
“ನ್ಯಾಯಮೂರ್ತಿಯಾಗಿ ತಾನು ಕಟುವಾಗಿ ನಡೆದುಕೊಂಡಿರುವುದು ಸಂವಿಧಾನದಲ್ಲಿ ಅಳವಡಿಸಿರುವ ತತ್ವಗಳನ್ನು ಎತ್ತಿಹಿಡಿಯುವುದನ್ನು ಖಾತರಿಪಡಿಸಲು ಮಾತ್ರ” ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹೇಳಿದರು.
ವೃತ್ತಿ ಬದುಕಿನ ಕೊನೆಯ ದಿನವಾದ ಇಂದು ವಿಧ್ಯುಕ್ತ ಪೀಠದಲ್ಲಿ ವಕೀಲ ಸಮುದಾಯದಿಂದ ಹರಿದುಬಂದ ಅಭಿನಂದನೆಯ ಮಹಾಪೂರ ಸ್ವೀಕರಿಸಿ ಅವರು ಮಾತನಾಡಿದರು.
“ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವ ಪ್ರಯತ್ನದಲ್ಲಿ ಕೆಲವು ವಕೀಲರನ್ನು ನೋಯಿಸರಬಹುದು. ಆದರೆ, ನ್ಯಾಯಮೂರ್ತಿಯು ಯಾರನ್ನಾದರೂ ನೋಯಿಸುವುದರಿಂದ ಹಿಂದೆ ಸರಿಯಬಾರದು. “ನನ್ನದು ಪ್ರಾಮಾಣಿಕ ಪ್ರಯತ್ನವಾಗಿದ್ದು, ಈ ಪ್ರಯತ್ನದಲ್ಲಿ ನಾನು ಇಬ್ಬರು ವಕೀಲರನ್ನು ನೋಯಿಸಿರಬಹುದು. ನ್ಯಾಯಮೂರ್ತಿಯಾದವರು ಯಾವಾಗಲೂ ಅತ್ಯಂತ ದೃಢವಾಗಿಯೂ, ನಿಷ್ಠುರವಾಗಿಯೂ ಇರಬೇಕು ಎಂದು ನಂಬಿದ್ದು, ಯಾರನ್ನೇ ಆಗಲಿ ನೋಯಿಸಲು ನ್ಯಾಯಮೂರ್ತಿ ಹಿಂಜರಿಯಬಾರದು” ಎಂದರು.
“ಈ ಪೀಠದಲ್ಲಿ ಕುಳಿತಿದ್ದ ಓರ್ವ ಮಹನೀಯ ನ್ಯಾಯಮೂರ್ತಿಯೊಬ್ಬರು ನನಗೆ “ನೀವು ಜನಪ್ರಿಯವಾಗಲು ನ್ಯಾಯಮೂರ್ತಿಯಾಗಬಾರದು” ಎಂದು ಸಲಹೆ ನೀಡಿದ್ದರು. ಆ ಸಲಹೆಯನ್ನು ನಾನು ಸಂಪೂರ್ಣವಾಗಿ ಪಾಲಿಸಿದ್ದೇನೆ. ಸಂವಿಧಾನದಲ್ಲಿ ಅಡಕಗೊಳಿಸಿರುವ ತತ್ವಗಳನ್ನು ಎತ್ತಿಹಿಡಿಯುವ ಏಕೈಕ ಕಾರಣಕ್ಕಾಗಿ ನಾನು ಕಠೋರವಾಗಿದ್ದೆ” ಎಂದು ಹೇಳಿದರು.
“ಈ ನ್ಯಾಯಾಲಯ ಮಾತ್ರ ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲಿದೆ ಎಂದು ನಾನು ನಂಬಿದ್ದೇನೆ. ಅದುವೇ ನನ್ನ ಪ್ರಾಮಾಣಿಕ ಪ್ರಯತ್ನವಾಗಿತ್ತು. ಈ ನ್ಯಾಯಾಲಯವು ಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ ಎಂದು ನನಗೆ ನಂಬಿಕೆ ಇದೆ. ಏಕೆಂದರೆ ಸಂವಿಧಾನ ರಚನಕಾರರ ಕನಸೇ ಅದಾಗಿತ್ತು” ಎಂದರು.
“ನನಗೆ ಮಾತುಗಳೇ ಬರುತ್ತಿಲ್ಲ. ಹೃದಯಾಂತರಾಳದಿಂದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಈ ನ್ಯಾಯಾಲಯದಲ್ಲಿ ದೊರೆತ ನೆನಪುಗಳನ್ನು ಜತನವಾಗಿ ಕಾಪಿಟ್ಟುಕೊಳ್ಳುತ್ತೇನೆ” ಎಂದರು.
ಇದಕ್ಕೂ ಮುನ್ನ, ಕಾನೂನು ವಲಯದ ಹಲವು ಖ್ಯಾತನಾಮರು ನ್ಯಾ. ಓಕಾ ಅವರ ಗುಣಗಾನ ಮಾಡಿದರು. ಈ ಪೈಕಿ ಅಟಾರ್ನಿ ಜನರಲ್ ಕೆ ವೆಂಕಟರಮಣಿ ಅವರು “ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ನಿಮ್ಮ ಕುಟುಂಬದ ನೋವಿನಲ್ಲಿ ನಾವು ಭಾಗಿಯಾಗುತ್ತೇವೆ. ತಾಯಿಯ ಆತ್ಮಕ್ಕೆ ಶಾಂತಿ ದೊರೆಯಲಿ. ಪರಿಸರ ಕುರಿತಾದ ವಿಚಾರಗಳಿಗೆ ನೀವು ಸ್ಪಂದಿಸಿರುವ ಕಾರಣಕ್ಕಾಗಿ ನಿಮ್ಮ ನೆನಪು ಸದಾ ಉಳಿಯಲಿದೆ. ಮಾನವ ಕಳಕಳಿ ವಿಚಾರದಲ್ಲಿ ಹಲವು ಪಾಠಗಳನ್ನು ನೀವು ಕಲಿಸಿದ್ದೀರಿ. ಆಡಳಿತ ಮತ್ತು ಸಮುದಾಯದ ದೃಷ್ಟಿಯಿಂದ ಅವು ಒಳ್ಳೆಯವು. ನಿಮ್ಮ ನ್ಯಾಯಾಲಯದಲ್ಲಿ ಎಲ್ಲರಿಗೂ ಒಂದೇ ರೀತಿಯ ಉಪಚಾರ ದೊರೆತಿದೆ.. ಅವಿಶ್ರಾಂತವಾಗಿ ನೀವು ಮಾಡಿರುವ ಕೆಲಸಕ್ಕೆ ವಿನಮ್ರವಾಗಿ ಧನ್ಯವಾದ ಸಲ್ಲಿಸುತ್ತೇವೆ. ತಮಾಷೆಗೆ ಹೇಳಬೇಕೆಂದರೆ ಅವಿಶ್ರಾಂತವಾಗಿ ನೀವು ಕೆಲಸ ಮಾಡುವ ಮೂಲಕ ನಿಮ್ಮ ಕಾನೂನು ಗುಮಾಸ್ತರಿಗೆ ಕೆಟ್ಟ ಮಾನದಂಡ ರೂಪಿಸಿದ್ದೀರಿ, ಅವರು ಮನೆಗೆ ಹೋಗುವುದನ್ನೇ ಮರೆತ ದಿನಗಳಿವೆ!” ಎಂದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ಇಂಥ ಕಷ್ಟದ ಸಂದರ್ಭದಲ್ಲೂ ನೀವು ನ್ಯಾಯಮೂರ್ತಿ ಕರ್ತವ್ಯವನ್ನು ಮೊದಲು ಮಾಡಿದಿರಿ. ಕರ್ತವ್ಯವನ್ನು ಮುಂದೆ ಮಾಡುವ ಈ ಗುಣವನ್ನು ನಾವೆಲ್ಲರೂ ಕಲಿಯಬೇಕಿದೆ… ಅಗತ್ಯವಿದ್ದಾಗಲೆಲ್ಲಾ ದಿಟ್ಟ ನಿಲುವು ತೆಗೆದುಕೊಂಡ ನ್ಯಾಯಮೂರ್ತಿಯಾಗಿ ನೀವು ಸದಾ ನೆನಪಿನಲ್ಲಿ ಉಳಿಯುತ್ತೀರಿ” ಎಂದು ನೆನೆದರು.
ಸುಪ್ರೀಂ ಕೋರ್ಟ್ ವಕೀಲರ ಪರಿಷತ್ (ಎಸ್‌ಸಿಬಿಎ) ನೂತನ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಓಕಾ ಅವರ ನ್ಯಾಯಾಲಯದಲ್ಲಿ “ವಕೀಲರು ತಮ್ಮ ಪ್ರಕರಣದಲ್ಲಿ ಗೆಲುವು ಸಾಧಿಸದಿದ್ದರೂ ಕೂಡ ನ್ಯಾಯದಾನವಾಗಿಲ್ಲ ಎಂದು ಭಾವಿಸುತ್ತಿರಲಿಲ್ಲ” ಎಂದರು.
ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಹಿರಿಯ ವಕೀಲ ವಿಪಿನ್ ನಾಯರ್ ಅವರು “ಓಕಾ ಅವರು ಹುಟ್ಟಿನಿಂದಲೇ ನ್ಯಾಯಮೂರ್ತಿಯಾದವರು, ತಮ್ಮ ವೃತ್ತಿ ಬದುಕಿನುದ್ದಕ್ಕೂ ನ್ಯಾ. ಓಕಾ ಅವರು ದೈವಿಕ ನ್ಯಾಯ ಒದಗಿಸಿದ್ದಾರೆ” ಎಂದರು.
ಎಸ್‌ಸಿಬಿಎಯಿಂದ ಶೀಘ್ರ ನಿರ್ಗಮಿಸಲಿರುವ ಅಧ್ಯಕ್ಷ, ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಅಭಿನಂದನೆ ಸಲ್ಲಿಸಿ “ಈ ಸಂಸ್ಥೆಯ ಮೂಲಕ ಸ್ವಾತಂತ್ರ್ಯದ ರಕ್ಷಣೆಗೆ ಟೊಂಕ ಕಟ್ಟಿ ನಿಂತ ನ್ಯಾಯಮೂರ್ತಿಗಳನ್ನು ನೆನಪಿಸಿಕೊಳ್ಳಲಾಗುತ್ತದೆ. ನೀವು ಅದರ ಸಂಕೇತವಾಗಿದ್ದೀರಿ. ಈ ನ್ಯಾಯಾಲಯದಲ್ಲಿ ನೀವು ಬೇರೆ ಇನ್ನಾರೂ ರಕ್ಷಿಸದ ರೀತಿಯಲ್ಲಿ ಸ್ವಾತಂತ್ರ್ಯದ ರಕ್ಷಣೆ ಮಾಡಿದ್ದೀರಿ. ನೀವು ನೀವಿರುವಂತೆ ಈ ಹಿಂದೆ ಮತ್ತು ಈಗಲೂ ಇರುವುದಕ್ಕೆ ಧನ್ಯವಾದಗಳು” ಎಂದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು “ತೀರ್ಪು ನನ್ನ ವಿರುದ್ಧವಾಗಿದೆ ಎಂದು ನಾನೆಂದೂ ಭಾವಿಸಿಲ್ಲ. ನ್ಯಾಯದಾನವಾಗಿದೆ ಎಂದು ಭಾವಿಸಿದ್ದೇನೆ” ಎಂದರು.
ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರು “ನಿಮ್ಮಂಥ ಕೆಲವರು ಮಾತ್ರ ಹೆಸರಿಗೆ ಅನ್ವರ್ಥವಾಗಿರುತ್ತಾರೆ. ಅಭಯ್ ಎಂದರೆ ನಿರ್ಭೀತ, ಓಕಾ ಎಂದರೆ ಎಲ್ಲರಿಗೂ ಆಶ್ರಯದಾತನಾಗುವುದು. ಅತ್ಯುತ್ತಮ ನ್ಯಾಯಮೂರ್ತಿಯೊಬ್ಬರು ಹೇಗಿರಬೇಕು ಎಂದು ತೋರಿಸಿದ್ದೀರಿ. ಎಂಸಿ ಮೆಹ್ತಾದಂಥ ಪ್ರಕರಣಗಳ ಮೂಲಕ ನಮಗೆ ಪಾಠ ಹೇಳಿರುವುದಕ್ಕೆ ನಿಮಗೆ ಧನ್ಯವಾದ” ಎಂದರು.
ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು “ನ್ಯಾಯಮೂರ್ತಿಯೊಬ್ಬರು ತಮ್ಮ ಪ್ರಮಾಣವಚನಕ್ಕೆ ಬದ್ಧವಾಗಿರಬೇಕಾದ ರೀತಿಯಲ್ಲಿಯೇ ನೀವು ನಡೆದುಕೊಂಡಿದ್ದೀರಿ. ಭಯ ಅಥವಾ ಪಕ್ಷಪಾತ ಇಲ್ಲದೇ ಕೆಲಸ ಮಾಡಿದ್ದೀರಿ. ಆತ್ಮಸಾಕ್ಷಿ ಅನುಗುಣವಾಗಿ ನಡೆದುಕೊಂಡಿದ್ದೀರಿ ಎಂದರು. ನ್ಯಾ. ಓಕಾ ಅವರ ವಿಚಾರಣೆಯೊಂದನ್ನು ನೆನಪಿಸಿಕೊಂಡ ಅವರು ನ್ಯಾಯಮೂರ್ತಿಯಾದವರಿಗೆ ಇರಬೇಕಾದದ್ದು ಬೆನ್ನುಮೂಳೆ, ಬೆನ್ನುಮೂಳೆ ಮತ್ತು ಬೆನ್ನುಮೂಳೆ ಮಾತ್ರವೇ ಎಂಬ ಹೇಳಿಕೆಯನ್ನು ನೆನಪಿಸಿಕೊಂಡರು. ಅದಕ್ಕೆ ನೀವು ಅನ್ವರ್ಥವಾಗಿದ್ದೀರಿ” ಎಂದರು.
ಅಂತಿಮವಾಗಿ ನ್ಯಾ. ಓಕಾ ಅವರು “ವಕೀಲರನ್ನು ನಾನು ನಿರ್ಬಂಧಿಸದೆ ಇದ್ದ ಮೊದಲ ಮತ್ತು ಕೊನೆಯ ದಿನ ಇದಾಗಿದೆ” ಎಂದು ಧನ್ಯವಾದ ಅರ್ಪಿಸಿದರು.