ಬೆಂಗಳೂರು ವಕೀಲರ ಸಂಘದ ಚುನಾವಣೆ ಫೆಬ್ರವರಿ 16ಕ್ಕೆ; ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮ್ಯಾಜಿಸ್ಟ್ರೇಟ್‌ ಮತ್ತು ಮೆಯೋ ಹಾಲ್‌ ಘಟಕಗಳಲ್ಲಿ ಮಹಿಳಾ ವಕೀಲರಿಗೆ ಮೀಸಲಿರಿಸಿರುವ ಸದಸ್ಯ ಸ್ಥಾನ ಹೊರತುಪಡಿಸಿ ಉಳಿದ ಸ್ಥಾನಗಳನ್ನು 'ಮುಕ್ತ ವಿಭಾಗʼ ಎಂದು ವಿಂಗಡಿಸಲಾಗಿದೆ.
AAB
AAB
Published on

ಬೆಂಗಳೂರು ವಕೀಲರ ಸಂಘದ (ಎಎಬಿ) 2025-28ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆಗೆ ಫೆಬ್ರವರಿ 16ಕ್ಕೆ ಚುನಾವಣೆ ನಿಗದಿಪಡಿಸಿರುವ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಯು ಗುರುವಾರ ಪರಿಷ್ಕೃತ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಈ ಹಿಂದೆ ಫೆಬ್ರವರಿ 2ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಸುಪ್ರೀಂ ಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು.

ಇಂದಿನಿಂದ ಸಿಟಿ ಸಿವಿಲ್‌ ಕೋರ್ಟ್‌ನ ವಕೀಲರ ಭವನದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು (ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ಪುರುಷ ಅಭ್ಯರ್ಥಿಗಳನ್ನು ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಯ ಸ್ಪರ್ಧೆಗೆ ಮಾತ್ರ ವರ್ಗಾಯಿಸಲಾಗುತ್ತದೆ) ನಾಮಪತ್ರ ಸಲ್ಲಿಕೆಗೆ ಫೆಬ್ರವರಿ 2 (ಸಂಜೆ 4 ಗಂಟೆ) ಕೊನೆಯ ದಿನವಾಗಿದೆ. ಫೆಬ್ರವರಿ 4ರಂದು ನಾಮಪತ್ರಗಳ ಪರಿಶೀಲನೆ ನಡೆಸಿ, ಸಂಜೆ ವೇಳೆಗೆ ಸಿಂಧುವಾದ ಉಮೇದುವಾರಿಕೆ ಪ್ರಕಟಿಸಲಾಗುತ್ತದೆ. ಫೆಬ್ರವರಿ 6 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಫೆಬ್ರವರಿ 16ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮ್ಯಾಜಿಸ್ಟ್ರೇಟ್‌ ಮತ್ತು ಮೆಯೊ ಹಾಲ್‌ ಘಟಕಗಳಲ್ಲಿ ಮಹಿಳಾ ವಕೀಲರಿಗೆ ಮೀಸಲಿರಿಸಿರುವ ಸದಸ್ಯ ಸ್ಥಾನ ಹೊರತುಪಡಿಸಿ ಉಳಿದ ಸ್ಥಾನಗಳನ್ನು ʼಮುಕ್ತ ವಿಭಾಗʼ ಎಂದು ವಿಂಗಡಿಸಲಾಗಿದೆ. ಈ ವಿಭಾಗದಲ್ಲಿ ಮಹಿಳಾ ವಕೀಲರು ಸಹ ಸ್ಪರ್ಧಿಸಬಹುದಾಗಿದೆ.

ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮ್ಯಾಜಿಸ್ಟ್ರೇಟ್‌ ಮತ್ತು ಮೆಯೋ ಹಾಲ್‌ ಘಟಕಗಳಲ್ಲಿನ ಮಹಿಳಾ ಸದಸ್ಯರಿಗೆ ಮೀಸಲಾಗಿರುವ ಹುದ್ದೆಗಳಿಗೆ ಪ್ರತ್ಯೇಕವಾಗಿ ಮತದಾನ ನಡೆಯಲಿದೆ. ಹೀಗಾಗಿ, ಮಹಿಳೆಯರಿಗೆ ಮೀಸಲಾಗಿರುವ ಸ್ಥಾನಗಳಿಗೆ ಪ್ರತ್ಯೇಕ ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತದಾನ ಮಾಡಬೇಕು.

ಮಹಿಳೆಯರಿಗೆ ಮೀಸಲಾಗಿರುವ ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆದವರನ್ನು ನಿಗದಿತ ಘಟಕಗಳಲ್ಲಿ ವಿಜೇತರು ಎಂದು ಘೋಷಿಸಲಾಗುತ್ತದೆ. ಮಹಿಳೆಯರಿಗೆ ಮೀಸಲಾದ ಕ್ಷೇತ್ರಗಳಿಗೆ ಮತದಾನವು ಪ್ರತ್ಯೇಕವಾಗಿರಲಿದ್ದು, ಮುಕ್ತ ವಿಭಾಗದಲ್ಲಿ ಸ್ಪರ್ಧಿಸುವವರೊಂದಿಗೆ ಅದನ್ನು ಬೆರೆಸಲಾಗುವುದಿಲ್ಲ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರು 12 ವರ್ಷ ಎಎಬಿ ಸದಸ್ಯರಾಗಿರಬೇಕು; ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸ ಬಯಸುವವರು 10 ವರ್ಷ ಸದಸ್ಯತ್ವ ಹೊಂದಿರಬೇಕು; ಉಪಾಧ್ಯಕ್ಷ ಮತ್ತು ಖಜಾಂಚಿ ಹುದ್ದೆಗೆ ಸ್ಪರ್ಧೆ ಬಯಸುವವರು 8 ವರ್ಷ ಸದಸ್ಯರಾಗಿರಬೇಕು; ಸದಸ್ಯರಾಗಲು ಬಯಸುವವರು 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಸದಸ್ಯರಾಗಿರಬೇಕು.

ಎಎಬಿ 22ನೇ ಬೈಲಾ ಸಂಖ್ಯೆಯ ಪ್ರಕಾರ ಸತತ ಎರಡು ಅವಧಿಗೆ ನಿರ್ದಿಷ್ಟ ಹುದ್ದೆ ನಿಭಾಯಿಸಿದ್ದರೆ ಮತ್ತದೇ ಹುದ್ದೆಗೆ ಸ್ಪರ್ಧಿಸಲು ಅವಕಾಶವಿರುವುದಿಲ್ಲ.

Also Read
ಎಎಬಿ ಚುನಾವಣೆ: ಉಪಾಧ್ಯಕ್ಷ ಹುದ್ದೆ ಸೃಷ್ಟಿ, ಸದಸ್ಯರ ಸಂಖ್ಯೆ 29ರಿಂದ 38ಕ್ಕೆ ಹೆಚ್ಚಿಸಿದ ಸುಪ್ರೀಂ ಕೋರ್ಟ್‌

ಅಧ್ಯಕ್ಷ ಹುದ್ದೆ ಆಕಾಂಕ್ಷಿಗಳು ₹1 ಲಕ್ಷ, ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಗಳು ₹25 ಸಾವಿರ, ಉಪಾಧ್ಯಕ್ಷ ಮತ್ತು ಖಜಾಂಚಿ ಹುದ್ದೆಯ ಆಕಾಂಕ್ಷಿಗಳು ₹50 ಸಾವಿರ, ಸದಸ್ಯ ಸ್ಥಾನದ ಆಕಾಂಕ್ಷಿಗಳು ₹25 ಸಾವಿರ ಮೌಲ್ಯದ ಡಿಡಿಯನ್ನು ಎಎಬಿ ಬೆಂಗಳೂರು ಹೆಸರಿನಲ್ಲಿ ತೆಗೆದು ನಾಮಪತ್ರದೊಂದಿಗೆ ಸಲ್ಲಿಸಬೇಕು.

ಜನವರಿ 28ರಂದು ಎಎಬಿಯಲ್ಲಿ ಉಪಾಧ್ಯಕ್ಷ ಸ್ಥಾನ ಸೃಜಿಸುವುದಲ್ಲದೇ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನಾಲ್ಕು ಘಟಕಗಳಲ್ಲಿ 9 ಸದಸ್ಯರ ಸಂಖ್ಯೆ ಹೆಚ್ಚಿಸಲು ಅನುಮತಿಸಿ ಮೂರು ವಾರಗಳಲ್ಲಿ ಚುನಾವಣೆ ನಡೆಸುವಂತೆ ಉನ್ನತಾಧಿಕಾರ ಸಮಿತಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಇದಕ್ಕೂ ಮುನ್ನ, ಸುಪ್ರೀಂ ಕೋರ್ಟ್‌ ಜನವರಿ 24ರಂದು ಎಎಬಿ ಖಜಾಂಚಿ ಹುದ್ದೆಯನ್ನು ಮಹಿಳೆಯರಿಗೆ ಮೀಸಲಿರಿಸಿ ಆದೇಶಿಸಿತ್ತು. ಹೀಗಾಗಿ, ಉನ್ನತಾಧಿಕಾರ ಸಮಿತಿಯು ಚುನಾವಣೆಯನ್ನು ಮುಂದೂಡಿತ್ತು.

Kannada Bar & Bench
kannada.barandbench.com