ವಸತಿರಹಿತರಿಗೆ ಮನೆ ನಿರ್ಮಿಸುವ 1,017 ಕೋಟಿ ರೂಪಾಯಿ ಯೋಜನೆ ಪ್ರಶ್ನಿಸಿದ್ದ ಪಿಐಎಲ್‌ ವಜಾ

ಅರ್ಜಿಯನ್ನು ಕಾಟಾಚಾರಕ್ಕೆ ಸಲ್ಲಿಸಲಾಗಿದೆ. ನಿಯಮಗಳನ್ನು ಪಾಲಿಸಿಲ್ಲ ಎಂದು ಬೇಸರಿಸಿದ ನ್ಯಾಯಾಲಯ. ಹೀಗಾಗಿ, ಅರ್ಜಿಯಲ್ಲಿ ಯಾವುದೇ ವಿಚಾರಣಾರ್ಹತೆ ಇಲ್ಲ. ಜೊತೆಗೆ ನಿಯಮಗಳನ್ನು ಪಾಲನೆ ಮಾಡದ ಕಾರಣ ವಜಾಗೊಳಿಸುತ್ತಿರುವುದಾಗಿ ಹೇಳಿದ ಪೀಠ.
High Court of Karnataka
High Court of Karnataka

ಹಾಸನ ಜಿಲ್ಲೆಯ ಭುವನಹಳ್ಳಿ, ಕೆಂಚನಹಳ್ಳಿ, ಸಮುದ್ರದಳ್ಳಿ ಮತ್ತಿತರ ಗ್ರಾಮಗಳಲ್ಲಿ ವಸತಿರಹಿತರಿಗೆ ಮನೆ ನಿರ್ಮಿಸುವ 1,017 ಕೋಟಿ ರೂಪಾಯಿ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಅಡುವಳ್ಳಿಯ ಅಭಿಷೇಕ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಅರ್ಜಿದಾರರು ನಿಯಮ ಪಾಲಿಸದೆ, ತಮ್ಮ ಬಗ್ಗೆ ವಿವರ ನೀಡದ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.

ಅರ್ಜಿದಾರರ ವಾದ ಆಲಿಸಿದ ಬಳಿಕ ನ್ಯಾಯಾಲಯವು ಪಿಐಎಲ್ ಸಲ್ಲಿಸುವ ಸಂಬಂಧ ಹೈಕೋರ್ಟ್ 2018ರಲ್ಲಿ ನಿಯಮಗಳನ್ನು ರೂಪಿಸಿದ್ದು, ಅವು 2019ರಿಂದ ಜಾರಿಗೆ ಬಂದಿವೆ. ಅದರಂತೆ ಅರ್ಜಿದಾರರು ತಮ್ಮ ಹೆಸರು, ಇಮೇಲ್ ವಿಳಾಸ, ವೃತ್ತಿ, ಹಿನ್ನೆಲೆ, ಆದಾಯದ ಮೂಲ ಸೇರಿದಂತೆ ಸಮಗ್ರ ವಿವರಗಳನ್ನು ಒಳಗೊಂಡ ಅಫಿಡವಿಟ್‌ ಅನ್ನು ಸಲ್ಲಿಸಬೇಕಿತ್ತು. ಆದರೆ ಅರ್ಜಿಯಲ್ಲಿ ಹೆಸರು ಬಿಟ್ಟರೆ ಬೇರೆ ಯಾವುದೇ ವಿವರಗಳನ್ನು ನೀಡಿಲ್ಲ ಎಂದಿತು.

ಅರ್ಜಿದಾರರು ಯಾವ ಹಿನ್ನೆಲೆ, ವಿವರಗಳನ್ನು ನೀಡದ ಕಾರಣ ಅವರು ಯಾವ ಉದ್ದೇಶದಿಂದ ಪಿಐಎಲ್ ಸಲ್ಲಿಸಿದ್ದಾರೆ, ಅವರ ಹಿತಾಸಕ್ತಿ ಏನು ಎಂಬ ಮಾಹಿತಿ ದೊರಕಿಲ್ಲ. ನಿಯಮದ ಪ್ರಕಾರ ಪಿಐಎಲ್ ಸಲ್ಲಿಸುವ ಮುನ್ನ, ಅರ್ಜಿದಾರರು ಯಾವ ವಿಷಯದ ಬಗ್ಗೆ ಅರ್ಜಿ ಸಲ್ಲಿಸಲು ಬಯಸುತ್ತಾರೋ ಆ ವಿಷಯದ ಬಗ್ಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿರಬೇಕು. ಆದರೆ, ಈ ಪ್ರಕರಣದಲ್ಲಿ ಪಿಐಎಲ್ ಸಲ್ಲಿಸಿದ ನಂತರ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಪೀಠ ಹೇಳಿದೆ.

ಅರ್ಜಿಯನ್ನು ಕಾಟಾಚಾರಕ್ಕೆ ಸಲ್ಲಿಸಲಾಗಿದೆ. ನಿಯಮಗಳನ್ನು ಪಾಲಿಸಿಲ್ಲ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು. ಹೀಗಾಗಿ, ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ. ಜೊತೆಗೆ ನಿಯಮಗಳನ್ನು ಪಾಲನೆ ಮಾಡದ ಕಾರಣ ವಜಾಗೊಳಿಸುತ್ತಿರುವುದಾಗಿ ಪೀಠ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು, ಭುವನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ವಸತಿ ರಹಿತರಿಗಾಗಿ 1,070 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಅದನ್ನು ರದ್ದುಗೊಳಿಸಬೇಕು, ಆ ಸಂಬಂಧ ಕೈಗೊಂಡಿರುವ ನಿರ್ಣಯಗಳನ್ನು ಅನೂರ್ಜಿತಗೊಳಿಸಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.

Related Stories

No stories found.
Kannada Bar & Bench
kannada.barandbench.com