ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಕರಣಗಳ ವಿಚಾರಣೆಗಾಗಿಯೇ ಒಂದು ದಿನ ಮೀಸಲಿರಿಸಬೇಕು: ಹೈಕೋರ್ಟ್‌

ಕುಂದಗೋಳ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಿದ ನ್ಯಾಯಾಲಯವು ಕಲಬುರ್ಗಿ ನಗರದ ರೋಜಾ ಮತ್ತು ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರತ್ಯೇಕ ಪ್ರಕರಣಗಳ ವಿಚಾರಣೆಯನ್ನು ನವೆಂಬರ್‌ 28ಕ್ಕೆ ಮುಂದೂಡಿತು.
Basangouda Patil Yatnal and Karnataka HC
Basangouda Patil Yatnal and Karnataka HC
Published on

“ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ವಿರುದ್ಧದ ಪ್ರಕರಣ ವಿಚಾರಣೆಗಾಗಿಯೇ ಒಂದು ದಿನ ಮೀಸಲಿಡಬೇಕು” ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಮೌಖಿಕವಾಗಿ ಲಘು ದಾಟಿಯಲ್ಲಿ ಹೇಳಿತು. ಯತ್ನಾಳ್‌ ತಮ್ಮ ವಿರುದ್ಧ ರಾಜ್ಯದ ಬೇರೆಬೇರೆ ಠಾಣೆಗಳಲ್ಲಿ ದಾಖಲಾಗಿರುವ ಮೂರು ಪ್ರಕರಣ ರದ್ದತಿ ಕೋರಿರುವ ಅರ್ಜಿಗಳನ್ನು ಉಲ್ಲೇಖಿಸಿ ಪೀಠವು ಮೇಲಿನಂತೆ ಹೇಳಿತು.

ಧಾರವಾಡ ಜಿಲ್ಲೆಯ ಕುಂದಗೋಳ ಠಾಣೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಭಾಷಣ ಮಾಡಿದ ಆರೋಪದ ಸಂಬಂಧ ಯತ್ನಾಳ್‌ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇದೇ ಸಂದರ್ಭದಲ್ಲಿ ರದ್ದುಪಡಿಸಿತು.

ಅಲ್ಪಕಾಲ ಯತ್ನಾಳ್‌ ಪರ ವಕೀಲ ವೆಂಕಟೇಶ್‌ ದಳವಾಯಿ ಅವರ ವಾದ ಆಲಿಸಿದ ಪೀಠವು “ದೂರು ದಾಖಲಿಸುವಾಗ ವಿವೇಚನೆಯನ್ನೇ ಬಳಸಲಾಗಿಲ್ಲ” ಎಂದು ಪ್ರಕರಣ ರದ್ದುಪಡಿಸಿತು.

ಈ ಹಿಂದೆ ಯತ್ನಾಳ್‌ ಸಂಬಂಧಿತ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಪೀಠವು ಅವರ ಪರ ವಕೀಲ ವೆಂಕಟೇಶ್‌ ದಳವಾಯಿ ಅವರಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ತಮ್ಮ ಕಕ್ಷಿದಾರರಿಗೆ ಸೂಚಿಸಬೇಕು ಎಂದು ಮೌಖಿಕವಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರಕರಣದ ಹಿನ್ನೆಲೆ: ಟಿಪ್ಪು ಸುಲ್ತಾನ್‌ ಹರಾಮಕೋರನಾಗಿದ್ದು, ಲಕ್ಷಾಂತರ ಹಿಂದೂಗಳು ಕೊಲೆ ಮಾಡಿದ್ದಾನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ರಾಮ ಪಂಚಾಯಿತಿಗಳಲ್ಲಿ ಹಾಕಿರುವ ಟಿಪ್ಪು ಸುಲ್ತಾನ್‌ ಫೋಟೊಗಳನ್ನು ಕಿತ್ತು ಹಾಕಲು ಆದೇಶಿಸಲಾಗುವುದು ಎಂದು 01-05-2023ರಂದು ಬಿಜೆಪಿ ಅಭ್ಯರ್ಥಿ ಎಂ ಆರ್‌ ಪಾಟೀಲ್‌ ಪರವಾಗಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿ ಯತ್ನಾಳ್‌ ಹೇಳಿದ್ದರು ಎಂದು ಆರೋಪಿಸಿ ಯತ್ನಾಳ್‌ ವಿರುದ್ಧ ಕುಂದಗೋಳ ಠಾಣೆಯಲ್ಲಿ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ಗಳಾದ 123(3A),125 ಅಡಿ ಪ್ರಕರಣ ದಾಖಲಿಸಲಾಗಿತ್ತು.

Also Read
ಹಿಂದೂಗಳಿಂದ ಕಾಂಗ್ರೆಸ್‌ ಬಹಿಷ್ಕಾರ ಹೇಳಿಕೆ: ಯತ್ನಾಳ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಇನ್ನು, ಕಳೆದ ಲೋಕಸಭಾ ಚುನಾವಣೆಯ ವೇಳೆ ದ್ವೇಷ ಭಾಷಣ ಮಾಡಿದ ಆರೋಪದ ಸಂಬಂಧ ಕಲಬುರ್ಗಿ ನಗರದ ರೋಜಾ ಠಾಣೆಯಲ್ಲಿ ದಾಖಲಾಗಿರುವ ಐಪಿಸಿ ಸೆಕ್ಷನ್‌ 505(2) ಅಡಿ ಪ್ರಕರಣ ಮತ್ತು “ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಯಾವ ಜಾತಿಗೆ ಹುಟ್ಟಿದ್ದಾರೆ. ಮುಸ್ಲಿಮ್‌ಗೋ, ಕ್ರಿಶ್ಚಿಯನ್‌ಗೋ” ಎಂದು ಕೋಮು ದ್ವೇಷ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 192,196,353(2) ಅಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಹೈಕೋರ್ಟ್‌ ನವೆಂಬರ್‌ 28ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com