ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ಡಿ. 22ರ ಒಳಗೆ ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್‌ ಗಡುವು

ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶವನ್ನು ಬೆಂಗಳೂರು ವಕೀಲರ ಸಂಘ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.
Vakeelara Bhavana, AAB
Vakeelara Bhavana, AAB

ಅವಧಿ ಪೂರ್ಣಗೊಂಡಿರುವ ಬೆಂಗಳೂರು ವಕೀಲರ ಸಂಘದ (ಎಎಬಿ) ಕಾರ್ಯಕಾರಿ ಸಮಿತಿಗೆ ಡಿಸೆಂಬರ್‌ 22ರ ಒಳಗೆ ಚುನಾವಣೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಸಂಘದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ 2021ರ ಸೆಪ್ಟೆಂಬರ್‌ 4ರಂದು ಸಹಕಾರ ಇಲಾಖೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಆದೇಶ ಮಾಡಿದೆ.

ಚುನಾವಣೆ ನಡೆಸಲು ಎನ್ ಎಸ್ ಸತ್ಯನಾರಾಯಣ ಗುಪ್ತಾ ಅವರ ಅಧ್ಯಕ್ಷತೆಯಲ್ಲಿ 7 ಸದಸ್ಯರನ್ನೊಳಗೊಂಡ ಉನ್ನತಾಧಿಕಾರ ಸಮಿತಿ ರಚನೆ ಮಾಡಿರುವ ಹೈಕೋರ್ಟ್, ಈ ಸಮಿತಿಯೇ 2021ರ ಡಿಸೆಂಬರ್‌ 22ರೊಳಗೆ ಎಎಬಿ ಕಾರ್ಯಕಾರಿ ಸಮಿತಿಗೆ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸಬೇಕು. ಸಂಘದ ಚುನಾವಣೆ ವಿಚಾರದಲ್ಲಿ ಉನ್ನತ ಮಟ್ಟದ ಸಮಿತಿಯು ರಾಜ್ಯ ಚುನಾವಣಾ ಆಯೋಗದಂತೆಯೇ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದೆ.

ಉನ್ನತ ಮಟ್ಟದ ಸಮಿತಿ ಚುನಾವಣೆಗೆ ಸಂಬಂಧಿಸಿದ ಎಲ್ಲ ಪರಿಕರಗಳನ್ನು ತಕ್ಷಣವೇ ವಶಕ್ಕೆ ಪಡೆಯಬೇಕು. ಸಂಘದ ಹಾಲಿ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಗತ್ಯವಿರುವ ಸಿಬ್ಬಂದಿ, ಹಣ ಸೇರಿ ಎಲ್ಲ ಸೌಲಭ್ಯಗಳನ್ನು ಸಮಿತಿಗೆ ಒದಗಿಸಬೇಕು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಸಮಿತಿ ಸಿಸಿ ಕ್ಯಾಮರಾ ಅಳವಡಿಕೆ, ಫೊಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿಸಬಹುದು. ಉನ್ನತ ಮಟ್ಟದ ಸಮಿತಿಗೆ ಸರ್ಕಾರ ಅಗತ್ಯ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಚುನಾವಣೆ ನಡೆಸುವವರೆಗೂ ಹಾಲಿ ಕಾರ್ಯಕಾರಿ ಸಮಿತಿಯು ಸೀಮಿತ ಅಧಿಕಾರದೊಂದಿಗೆ ತಾತ್ಕಾಲಿಕ ಸಮಿತಿಯಾಗಿ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿದೆ.

ಎಸ್‌ ಪಿ ಶಶಿಧರ್‌ ಮತ್ತು ಇತರರು ಕಳೆದ ಫೆಬ್ರವರಿ 26ರಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಚುನಾವಣೆ ನಡೆಸಬೇಕು ಎಂದು ಕೋರಿದ್ದರು. “ಸಂಘದ ಬೈಲಾದ ಪ್ರಕಾರ ಸದ್ಯದ ಆಡಳಿತ ಮಂಡಳಿಯ ಅಧಿಕಾರ ಮುಗಿದಿದ್ದು, ಹೊಸ ಆಡಳಿತ ಮಂಡಳಿ ರಚಿಸುವ ಸಂಬಂಧ ಚುನಾವಣೆ ನಡೆಸದಿರುವುದು ಬೈಲಾಕ್ಕೆ ವಿರುದ್ಧವಾಗಿದೆ. ವಕೀಲರ ಕುಂದು-ಕೊರತೆ ಆಲಿಸಲು ಮತ್ತು ಅದನ್ನು ಬಗೆಹರಿಸಲು ಆಡಳಿತ ಮಂಡಳಿ ಅವಶ್ಯಕತೆ ಇರುತ್ತದೆ. ಸಂಘದ ಹಣ ದುರ್ಬಳಕೆಯಾಗುವುದನ್ನು ತಡೆಯಲು ಮತ್ತು ಸಂಘದ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ತರಲು ಚುನಾವಣೆ ನಡೆಸಬೇಕು” ಎಂದು ಮನವಿ ಮಾಡಲಾಗಿತ್ತು.

Also Read
ಬೆಂಗಳೂರು ವಕೀಲರ ಸಂಘಕ್ಕೆ ನಗರ ಜಿಲ್ಲಾಧಿಕಾರಿ ಮಂಜುನಾಥ್‌ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿದ ರಾಜ್ಯ ಸರ್ಕಾರ

ವಕೀಲ ಎ ಪಿ ರಂಗನಾಥ್ ಅಧ್ಯಕ್ಷತೆಯ ಬೆಂಗಳೂರು ವಕೀಲರ ಸಂಘದ ಹಾಲಿ ಕಾರ್ಯಕಾರಿ ಸಮಿತಿಯ ಅಧಿಕಾರವಧಿ 2021ರ ಜನವರಿ 23ಕ್ಕೆ ಪೂರ್ಣಗೊಂಡಿತ್ತು. ಅವಧಿ ಪೂರ್ಣಗೊಂಡ ನಂತರವೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆ ನಿರ್ವಹಿಸಲು ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿತ್ತು.

ಬೆಂಗಳೂರು ವಕೀಲರ ಸಂಘದಲ್ಲಿ 20 ಸಾವಿರಕ್ಕೂ ಅಧಿಕ ನೋಂದಾಯಿತ ವಕೀಲರಿದ್ದಾರೆ. ಇಡೀ ದೇಶದಲ್ಲಿ ಅತಿದೊಡ್ಡ‌ ವಕೀಲರ ಸಂಘ ಎಂಬ ಹಿರಿಮೆಗೂ ಸಂಘವು ಪಾತ್ರವಾಗಿದೆ. ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ಒಳಗೊಂಡು 29 ಸದಸ್ಯರನ್ನು ಕಾರ್ಯಕಾರಿ ಸಮಿತಿ ಒಳಗೊಂಡಿದೆ.

Related Stories

No stories found.
Kannada Bar & Bench
kannada.barandbench.com