ಖಾಸಗಿ ವಲಯದ ಸಿಬ್ಬಂದಿಯ ವಾಹನಗಳಿಗೆ ಬಿಎಚ್‌ ಸೀರೀಸ್‌ ನೋಂದಣಿ ಎತ್ತಿ ಹಿಡಿದ ಹೈಕೋರ್ಟ್‌ನ ವಿಭಾಗೀಯ ಪೀಠ

“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನಗಳ ಕಾಯಿದೆ ನಿಬಂಧನೆಗಳ ಅಡಿ ವಾಹನ ನೋಂದಣಿ ಮಾಡಿಸಿದ ಬಳಿಕ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹಿಸಬಹುದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
Chief Justice P B Varale and Justice M G S Kamal
Chief Justice P B Varale and Justice M G S Kamal

ಭಾರತ್‌ (ಬಿಎಚ್‌) ಸೀರೀಸ್‌ ವಾಹನಗಳ ನೋಂದಣಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿರುವುದರಿಂದ ಖಾಸಗಿ ವಲಯದ ಉದ್ಯೋಗಿಗಳು ನಿಟ್ಟುಸಿರು ಬಿಡುವಂತಾಗಿದೆ.

ಬಿಎಚ್‌ ಸೀರೀಸ್‌ ಅಡಿ ಖಾಸಗಿ ವಲಯದ ಉದ್ಯೋಗಿಗಳ ವಾಹನಗಳ ನೋಂದಣಿಗೆ ಅನುಮತಿಸಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೋಟಾರು ವಾಹನಗಳ ಕಾಯಿದೆ ನಿಬಂಧನೆಗಳ ಅಡಿ ವಾಹನ ನೋಂದಣಿ ಮಾಡಿಸಿದ ಬಳಿಕ ರಾಜ್ಯ ಸರ್ಕಾರವು ತೆರಿಗೆ ಸಂಗ್ರಹಿಸಬಹುದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಕೇಂದ್ರೀಯ ಮೋಟಾರು ವಾಹನಗಳ ಕಾಯಿದೆಗೆ (20ನೇ ತಿದ್ದುಪಡಿ) ತಿದ್ದುಪಡಿ ಮಾಡಿ, ಆ ಮೂಲಕ ನಿಯಮಗಳನ್ನು ಬದಲಾವಣೆ ಮಾಡಿ, ಮೋಟಾರು ವಾಹನಗಳನ್ನು ಬಿಎಚ್‌ ಸೀರೀಸ್‌ ಮೂಲಕ ನೋಂದಣಿ ಮಾಡಲು, ಮೋಟಾರು ವಾಹನ ತೆರಿಗೆ ವಿಧಿಸಲು ಅವಕಾಶ ಮಾಡಿ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಹೀಗಿರುವಾಗ ರಾಜ್ಯ ಸರ್ಕಾರವು ಕೇಂದ್ರದ ಅಧಿಸೂಚನೆಯನ್ನು ಜಾರಿ ಮಾಡುವುದಿಲ್ಲ ಎಂದು ವಾದಿಸಲಾಗದು. ಈ ನಿಲುವಿಗೆ ಕಾನೂನಿನ ಯಾವುದೇ ನಿಬಂಧನೆಯ ಬೆಂಬಲವಿಲ್ಲ” ಎಂದು ಪೀಠವು ಹೇಳಿದೆ.

2021ರ ಆಗಸ್ಟ್‌ 26ರಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯು ನೂತನ ಮೋಟಾರು ವಾಹನಗಳಿಗೆ ಬಿಎಚ್‌ ಸೀರೀಸ್‌ ಮಾರ್ಕ್‌ ಪರಿಚಯಿಸಿತ್ತು. ಇದರ ಪ್ರಕಾರ ವಾಹನದ ಮಾಲೀಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆರಳಿದರೆ ಹೊಸ ನೋಂದಣಿ ಮಾರ್ಕ್‌ ಹಾಕುವ ಅಗತ್ಯವಿಲ್ಲ. ಈ ಸೌಲಭ್ಯವನ್ನು ಸ್ವಯಂಪ್ರೇರಿತವಾಗಿ ರಕ್ಷಣಾ ಸಿಬ್ಬಂದಿ, ಕೇಂದ್ರ/ರಾಜ್ಯ ಸರ್ಕಾರದ ಉದ್ಯೋಗಿಗಳು, ಕೇಂದ್ರ/ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು, ನಾಲ್ಕು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಚೇರಿ ಹೊಂದಿರುವ ಖಾಸಗಿ ವಲಯದ ಕಂಪೆನಿ/ಸಂಸ್ಥೆಗಳ ಉದ್ಯೋಗಿಗಳಿಗೆ ಕಲ್ಪಿಸಲಾಗಿದೆ.

ಆದರೆ, 2021ರ ಡಿಸೆಂಬರ್‌ 20ರಂದು ರಾಜ್ಯ ಸಾರಿಗೆ ಇಲಾಖೆಯು ಖಾಸಗಿ ವಲಯದ ಉದ್ಯೋಗಿಗಳನ್ನು ಈ ವಲಯದಿಂದ ಬೇರ್ಪಡಿಸಿ ಅಧಿಸೂಚನೆ ಹೊರಡಿಸಿತ್ತು. ಹೀಗಾಗಿ, ಹಲವು ಮಂದಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದನ್ನು ಪುರಸ್ಕರಿಸಿದ್ದ ಏಕಸದಸ್ಯ ಪೀಠವು ಖಾಸಗಿ ಕಂಪೆನಿಗಳ ಉದ್ಯೋಗಿಗಳ ವಾಹನವನ್ನು ಬಿಎಚ್‌ ಸೀರೀಸ್‌ ಅಡಿ ನೋಂದಣಿ ಮಾಡುವಂತೆ ಆದೇಶಿಸಿತ್ತು.

ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ರಾಜ್ಯ ಸರ್ಕಾರ ತೆರಿಗೆ ಸಂಗ್ರಹಿಸುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಾಗಿದೆ. ಸಂವಿಧಾನದ ಷೆಡ್ಯೂಲ್‌ 7, ಲಿಸ್ಟ್‌ 2, ಎಂಟ್ರಿ 57ರ ಅಡಿ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ವಿಶೇಷ ವ್ಯಾಪ್ತಿ ಇದೆ. ಮೋಟಾರು ವಾಹನಗಳ ನಿಯಮಗಳ ಮೂಲಕ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ರಾಜ್ಯ ಸರ್ಕಾರದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ರಾಜ್ಯ ಸರ್ಕಾರ ವಾದಿಸಿತ್ತು.

Attachment
PDF
Transport Department Vs Ranjith K P.pdf
Preview
Kannada Bar & Bench
kannada.barandbench.com