಾಯಿಸಲಾಗುವುದು. ಆಗ ಮಂಡಳಿ ವತಿಯಿಂದಲೇ ಮಗುವಿಗೆ ಚಿಕಿತ್ಸೆ ಕೊಡಿಸಬಹುದು ಅಥವಾ ಚಿಕಿತ್ಸೆಗೆ ಅಗತ್ಯವಿರುವ ಬಾಕಿ ಹಣವನ್ನು ಶೀಘ್ರವಾಗಿ ಒದಗಿಸಲು ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com