ಜನನ-ಮರಣ ನೋಂದಣಿ ತಿದ್ದುಪಡಿ ಕಾಯಿದೆ ವಿರೋಧಿಸಿ  ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ

ಜನನ-ಮರಣ ನೋಂದಣಿ ತಿದ್ದುಪಡಿ ಕಾಯಿದೆ ವಿರೋಧಿಸಿ ಬೆಂಗಳೂರು ವಕೀಲರ ಸಂಘದ ಪ್ರತಿಭಟನೆ

ಜನನ ಮರಣ ನೋಂದಣಿ ತಿದ್ದುಪಡಿ ಕಾಯಿದೆ ಹಿಂಪಡೆಯಲು ಆಗ್ರಹಿಸಿ ಈಗಾಗಲೇ ಕಾನೂನು ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ.

ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ ವ್ಯಾಜ್ಯವನ್ನು ವಿಚಾರಣೆ ನಡೆಸುವ ಹಾಗೂ ನಿರ್ಧರಿಸುವ ಅಧಿಕಾರವನ್ನು ನ್ಯಾಯಾಲಯಗಳಿಂದ ಉಪವಿಭಾಗಾಧಿಕಾರಿಗೆ ವರ್ಗಾಯಿಸುವ ಕುರಿತು ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರು ವಕೀಲರ ಸಂಘವು ಶುಕ್ರವಾರ ಪ್ರತಿಭಟನೆ ನಡೆಸಿತು.

ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಿಂದ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ವಕೀಲರು ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿವೇಕ್ ಸುಬ್ಬಾರೆಡ್ಡಿ ಅವರು “ಕರ್ನಾಟಕ ಜನನ ಮತ್ತು ಮರಣ ನೋಂದಣಿ ಕಾಯಿದೆಯ ನಿಯಮಗಳಿಗೆ ತಿದ್ದುಪಡಿ ತಂದು 2022ರ ಜುಲೈ 18ರಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರ ಪ್ರಕಾರ ಜನನ ಮತ್ತು ಮರಣ ನೋಂದಣಿಗೆ ಸಂಬಂಧಿಸಿದ ವ್ಯಾಜ್ಯವನ್ನು ನಿರ್ಧರಿಸುವ ಅಧಿಕಾರವನ್ನು ನ್ಯಾಯಾಲಯದಿಂದ ಉಪ ವಿಭಾಗಾಧಿಕಾರಿಗೆ ವರ್ಗಾಯಿಸಲಾಗಿದೆ” ಎಂದರು.

“ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷನ್ 13(3)ರ ಅಡಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರವಿಲ್ಲ. ಸರ್ಕಾರದ ಅಧಿಸೂಚನೆಯಿಂದ ವೃತ್ತಿಪರ ವಕೀಲರಿಗೆ ತೊಂದರೆಯಾಗಲಿದೆ. ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ, ಸರ್ಕಾರ ಕೂಡಲೇ ಅಧಿಸೂಚನೆಯನ್ನು ಹಿಂಪಡೆಯಬೇಕು. ಈ ಸಂಬಂಧ ಈಗಾಗಲೇ ಕಾನೂನು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ” ಎಂದರು.

ಜಾಥಾದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಖಜಾಂಜಿ ಎಂ ಟಿ ಹರೀಶ್ ಸೇರಿದಂತೆ ಅನೇಕ ವಕೀಲರು ಭಾಗಹಿಸಿದ್ದರು.

ಸಚಿವರಿಗೆ ಮನವಿ ಸಲ್ಲಿಕೆ: ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯಿದೆ ಹಿಂಪಡೆಯುವಂತೆ ಕೋರಿ ತೋಟಗಾರಿಕೆ ಹಾಗೂ ಸಾಂಖ್ಯಿಕ ಸಚಿವ ವಿ ಮುನಿರತ್ನ ಅವರಿಗೂ ಶುಕ್ರವಾರ ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರ ನಿಯೋಗವು ಮನವಿ ಸಲ್ಲಿಸಿದೆ.

ಎಐಎಲ್‌ಯುವಿನಿಂದ ಪ್ರತಿಭಟನೆ: ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರ ನೇತೃತ್ವದಲ್ಲಿ ಎಐಎಲ್‌ಯು ವತಿಯಿಂದ ನಗರದ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

Related Stories

No stories found.
Kannada Bar & Bench
kannada.barandbench.com