ದೇಶದ ಕಾಯಿದೆ- ಕಟ್ಟಳೆಗಳ ಬಗ್ಗೆ ಅರಿವು ಮೂಡಿಸುತ್ತ ವಿಶಿಷ್ಟ ಪ್ರಚಾರದಲ್ಲಿ ತೊಡಗಿರುವ ಸಿನಿಮಾ ತಂಡ!

ಟ್ರೇಲರ್‌, ಹಾಡುಗಳ ಮೂಲಕ ಸದ್ದು ಮಾಡಿರುವ 'ಆಕ್ಟ್-1978' ಚಿತ್ರ ನ.‌20 ರಂದು ಬಿಡುಗಡೆಯಾಗಲಿದೆ. ಜನಸಾಮಾನ್ಯರಿಗೆ ತಿಳಿದಿರಬೇಕಾದ ಕಾನೂನು ಅಂಶಗಳ ಸುತ್ತ ಸಾಮಾಜಿಕ ಮಾಧ್ಯಮಗಳಲ್ಲಿ ವಿಭಿನ್ನ ಪ್ರಚಾರ ಮಾಡುವ ಮೂಲಕ ಚಿತ್ರ ಚರ್ಚೆಯಲ್ಲಿದೆ.
ದೇಶದ ಕಾಯಿದೆ- ಕಟ್ಟಳೆಗಳ ಬಗ್ಗೆ ಅರಿವು ಮೂಡಿಸುತ್ತ ವಿಶಿಷ್ಟ ಪ್ರಚಾರದಲ್ಲಿ ತೊಡಗಿರುವ ಸಿನಿಮಾ ತಂಡ!

ಸಿನಿಮಾ ಬಿಡುಗಡೆಗೂ ಮುನ್ನ ಪ್ರಚಾರ ನಡೆಯುವುದು ಸಾಮಾನ್ಯ. ನಟ ನಟಿಯರ ಬಗ್ಗೆ, ನಿರ್ದೇಶನ, ನಿರ್ಮಾಣದ ಸುತ್ತ ಸಾಮಾನ್ಯವಾಗಿ ಈ ಪ್ರಚಾರ ನಡೆಯುತ್ತದೆ. ಆದರೆ ಸಿನಿಮಾ ತಂಡವೊಂದು ಕಾಯಿದೆ- ಕಾನೂನುಗಳ ಬಗ್ಗೆ ಪ್ರಚಾರ ನಡೆಸುವುದು ವಿರಾಳಾತಿವಿರಳ. ʼಕನಸುಗಳನ್ನು ಮಾರುವವರುʼ ಕಾನೂನು ಕಟ್ಟಳೆಗಳ ಬಗ್ಗೆ ವಿಶೇಷ ಆಸ್ಥೆ ವಹಿಸಿದರೆ ಏನಾಗಬಲ್ಲದು ಎಂಬುದಕ್ಕೆ ‘ಆಕ್ಟ್‌ 1978’ ಸಿನಿಮಾ ಒಳ್ಳೆಯ ಉದಾಹರಣೆ.

A poster of 'Act 1978' movie
A poster of 'Act 1978' movie

ಸಿನಿಮಾಕ್ಕೆ ಚಿತ್ರಕತೆ- ಸಂಭಾಷಣೆ ಬರೆದಿರುವವರಲ್ಲಿ ಒಬ್ಬರಾದ ಟಿ ಕೆ ದಯಾನಂದ್‌ ಅವರ ಪರಿಶ್ರಮದ ಫಲವಾಗಿ ಚಿತ್ರದ ಸುಮಾರು ಅರವತ್ತು ಪೋಸ್ಟರ್‌ಗಳು ಜನ ಸಾಮನ್ಯರಿಗೆ ಕಾಯಿದೆ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುತ್ತಿವೆ. ವಿಶೇಷ ಎಂದರೆ ಜನರ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಆದರೆ ಬಹುತೇಕರಿಗೆ ತಿಳಿಯದೇ ಇರುವ ಸಂಗತಿಗಳು ಇವು. ಉದಾಹರಣೆಗೆ:

  • ಎಂಆರ್‌ಪಿ ಬೆಲೆಯಿದ್ದರೂ ಗ್ರಾಹಕ ಶೇ 10ರಿಂದ 15ರಷ್ಟು ರಿಯಾಯ್ತಿ ಪಡೆಯಲು ಕಾಯಿದೆಗಳಡಿ ಅವಕಾಶವಿದೆ. ಉಲ್ಲಂಘಿಸಿದರೆ ಕಂಪೆನಿಗಳ ಮಾಲೀಕರಿಗೆ ಒಂದು ವರ್ಷ ಜೈಲು ಶಿಕ್ಷೆ, ಒಂದು ಲಕ್ಷ ದಂಡ ವಿಧಿಸಬಹುದಾಗಿದೆ.

  • ಕೊಲೆ, ಅತ್ಯಾಚಾರ, ಕಳ್ಳಸಾಗಣಿಕೆ ಅಪಹರಣದ ರೀತಿಯ ಗಂಭೀರ ಪ್ರಕರಣಗಳು ಹಾಗೂ ಕುಡಿದು ಚಾಲನೆ ಮಾಡಿರುವ ಸಂದರ್ಭ ಹೊರತುಪಡಿಸಿ ಉಳಿದಂತೆ ನಿಮ್ಮ ಗಾಡಿ ಕೀ ಕಿತ್ತುಕೊಳ್ಳುವ ಅಥವಾ ಸೀಜ್‌ ಮಾಡುವ ಅಧಿಕಾರ ಟ್ರಾಫಿಕ್‌ ಪೊಲೀಸರಿಗೆ ಇಲ್ಲ.

  • ಖಾಸಗಿ ಆಸ್ಪತ್ರೆಗಳು ಬಡವರಿಗೆ ತಮ್ಮ ಆಸ್ಪತ್ರೆಯಲ್ಲೀ ಶೇ 25ರಷ್ಟು ಹಾಸಿಗೆಗಳು ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡುವಂತೆ ದೆಹಲಿ ನ್ಯಾಯಾಲಯ ಮತ್ತು ಸುಪ್ರೀಂಕೋರ್ಟ್ ತೀರ್ಪು‌ ನೀಡಿದೆ.

  • ಐಪಿಸಿ ಸೆಕ್ಷನ್‌ 141ರಿಂದ 144ರ ಅಡಿ ಅಕ್ರಮ ಗುಂಪು ಕ್ರಿಮಿನಲ್‌ ಚಟುವಟಿಕೆ ಸಂದರ್ಭಗಳಲ್ಲಿ ಮಾತ್ರ ಪೊಲೀಸರು ಜಿಲ್ಲಾ ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಅವರ ಅನುಮತಿ ಮೇರೆಗೆ ಮಾತ್ರ ಜನರ ಮೇಲೆ ಬಲ ಪ್ರಯೋಗ ನಡೆಸಬಹುದು. ಇದನ್ನು ಹೊರತುಪಡಿಸಿ ಜನರಿಗೆ ಲಾಠಿಯಿಂದ ಥಳಿಸುವ ಅಧಿಕಾರವನ್ನು ಪೊಲೀಸರಿಗೆ ಭಾರತೀಯ ದಂಡ ಸಂಹಿತೆಯಲ್ಲಾಗಲಿ, ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಾಗಲಿ, ಸಂವಿಧಾನ ಕೊಟ್ಟಿಲ್ಲ.

Another poster of 'Act 1978' Movie
Another poster of 'Act 1978' Movie

ಈ ಪೋಸ್ಟರ್‌ಗಳಲ್ಲಿ ಇನ್ನೂ ಎರಡು ವಿಶೇಷಗಳಿವೆ. ಮೊದಲನೆಯದು ಖ್ಯಾತನಾಮರ ಹೇಳಿಕೆಗಳಿಗೆ ಸಂಬಂಧಿಸಿದ್ದು. ನ್ಯಾ. ಎನ್‌ ಸಂತೋಷ್‌ ಹೆಗ್ಡೆ ಅವರು ಭ್ರಷ್ಟಾಚಾರ ತಡೆ ಕಾಯ್ದೆ ಕುರಿತಂತೆ ‘ದ ಎಕನಾಮಿಕ್‌ ಟೈಮ್ಸ್‌’ ಗೆ ನೀಡಿರುವ ಹೇಳಿಕೆಯನ್ನೂ ಚಿತ್ರದ ಪೋಸ್ಟರ್‌ನಲ್ಲಿ ಬಳಸಿಕೊಳ್ಳಲಾಗಿದ್ದು ಅದರ ಒಕ್ಕಣೆ ಹೀಗಿದೆ: ʼಪ್ರಿವೆನ್ಷನ್‌ ಆಫ್‌ ಕರಪ್ಟ್‌ ಆಕ್ಟ್‌ ಕೆಳಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಕೇಸ್‌ಗಳಲ್ಲಿ 100ಕ್ಕೆ 20% ಮಂದಿಗೆ ಮಾತ್ರ ಶಿಕ್ಷೆ ಆಗುತ್ತಿದೆ. ಇನ್ನು 80% ಭ್ರಷ್ಟರು ಬಚಾವಾಗುತ್ತಿದ್ದಾರೆ.ʼ

A poster depicting Prof. M D Nanjundaswamy, Ex president, Karnataka State Farmers' Association.
A poster depicting Prof. M D Nanjundaswamy, Ex president, Karnataka State Farmers' Association.

ಮತ್ತೊಂದು ಪೋಸ್ಟರ್‌ನಲ್ಲಿ, ರೈತ ಸಂಘಟನೆಯ ದಂತಕತೆ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರು ನೀಡಿದ ಹೇಳಿಕೆಯನ್ನು ಬಳಸಿಕೊಳ್ಳಲಾಗಿದ್ದು, ʼನಮ್ಮ ಹಂಗಿನಲ್ಲೇ ಬದುಕುವ ರಾಜಕಾರಣಿಗಳು ಅಧಿಕಾರಿಗಳು ನಮ್ಮ ಆಜ್ಞಾಪಾಲಕರೇ ಹೊರತು ನಾವು ಅವರ ಗುಲಾಮರಲ್ಲʼ ಎಂಬ ಅವರ ಮಾತನ್ನು ಸಾರಲಾಗಿದೆ.

ಎರಡನೆಯ ಬಗೆಯ ಪೋಸ್ಟರ್‌ ವೀಕ್ಷಕರನ್ನು ಒಳಗೊಳ್ಳುವ ರೀತಿಯದ್ದು. ಯಾವ ಕಾನೂನು ಬದಲಾಗಬೇಕು ಮತ್ತು ಏಕೆ ಬದಲಾಗಬೇಕು ಎಂಬ ಬಗ್ಗೆ ಟ್ವೀಟ್‌ ಮಾಡುವಂತೆ ಒಂದು ಪೋಸ್ಟರ್‌ನಲ್ಲಿ ವಿನಂತಿಸಲಾಗಿದ್ದು ಆಯ್ಕೆಯಾದ ಟ್ವೀಟ್‌ಗಳಲ್ಲಿ ಹತ್ತು ಮಂದಿಗೆ ಸೆಲೆಬ್ರಿಟಿ ಪ್ರಿಮಿಯರ್‌ ಶೋಗೆ ಆಹ್ವಾನ ನೀಡಲಾಗಿದೆ.

ಪೋಸ್ಟರ್‌ ಕುರಿತ ಮಾಹಿತಿಯನ್ನು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಹಂಚಿಕೊಂಡ ನಿರ್ದೇಶಕ ‘ಹರಿವುʼ ʼನಾತಿಚರಾಮಿʼ ಖ್ಯಾತಿಯ ಮಂಸೋರೆ “ಸಿನಿಮಾ ಕತೆಗೆ ಬೇಕೆಂದು ಈ ಮಾಹಿತಿಗಳನ್ನೆಲ್ಲಾ ಹೆಕ್ಕಿದ್ದೆವು ಆದರೆ ಇವು ಪೋಸ್ಟರ್‌ಗಳಿಗೆ ಬಳಕೆಯಾಗುತ್ತವೆ ಎಂದು ತಿಳಿದಿರಲಿಲ್ಲ” ಎನ್ನುತ್ತಾರೆ.

"ಸಿನಿಮಾ ಬಗ್ಗೆ ಡಂಗೂರ ಹೊಡೆಯುವುದಕ್ಕಿಂತ ಆ ಸಿನಿಮಾದಿಂದ ಜಾಗೃತಿ ಮೂಡಿಸಲು ಸಾಧ್ಯವೇ ಎಂಬ ಪ್ರಯೋಗ ಮಾಡಿದೆವು. ಈ ಪೋಸ್ಟರ್‌ಗಳನ್ನು ಜನ ಹಂಚಿಕೊಳ್ಳುತ್ತಿರುವುದನ್ನು ನೋಡಿದರೆ ವ್ಯವಸ್ಥೆ ಬಗ್ಗೆ ಅವರಿಗೆ ಇರುವ ಹತಾಶೆ ನೋವು ಏನೆಂದು ತಿಳಿಯುತ್ತದೆ” ಎಂಬುದು ಅವರ ಮಾತು.

ನೆರವಾದ ಕಾನೂನು ಶಾಲೆಯ ಸಂಶೋಧನೆ

ಪತ್ರಕರ್ತನಾಗಿ ದುಡಿದ ಅನುಭವ ಹೊಂದಿರುವ, ಸಾಹಿತ್ಯದ ಹಿನ್ನೆಲೆಯ ಟಿ ಕೆ ದಯಾನಂದ ಅವರು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪ್ರೊ. ಎಸ್‌ ಜಾಫೆಟ್‌ ಅವರ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ʼನಗರ ಬಡತನʼ ಕುರಿತಂತೆ ಸಂಶೋಧನೆ ನಡೆಸಿದವರು. ಆಗ ಕಾಯಿದೆ- ಕಾನೂನುಗಳ ಬಗ್ಗೆ ಅರಿತ ಅನೇಕ ಸಂಗತಿಗಳು ಸಿನಿಮಾ ನಿರ್ಮಾಣಕ್ಕೂ ಹಾಗೆಯೇ ಪೋಸ್ಟರ್‌ ರೂಪಿಸುವುದಕ್ಕೂ ಅವರಿಗೆ ಅನುಕೂಲ ಕಲ್ಪಿಸಿದವಂತೆ.

ಈ ಕುರಿತು ದಯಾನಂದ್ ಅವರು‌ ಹೇಳುವುದು ಹೀಗೆ: ನಾನು ಮತ್ತು ನಿರ್ದೇಶಕ ಮಂಸೋರೆ ಸಾಮಾಜಿಕ ಚಳವಳಿಗಳ ಹಿನ್ನೆಲೆಯಿಂದ ಬಂದವರು. ನನಗೆ ಅಪರಾಧ ಪ್ರಕರಣಗಳು ಮತ್ತು ರಾಜಕೀಯ ವರದಿಗಾರಿಕೆಯ ಅನುಭವವಿತ್ತು. ಕಾಯಿದೆಗಳು ಜನ ಸಾಮಾನ್ಯರ ತಲೆಯೊಳಗೆ ಹೋಗುವುದೇ ಇಲ್ಲ. ನೂರೆಂಟು ನಿಯಮಗಳು ಉಪ ನಿಯಮಗಳಿಂದಾಗಿ ಅವುಗಳ ಬಗ್ಗೆ ಸಾಮಾನ್ಯ ಜನತೆ ಆಸಕ್ತಿ ತಳೆಯುವುದಿಲ್ಲ. ಆದರೆ ಅಂತಹ ಕಾಯಿದೆಗಳು ಜನರಿಗೆ ಬಹು ಉಪಯುಕ್ತ ಎಂಬ ಕಾರಣಕ್ಕೆ ಇವುಗಳ ಬಗ್ಗೆ ನಮ್ಮ ದೃಷ್ಟಿ ನೆಟ್ಟಿತು, ಎನ್ನುತ್ತಾರೆ.

“ಪೋಸ್ಟರ್‌ ನೋಡುವವರಿಗೆ ಪೇಲವ ಎನಿಸಬಹುದು ಎಂಬ ಅಳುಕು ಆರಂಭದಲ್ಲಿ ಇತ್ತು ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾವಿರಾರು ಲೈಕ್‌ಗಳನ್ನು ಜನ ನೀಡಿದರು. ಜೊತೆಗೆ ಲೆಕ್ಕವಿಲ್ಲದಷ್ಟು ಮಂದಿ ಇವುಗಳನ್ನು ಹಂಚಿಕೊಂಡರು. ನಾವು ನಿರೀಕ್ಷಿಸದೇ ಇದ್ದ ಪ್ರತಿಕ್ರಿಯೆ ದೊರೆಯಿತು” ಎಂದು ದಯಾನಂದ್‌ ವಿವರಿಸುತ್ತಾರೆ.

ಇದೇ ವೇಳೆ, ಸಿನಿಮಾದ ಕತೆಗೂ ಪೋಸ್ಟರ್‌ನಲ್ಲಿ ನೀಡಲಾಗಿರುವ ಮಾಹಿತಿಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತದೆ ಚಿತ್ರತಂಡ. 1978ರಲ್ಲಿ ರೂಪುಗೊಂಡ ಕರ್ನಾಟಕದ ಕಾಯಿದೆಯೊಂದರ ಸುತ್ತ ಕತೆ ಹೆಣೆಯಲಾಗಿದೆಯಂತೆ. ಜನಜಾಗೃತಿ ಮೂಡಿಸುವ ಅಪ್ಪಟ ಉದ್ದೇಶದಿಂದ ಮಾತ್ರವೇ ಪೋಸ್ಟರ್‌ಗಳನ್ನು ರೂಪಿಸಲಾಗಿದೆಯಂತೆ. ಸಿನಿಮಾಗೆ ಚಿತ್ರಕತೆ ಮತ್ತು ಸಂಭಾಷಣೆ ಬರೆದಿರುವ ಮತ್ತೊಬ್ಬ ಚಿತ್ರಕರ್ಮಿ ವೀರೇಂದ್ರ ಮಲ್ಲಣ್ಣ ಅವರು ನಿರ್ಮಾಪಕರಾದ ಆರ್‌ ದೇವರಾಜ್‌ ಅವರು ಪೋಸ್ಟರ್‌ ತಯಾರಿಸುವಾಗ ನೀಡಿದ ಸ್ವಾತಂತ್ರ್ಯವನ್ನು ಸ್ಮರಿಸುತ್ತಾರೆ.

"ನಿರ್ಮಾಪಕರಿಗೆ ಮೂರು- ನಾಲ್ಕು ಕಥೆಗಳ ಎಳೆಯನ್ನು ವಿವರಿಸಿದೆವು. ಅವರು ಒಂದನ್ನು ಆಯ್ಕೆ ಮಾಡಿಕೊಂಡರು. ಪೋಸ್ಟರ್‌ ರೂಪಿಸುವ ವಿಚಾರದಲ್ಲಿ ನಮಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಆ ಸ್ವಾತಂತ್ರ್ಯ ನಮಗೆ ಪ್ರಯೋಗಗಳನ್ನು ನಡೆಸಲು ಅನುವು ಮಾಡಿಕೊಟ್ಟಿತು." ಎಂದು ವಿವರಿಸುತ್ತಾರೆ ವೀರೇಂದ್ರ.

ಟ್ರೇಲರ್‌ ಹಾಡುಗಳ ಮೂಲಕ ಈಗಾಗಲೇ ಸದ್ದು ಮಾಡಿರುವ ಸಿನಿಮಾ ಇದೇ ನವೆಂಬರ್‌ 20ರಂದು ಬಿಡುಗಡೆಯಾಗಲಿದೆ. ಯಜ್ಞಾ ಶೆಟ್ಟಿ, ದತ್ತಣ್ಣ, ಶ್ರುತಿ, ಸಂಚಾರಿ ವಿಜಯ್‌, ಪ್ರಮೋದ್‌ ಶೆಟ್ಟಿ, ಬಿ. ಸುರೇಶ್, ಸುಧಾ ಬೆಳವಾಡಿ, ಶೋಭರಾಜ್‌ ಮುಂತಾದವರು ಪ್ರಧಾನ ಭೂಮಿಕೆಯಲ್ಲಿದ್ದಾರೆ.

No stories found.
Kannada Bar & Bench
kannada.barandbench.com