ಸರ್ಕಾರ ಕೆಡವಲು ₹1,000 ಕೋಟಿ ಯೋಜನೆ ಆರೋಪ: ಯತ್ನಾಳ್‌ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಯತ್ನಾಳ್‌ ಅವರ ಹೇಳಿಕೆಯಲ್ಲಿ ಪ್ರಚೋದನೆ ಉಂಟು ಮಾಡಿ ಗಲಭೆಗೆ ಕಾರಣವಾಗುತ್ತದೆ ಎಂಬ ಅಂಶ ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದ್ದೇನೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅಭಿಪ್ರಾಯಪಟ್ಟರು.
Basangouda Patil Yatnal and Karnataka HC
Basangouda Patil Yatnal and Karnataka HC
Published on

ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಹಾಲಿ ಸರ್ಕಾರವನ್ನು ಕೆಡವಲು ₹1,000 ಕೋಟಿ ವೆಚ್ಚದಲ್ಲಿ ಯೋಜನೆ ಸಿದ್ದವಾಗಿದೆ ಎಂಬ ಹೇಳಿಕೆಯ ಮೂಲಕ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಅಡಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.

ದಾವಣಗೆರೆಯ ಗಾಂಧಿ ನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದತಿ ಕೋರಿ ಬಸನಗೌಡ ಪಾಟೀಲ್​ ಯತ್ನಾಳ್​ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಯತ್ನಾಳ್‌ ಅವರ ಹೇಳಿಕೆಯಲ್ಲಿ ಪ್ರಚೋದನೆ ಉಂಟು ಮಾಡಿ ಗಲಭೆಗೆ ಕಾರಣವಾಗುತ್ತದೆ ಎಂಬ ಅಂಶ ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಫಲವಾಗಿದ್ದೇನೆ. ಪ್ರಕರಣ ದಾಖಲಿಸಬೇಕು ಎಂಬುದಕ್ಕಾಗಿ ದಾಖಲಿಸಲಾಗಿದೆ. ಯಾವುದೇ ಅಂಶಗಳು ಇಲ್ಲದಿದ್ದರೂ ತನಿಖೆಗೆ ಮುಂದುವರಿಸಲು ಅನುಮತಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಯತ್ನಾಳ್​ “ಮಹಾನ್​ ನಾಯಕರೊಬ್ಬರು ರಾಜ್ಯದಲ್ಲಿ ಹಾಲಿ ಇರುವ ಸರ್ಕಾರ ಕೆಡವಲು ₹1,000 ಕೋಟಿ ಯೋಜನೆ ರೂಪಿಸಿದ್ದಾರೆ. ಈ ಹಣವನ್ನು ಬಳಸಿ ಕಾಂಗ್ರೆಸ್‌ ಶಾಸಕರನ್ನು ಖರೀದಿಸಿ, ತಾವು ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದ್ದಾರೆ. ಆ ಮಹಾನ್​ ನಾಯಕ ಯಾರು ಎಂಬುದು ನಿಮಗೆ ಗೊತ್ತಿದೆ. ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ” ಎಂದಿದ್ದರು.

ಇದನ್ನು ಆಧರಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಅವರು 2024 ರ ಸೆಪ್ಟೆಂಬರ್ 1ರಂದು ದಾವಣಗೆರೆಯ ಗಾಂಧಿನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಬಿಎನ್‌ಐ ಸೆಕ್ಷನ್‌ 192 (ಐಪಿಸಿ ಸೆಕ್ಷನ್‌ 153) ಅಡಿ ಎಫ್ಐಆರ್ ದಾಖಲಿಸಿದ್ದರು.

Attachment
PDF
Basanagouda Patil Vs State of Karnataka
Preview
Kannada Bar & Bench
kannada.barandbench.com