![[ನ್ಯಾಯಮೂರ್ತಿಗಳ ಹುದ್ದೆಗೆ ಪದೋನ್ನತಿ] ಕೊಲಿಜಿಯಂ ಶಿಫಾರಸ್ಸಿನಲ್ಲಿ ಒಬಿಸಿ ಸಮುದಾಯದ ಕಡೆಗಣನೆ: ಸಿಜೆಗೆ ಎಎಬಿ ಪತ್ರ](http://media.assettype.com/barandbench-kannada%2F2022-01%2F3e296a37-6212-43cc-8ada-70d8a323d3ff%2Fbarandbench_kannada_2021_09_4767f187_d242_42f9_9a46_bbb4fc5d30ee_barandbench_kannada_2021_09_f8311b4.jpeg?w=480&auto=format%2Ccompress&fit=max)

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಹುದ್ದೆಗೆ ನೇಮಕ ಮಾಡಲು, ಹೈಕೋರ್ಟ್ ಕೊಲಿಜಿಯಂನಿಂದ ಶಿಫಾರಸ್ಸುಗೊಂಡಿರುವ 10 ಜನ ವಕೀಲರ ಪಟ್ಟಿಯಲ್ಲಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯನ್ನು ಕಡೆಗಣಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರಿಗೆ ಬೆಂಗಳೂರು ವಕೀಲರ ಸಂಘವು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ.
“ವಕೀಲ ವೃಂದದಿಂದ ನೇಮಕಗೊಳ್ಳುವ 10 ಜನರ ಶಿಫಾರಸ್ಸು ಪಟ್ಟಿಯನ್ನು, ಕರ್ನಾಟಕ ಹೈಕೋರ್ಟ್ ಕೊಲಿಜಿಯಂ ಕಳೆದ ವಾರ ಸುಪ್ರಿಂ ಕೋರ್ಟ್‌ಗೆ ಕಳುಹಿಸಿದೆ. ಈ ಪ್ರಸ್ತಾವಿತ ಪಟ್ಟಿಯಲ್ಲಿ ಒಬ್ಬರೇ ಒಬ್ಬರೂ ಒಬಿಸಿ ಸಮುದಾಯದವರಿಲ್ಲ” ಎಂದು ಎಎಬಿ ಮಾಧ್ಯಮ ಹೇಳಿಕೆಯಲ್ಲಿ ವಿವರಿಸಲಾಗಿದೆ.
“ಇದರಿಂದ ರಾಜ್ಯದಲ್ಲಿ ಶೇಕಡಾ 25ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ಒಬಿಸಿ ಸಮುದಾಯಕ್ಕೆ ಅನ್ಯಾಯ ಎಸಗಲಾಗಿದೆ. ಭಾರತದ ಸಂವಿಧಾನದ ಅಡಿಯಲ್ಲಿ ಕೊಡಮಾಡಿರುವ 15 ಮತ್ತು 16ನೇ ವಿಧಿಗಳ ಪ್ರಯೋಜನವನ್ನು ಉಪೇಕ್ಷಿಸಿದಂತಾಗಿದೆ. ಕರ್ನಾಟಕ ಹೈಕೋರ್ಟ್ ಕೊಲಿಜಿಯಂ, ಸಾರ್ವಜನಿಕ ಕಾಳಜಿಯ ಮನೋಭಾವ ಹೊಂದಿದ ನ್ಯಾಯಮೂರ್ತಿಗಳನ್ನು ಹೊಂದಿದೆ. ಇಂತಹ ಕೊಲಿಜಿಯಂ, ಒಬಿಸಿಯಂತಹ ಸಮುದಾಯದಿಂದ ಸ್ಪರ್ಧಾತ್ಮಕ ಅಭ್ಯರ್ಥಿಗಳನ್ನು ಪಡೆಯಲು ಯಾಕೆ ಪ್ರಯತ್ನ ಮಾಡಿಲ್ಲ” ಎಂದು ಪ್ರಶ್ನಿಸಲಾಗಿದೆ.
“ಜಿಲ್ಲಾ ನ್ಯಾಯಾಧೀಶರ ಕೋಟಾ ಹಿರಿತನದ ಮೂಲಕ ಕಾರ್ಯ ನಿರ್ವಹಿಸುತ್ತದೆ. ಆದರೆ, ವಕೀಲ ವೃಂದದಿಂದ ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಈಡೇರಿಸಬೇಕಾಗುತ್ತದೆ. ಈ ಸೂಕ್ಷ್ಮ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಶೈಕ್ಷಣಿಕ, ಆರ್ಥಿಕ ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚು ಅಗತ್ಯವಿರುವ ಸಮಾನತೆ ನೀಡಬೇಕು. ಅತ್ಯಂತ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯದ ಕೊರತೆಯನ್ನು ಸರಿಪಡಿಸಬೇಕು. ಈ ದಿಸೆಯಲ್ಲಿ ಒಬಿಸಿ ವಿಭಾಗದಲ್ಲಿ ಲಭ್ಯವಿರುವ ಇಬ್ಬರು ಪ್ರತಿಭಾವಂತರನ್ನು ಹೆಚ್ಚುವರಿ ಅಭ್ಯರ್ಥಿಗಳಾಗಿ ಪರಿಗಣಿಸಿ ನೇಮಕಾತಿಗಾಗಿ ಕೂಡಲೇ ಶಿಫಾರಸ್ಸು ಮಾಡಬೇಕು” ಎಂದು ಮನವಿ ಮಾಡಲಾಗಿದೆ.
ಎಎಬಿ ಅಧ್ಯಕ್ಷ ವಿವೇಕ್ ರೆಡ್ಡಿ, ಉಪಾಧ್ಯಕ್ಷ ಸಿ ಎಸ್ ಗಿರೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್ ವಿ ಪ್ರವೀಣ್ ಗೌಡ ಮತ್ತು ಖಜಾಂಚಿ ಶ್ವೇತಾ ರವಿಶಂಕರ್ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ.