

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪರವಾನಗಿ ನವೀಕರಣ ಮಾಡಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಕರ್ನಾಟಕ ಹೈಕೋರ್ಟ್‌ಗೆ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಗೌಡ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಫಾರ್ಮಸುಟಿಕಲ್ ಕ್ಲಿನಿಕ್ ಇದೆ. ಆದರಲ್ಲಿ ಜನರಿಕ್ ಔಷಧಿ ಮಳಿಗೆ ಇತ್ತು. ಅದರ ಪರವಾನಗಿಯನ್ನು ಬೆಂಗಳೂರು ವಕೀಲರ ಸಂಘ ಪಡೆದುಕೊಂಡಿತ್ತು. ಪರವಾನಗಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಮಳಿಗೆಯನ್ನು ಮುಚ್ಚಲಾಗಿದೆ. ಇದರಿಂದ ವಕೀಲರು, ಕಕ್ಷಿದಾರರು ಮತ್ತು ಕೋರ್ಟಿಗೆ ಬರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದ್ದರಿಂದ, ಪರವಾನಗಿ ನವೀಕರಣ ಮಾಡಿ, ಮಳಿಗೆ ಪುನಾರಂಭಿಸಲು ಅವಕಾಶ ಮಾಡಿಕೊಡಲು ನಿರ್ದೇಶನ ನೀಡಬೇಕು ” ಎಂದು ಕೋರಿದರು.
ವಾದ ಆಲಿಸಿದ ಪೀಠವು ರಾಜ್ಯ ಔಷಧ ನಿಯಂತ್ರಣ ಇಲಾಖೆಯ ಔಷಧ ನಿಯಂತ್ರಕರು, ಬೆಂಗಳೂರು ದಕ್ಷಿಣ ವಿಭಾಗದ ಸಹಾಯಕ ಔಷಧ ನಿಯಂತ್ರಕರು, ಕೇಂದ್ರ ಸರ್ಕಾರ ಸ್ವಾಮ್ಯದ ಫಾರ್ಮಸುಟಿಕಲ್ ಅಂಡ್ ಮೆಡಿಕಲ್ ಡಿವೈಸೆಸ್ ಬ್ಯೂರೋ ಆಫ್ ಇಂಡಿಯಾ (ಪಿಎಂಬಿಐ) ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿತು.