
ಕೊಲೆ ಪ್ರಕರಣದಲ್ಲಿ ತಮ್ಮನ್ನು ದೋಷಿಗಳೆಂದು ಘೋಷಿಸಿದ್ದನ್ನು ಪ್ರಶ್ನಿಸಿ ಸಹೋದರರಿಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಘೋರ ಅಪರಾಧಗಳ ಕುರಿತು ತೀರ್ಪು ನೀಡುವಾಗ ನ್ಯಾಯಾಧೀಶರುಗಳು ನಿರ್ಭಾವುಕರಾಗಿರಬೇಕು ಮತ್ತು ವೈಯಕ್ತಿಕ ಮಾನಸಿಕ ಹೊರೆಗಳಿಂದ ಮುಕ್ತರಾಗಿರಬೇಕು ಎಂದು ಸಲಹೆ ನೀಡಿದೆ.
ನ್ಯಾಯಮೂರ್ತಿಗಳಾದ ಸುನಿಲ್ ದತ್ ಯಾದವ್ ಮತ್ತು ಪಿ ಕೃಷ್ಣ ಭಟ್ ಅವರಿದ್ದ ನ್ಯಾಯಪೀಠ ಹೀಗೆ ಅಭಿಪ್ರಾಯಪಟ್ಟಿದೆ:
ಅಲ್ಲದೆ ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಎನ್. ಕಾರ್ಡೊಜೊ ಅವರು ಹಿಂದೊಮ್ಮೆ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ, ”ನ್ಯಾಯಾಧೀಶರಿಗೆ ತನ್ನದೇ ಆದ 'ನಿಲುವು' ಇರುವುದಿಲ್ಲ. ನ್ಯಾಯಾಧೀಶರಿಗಿರುವ ಏಕೈಕ 'ನಿಲುವು', ಅಥವಾ 'ಆಯ್ಕೆ' ಎಂದರೆ ಅನ್ವಯಿಸಬಹುದಾದ ಶಾಸನಗಳು ಮತ್ತು ಇತ್ಯರ್ಥಗೊಂಡ ಪ್ರಕರಣಗಳಿಂದ ಸ್ಫೂರ್ತಿ ಪಡೆದು ತನ್ನ ಮುಂದಿರುವ ಸಾಕ್ಷ್ಯಗಳ ʼಸಂಚಿತ ಪರಿಣಾಮʼಕ್ಕೆ ಬಲ ನೀಡುವುದಾಗಿದೆ” ಎಂದು ಪೀಠ ಹೇಳಿದೆ.
ಘಟನೆಯ ಹಿನ್ನೆಲೆ
ಕೌಟುಂಬಿಕ ದೌರ್ಜನ್ಯ ಎನ್ನಲಾಗಿದ್ದ ಘಟನೆಯಲ್ಲಿ ಗರ್ಭಿಣಿ ಲಕ್ಷ್ಮೀ ಎಂಬುವವರು 2013ರಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಯಂಕಪ್ಪ ಮತ್ತು ಹನುಮಂತ ಹಿರೇಕುರುಬೂರು ಅವರನ್ನು ಬಂಧಿಸಲಾಗಿತ್ತು. 2014ರಲ್ಲಿ ನೀಡಿದ್ದ ತೀರ್ಪಿನ ಪ್ರಕಾರ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 34 ರೊಂದಿಗೆ ಸೆಕ್ಷನ್ 302 (ಕೊಲೆ) ಮತ್ತು 498 ಎ (ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಜೊತೆಗಿರಿಸಿ ನೋಡಿ ಆರೋಪಿಗಳು ತಪ್ಪಿತಸ್ಥರು ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ನ್ಯಾಯಾಲಯ ಹೇಳಿದ್ದೇನು?
ಗರ್ಭಿಣಿಯಾಗಿದ್ದ ಮಹಿಳೆಗೆ ವಿನಾಕಾರಣ ದುರಂತ ಸಾವು ಒದಗಿತ್ತು ಎಂಬುದು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರನ್ನು ತಲ್ಲಣಗೊಳಿಸಿತ್ತು. ಸಾಕ್ಷ್ಯಗಳ ಸರಪಳಿಯ ಹಲವು ಕೊಂಡಿಗಳು ಇಲ್ಲದೇ ಇದ್ದರೂ ಸಮಂಜಸ ಅನುಮಾನಗಳನ್ನೂ ಮೀರಿ ತಪ್ಪು ಸಾಬೀತಾಗಿದೆ ಎಂಬ ನಿರ್ಧಾರಕ್ಕೆ ನ್ಯಾಯಾಧೀಶರು ಬಂದಿರುವದನ್ನು ಪೀಠ ಗಮನಿಸಿತು.
ಪ್ರಧಾನ ಸಾಕ್ಷಿ ಪ್ರಕರಣಕ್ಕೆ ಪ್ರತಿಕೂಲವಾಗಿದೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷ್ಯ ಕೇವಲ ಸಾಂದರ್ಭಿಕವಾಗಿದೆ ಎಂದು ಅಭಿಪ್ರಾಯಪಟ್ಟ ಪೀಠವು, ಅಧೀನ ನ್ಯಾಯಾಲಯ ಮೃತರ ಸಾವಿನ ಕಾರಣವನ್ನು ಊಹಿಸಿಕೊಳ್ಳುವಂತಿಲ್ಲ ಎಂದು ಸ್ಪಷ್ಟಪಡಿಸಿತು. ಆ ಮೂಲಕ ಸೆಷನ್ಸ್ ನ್ಯಾಯಾಲಯವು ನಿಡಿದ್ದ ತೀರ್ಪನ್ನು ಬದಿಗೆ ಸರಿಸಿ ಸಹೋದರರಿಬ್ಬರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿತು.