ಬಿಗ್‌ ಬಾಸ್‌ ಸ್ಪರ್ಧಿ ಜಗದೀಶ್‌ರನ್ನು ವಕೀಲ ಎಂದು ಸಂಬೋಧಿಸದಿರಲು ಎಎಬಿ ಮನವಿ; ತಪ್ಪಿದಲ್ಲಿ ಸೂಕ್ತ ಕ್ರಮದ ಎಚ್ಚರಿಕೆ

ಹಿಂದೆಯೇ ಜಗದೀಶ್‌ ವಕೀಲಿಕೆಗೆ ಕೆಎಸ್‌ಬಿಸಿ ನಿರ್ಬಂಧಿಸಿದೆ. ಇತ್ತೀಚೆಗೆ ದೆಹಲಿ ವಕೀಲರ ಪರಿಷತ್ ಅವರ ವಿರುದ್ಧ ಕ್ರಮಕೈಗೊಂಡಿರುವುದರಿಂದ ಕಾರ್ಯಕ್ರಮದಲ್ಲಿ ಜಗದೀಶ್‌ರನ್ನು ವಕೀಲ ಅಥವಾ ವಕೀಲ್‌ ಸಾಬ್‌ ಎಂದು ಸಂಬೋಧಿಸಬಾರದು ಎಂದು ಕೋರಲಾಗಿದೆ.
Jagadish K N Mahadev
Jagadish K N Mahadev
Published on

ಬಿಗ್‌ ಬಾಸ್‌ 11ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿರುವ ಕೆ ಎನ್‌ ಜಗದೀಶ್‌ ಕುಮಾರ್‌ ಅವರ ವಕೀಲಿಕೆ ಪರವಾನಗಿಯನ್ನು ದೆಹಲಿಯ ವಕೀಲರ ಪರಿಷತ್‌ನ ನೋಂದಣಿ ಸಮಿತಿಯು ರದ್ದುಪಡಿಸಿದ್ದು ಅದನ್ನು ಭಾರತೀಯ ವಕೀಲರ ಪರಿಷತ್‌ ಅನುಮೋದಿಸಿರುವುದರಿಂದ ಅವರನ್ನು ವಕೀಲರು ಎಂದು ಸಂಬೋಧಿಸಬಾರದು. ತಪ್ಪಿದ್ದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಕಲರ್ಸ್‌ ಕನ್ನಡ ವಾಹಿನಿಯ ಮುಖ್ಯಸ್ಥರಿಗೆ ಬೆಂಗಳೂರು ವಕೀಲರ ಸಂಘವು ಪತ್ರ ಬರೆದಿದೆ.

ಹಿಮಾಂಶು ಭಾಟಿ ವರ್ಸಸ್ ಕೆ ಎನ್‌ ಜಗದೀಶ್‌ ಕುಮಾರ್‌ ದೂರಿನ ಪ್ರಕರಣದಲ್ಲಿ 2024ರ ಮಾರ್ಚ್‌ 23ರಂದು ದೆಹಲಿ ವಕೀಲರ ಪರಿಷತ್‌ನ ನೋಂದಣಿ ಸಮಿತಿಯು ಜಗದೀಶ್‌ ಅವರ ನೋಂದಣಿ ರದ್ದುಪಡಿಸಿದ್ದು, ಏಪ್ರಿಲ್‌ 5ರಂದು ಅದನ್ನು ಭಾರತೀಯ ವಕೀಲರ ಪರಿಷತ್‌ ಅನುಮೋದಿಸಿದೆ. ಜಗದೀಶ್‌ ಅವರ 12ನೇ ತರಗತಿ ಪ್ರಮಾಣ ಪತ್ರ ನಕಲಿಯಾಗಿದೆ. ಹೀಗಾಗಿ, ಅದರ ಬೆನ್ನಿಗೇ ಅವರು ಪಡೆದಿರುವ ಕಾನೂನು ಪದವಿಯೂ ಅಸಿಂಧುವಾಗಲಿದೆ ಎಂದು ದೆಹಲಿ ವಕೀಲರ ಪರಿಷತ್‌ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಬೆಂಗಳೂರು ವಕೀಲರ ಸಂಘವು ಪತ್ರದೊಂದಿಗೆ ಲಗತ್ತಿಸಿದೆ.

Also Read
[ಜಾತಿ ನಿಂದನೆ ಪ್ರಕರಣ] ಜೈಲಿನಲ್ಲೇ ಜಗದೀಶ್‌ ವಿಚಾರಣೆಗೆ ಅನುಮತಿಸಿದ ನ್ಯಾಯಾಲಯ; ನ್ಯಾಯಾಂಗ ಬಂಧನ ಮುಂದುವರಿಕೆ

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಬಹು ಹಿಂದೆಯೇ ಜಗದೀಶ್‌ ವಕೀಲಿಕೆಗೆ ನಿರ್ಬಂಧ ವಿಧಿಸಿದೆ. ಇತ್ತೀಚೆಗೆ ದೆಹಲಿ ವಕೀಲರ ಸಂಘವು ಅವರ ವಿರುದ್ಧ ಕ್ರಮಕೈಗೊಂಡಿರುವುದರಿಂದ ಕಾರ್ಯಕ್ರಮದಲ್ಲಿ ಜಗದೀಶ್‌ ಅವರನ್ನು ವಕೀಲ ಅಥವಾ ವಕೀಲ್‌ ಸಾಬ್‌ ಎಂದು ಸಂಬೋಧಿಸಬಾರದು. ಆ ಮೂಲಕ ವೃತ್ತಿ ಘನತೆಗೆ ಚ್ಯುತಿ ಉಂಟು ಮಾಡಬಾರದು. ಈ ಸಂಬಂಧ ಕಾರ್ಯಕ್ರಮದ ಇತರೆ ಸ್ಪರ್ಧಿಗಳಲ್ಲೂ ಅರಿವು ಮೂಡಿಸಬೇಕು. ತಪ್ಪಿದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

ವಕೀಲರಲ್ಲದ ವ್ಯಕ್ತಿಯ ಹಿನ್ನೆಲೆ ಪರಿಶೀಲಿಸದೇ ತಮ್ಮ ಚಾನಲ್‌ನಲ್ಲಿ ಅವರನ್ನು ವಕೀಲರು ಎಂದು ಬಿಂಬಿಸುತ್ತಿರುವುದು ವಕೀಲರ ಸಂಘದ ಸದಸ್ಯರು ಮತ್ತು ವಕೀಲ ವೃಂದಕ್ಕೆ ನೋವು ಉಂಟು ಮಾಡಿದೆ. ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತದೆ ಎಂದು ವಿವರಿಸಲಾಗಿದೆ.

ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತಿದೊಡ್ಡ ಸಂಘವಾಗಿದ್ದು, 25 ಸಾವಿರ ಸದಸ್ಯರನ್ನು ಒಳಗೊಂಡಿದೆ. ಸಂಘವು ಸಮಾಜದಲ್ಲಿ ಘನತೆ ಮತ್ತು ಗೌರವ ಕಾಪಾಡಿಕೊಂಡು ಬಂದಿದೆ. ಇಂಥ ಸಂಸ್ಥೆಗೆ ಯಾವುದೇ ವ್ಯಕ್ತಿ ಮಸಿ ಬಳಿಯಲು ಪ್ರಯತ್ನಪಟ್ಟರೆ ಅದನ್ನು ಸಹಿಸಲಾಗದು. ಜಗದೀಶ್‌ ಅವರನ್ನು ವಕೀಲರು ಮತ್ತು ವಕೀಲ್‌ ಸಾಬ್‌ ಎಂದು ಬಿಂಬಿಸುತ್ತಿರುವುದು ಸಂಘದ ಸದಸ್ಯರಿಗೆ ನೋವುಂಟು ಮಾಡಿದ್ದು, ಅನೇಕರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com