ವಿದೇಶಿ ವಕೀಲರು, ಕಾನೂನು ಸಂಸ್ಥೆಗಳಿಗೆ ದೇಶದೊಳಗೆ ಪ್ರಾಕ್ಟೀಸ್ ಮಾಡಲು ಆಕ್ಷೇಪ; ಬಿಸಿಐಗೆ ಎಎಬಿ ಮಾಜಿ ಅಧ್ಯಕ್ಷರ ಪತ್ರ

ವಿದೇಶಿ ವಕೀಲರು, ವಿದೇಶಿ ಕಾನೂನು ಸಂಸ್ಥೆಗಳಿಗೆ ದೇಶದಲ್ಲಿ ಪ್ರಾಕ್ಟೀಸ್‌ ಮಾಡಲು ಅವಕಾಶ ನೀಡುವುದಕ್ಕೆ ನಮ್ಮ ಗಂಭೀರ ಆಕ್ಷೇಪವಿದ್ದು, ವಿದೇಶಿ ಕಾನೂನು ಸಂಸ್ಥೆಗಳು ಭಾರತದಲ್ಲಿನ ಕಾನೂನು ವೃತ್ತಿಯನ್ನು ನಿಯಂತ್ರಿಸಬಹುದು ಎಂದು ಪತ್ರದಲ್ಲಿ ಆತಂಕ.
BCI
BCI

ವಿದೇಶಿ ವಕೀಲರು ಮತ್ತು ವಿದೇಶಿ ಕಾನೂನು ಸಂಸ್ಥೆಗಳ ನೋಂದಣಿ ಮತ್ತು ನಿಯಂತ್ರಣ-2022 ಅಧಿಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರಿಗೆ ಬೆಂಗಳೂರು ವಕೀಲರ ಸಂಘದ (ಎಎಬಿ) ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಪತ್ರ ಬರೆದಿದ್ದಾರೆ.

ಯಾವುದೇ ರೀತಿಯ ಸಮಾಲೋಚನೆ ನಡೆಸದೇ, ವಕೀಲರು ಅಥವಾ ವಕೀಲರ ಸಂಸ್ಥೆಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೆ ಈ ನಿರ್ಧಾರ ತಳೆದಿರುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದ್ದು, ದೇಶಾದ್ಯಂತ ವಕೀಲರ ಧ್ವನಿ ಅಡಗಿಸುವ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಬಿಸಿಐ ರೂಪಿಸಿರುವ ನಿಯಮಗಳು ಮೇಲ್ನೋಟಕ್ಕೆ ವಕೀಲರ ಸಂಘದ ನಿಬಂಧನೆಗಳು ಉಲ್ಲಂಘಿಸುತ್ತವೆ ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.

ವಿದೇಶಿ ವಕೀಲರು/ ವಿದೇಶಿ ಕಾನೂನು ಸಂಸ್ಥೆಗಳು ಭಾರತದಲ್ಲಿ ಪ್ರಾಕ್ಟೀಸ್‌ ಮಾಡಲು ಅವಕಾಶ ನೀಡುವುದಕ್ಕೆ ನಮ್ಮ ಗಂಭೀರ ಆಕ್ಷೇಪವಿದ್ದು, ವಿದೇಶಿ ಕಾನೂನು ಸಂಸ್ಥೆಗಳು ಭಾರತದಲ್ಲಿನ ಕಾನೂನು ವೃತ್ತಿಯನ್ನು ನಿಯಂತ್ರಿಸಬಹುದು. ಇದು ಭಾರತದಲ್ಲಿ ಕಾನೂನು ವೃತ್ತಿಯನ್ನು ಮತ್ತಷ್ಟು ಕಾರ್ಪೊರೇಟೀಕರಣಗೊಳಿಸುವ ಮೂಲಕ ಮಾರಾಟದ ಸರಕನ್ನಾಗಿಸಲಿದೆ. ಇದು ಶ್ರೀಮಂತ ವಕೀಲರು ಮತ್ತು ಸಮರ್ಥರಾದರೂ ಅಷ್ಟೇನು ಸ್ಥಿತಿವಂತರಲ್ಲದ ವಕೀಲರ ನಡುವಿನ ಕಂದರವನ್ನು ಮತ್ತಷ್ಟು ಆಳವಾಗಿಸಲಿದೆ. ಭಾರತದ ಕಾನೂನು ಪದವೀಧರರು ವಿದೇಶದಲ್ಲಿ ಹಲವು ಅಡ್ಡಿ, ಆತಂಕಗಳನ್ನು ಇದರಿಂದ ಎದುರಿಸಲಿದ್ದಾರೆ. ಈ ನಡುವೆ ಬಿಸಿಐಯು ವಿದೇಶಿ ಕಾನೂನು ಸಂಸ್ಥೆಗಳಿಗೆ ಕೆಂಪು ಹಾಸು ಹಾಕುತ್ತಿದ್ದು, ಇದು ನಮ್ಮ ಕಾನೂನು ಸಮುದಾಯಕ್ಕೆ ಎರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಹೀಗಾಗಿ, ಎಲ್ಲರೊಂದಿಗೆ ಸಮಾಲೋಚನೆ ನಡೆಸಿ, ವಿದೇಶಿ ವಕೀಲರ ಪ್ರಾಕ್ಟೀಸ್‌ ಮತ್ತು ಭಾರತದಲ್ಲಿ ಕಾನೂನು ಸಂಸ್ಥೆ ಹೊಂದುವುದಕ್ಕೆ ಅತೀವ ನಿಯಂತ್ರಿತ ಮತ್ತು ನಿರ್ಬಂಧಿತ ಪ್ರವೇಶ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com