ಬೆಂಗಳೂರು ವಕೀಲರ ಸಂಘಕ್ಕೆ ಪರ್ಯಾಯವಾಗಿ ನೂತನ ಸಂಘ ನೋಂದಣಿಗೆ ಆಕ್ಷೇಪ: ಹೈಕೋರ್ಟ್‌ನಿಂದ ಮಧ್ಯಾಹ್ನ ಅರ್ಜಿ ವಿಚಾರಣೆ

ಬೆಂಗಳೂರು ವಕೀಲರ ಸಂಘಕ್ಕೆ ಪರ್ಯಾಯವಾಗಿ ನೂತನ ಸಂಘ ನೋಂದಣಿಗೆ ಆಕ್ಷೇಪ: ಹೈಕೋರ್ಟ್‌ನಿಂದ ಮಧ್ಯಾಹ್ನ ಅರ್ಜಿ ವಿಚಾರಣೆ

ಎಎಬಿ ಪ್ರಧಾನ ಕಾರ್ಯದರ್ಶಿ ಪಿ ವಿ ಪ್ರವೀಣ್‌ ಗೌಡ ಉಪಸ್ಥಿತಿಯಲ್ಲಿ ಹಾಜರಾದ ವಕೀಲರೊಬ್ಬರು ನ್ಯಾ. ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿ ಉಲ್ಲೇಖಿಸಿದ್ದು, ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.
Published on

ಬೆಂಗಳೂರಿನಲ್ಲಿ ಯಾವುದೇ ಹೊಸ ಅಥವಾ ಪರ್ಯಾಯ ವಕೀಲ ಸಂಘ ಸ್ಥಾಪನೆಗೆ ಅನುಮತಿಸದಂತೆ ರಾಜ್ಯ ವಕೀಲರ ಪರಿಷತ್‌ಗೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘವು ಕರ್ನಾಟಕ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದೆ.

ಈ ಸಂಬಂಧ ಎಎಬಿ ಪ್ರಧಾನ ಕಾರ್ಯದರ್ಶಿ ಪಿ ವಿ ಪ್ರವೀಣ್‌ ಗೌಡ ಉಪಸ್ಥಿತಿಯಲ್ಲಿ ಹಾಜರಾದ ವಕೀಲರೊಬ್ಬರು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿ ಉಲ್ಲೇಖಿಸಿದ್ದು, ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಮನವಿ ಮಾಡಿದರು.

ಎಎಬಿ ಪ್ರತಿನಿಧಿಸಿದ್ದ ವಕೀಲರು “ಬೆಂಗಳೂರು ವಕೀಲರ ಸಂಘವು ಅರ್ಜಿ ಸಲ್ಲಿಸಿದ್ದು, ಬೆಂಗಳೂರಿನಲ್ಲಿ ಬೇರೆ ಯಾವುದೇ ವಕೀಲ ಸಂಘವನ್ನು ನೋಂದಾಯಿಸದಂತೆ ನಿರ್ದೇಶನ ಕೋರಲಾಗಿದೆ. ಕೆಲವರು ಮತ್ತೊಂದು ವಕೀಲರ ಸಂಘ ನೋಂದಾಯಿಸಲು ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಅರ್ಜಿ ಸಲ್ಲಿಸಿದ್ದಾರೆ. ಇಂಥ ಪರ್ಯಾಯ ಸಂಘವನ್ನು ನೋಂದಾಯಿಸಲು ಅನುಮತಿಸಬಾರದು” ಎಂದು ಕೋರಿದರು.

ಆಗ ಪೀಠವು “ಯಾರಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ? ಕೆಎಸ್‌ಬಿಸಿಗೆ ಆ ವ್ಯಾಪ್ತಿ ಇದೆಯೇ?” ಎಂದು ಕೇಳಿತು. ಇದಕ್ಕೆ ಎಎಬಿ ವಕೀಲರು “ಕೆಎಸ್‌ಬಿಸಿಗೆ ವ್ಯಾಪ್ತಿ ಇದೆ. ಕರ್ನಾಟಕ ವಕೀಲರ ಕಲ್ಯಾಣ ಕಾಯಿದೆ ಅಡಿ ಕೆಎಸ್‌ಬಿಸಿಯು ಹೊಸ ವಕೀಲರ ಸಂಘ ನೋಂದಾಯಿಸಲು ವ್ಯಾಪ್ತಿ ಇದೆ” ಎಂದರು.

ಆಗ ಪೀಠವು “ಯಾವ ಕಾರಣಕ್ಕಾಗಿ ಇನ್ನೊಂದು ಸಂಘ ನೋಂದಾಯಿಸಲಾಗುತ್ತಿದೆ? ಕಾಯಿದೆಯ ನಿಬಂಧನೆಗಳು ಮತ್ತು ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಹೇಳಿ, ಅರ್ಜಿಯ ವಿಚಾರಣೆಯನ್ನು ಭೋಜನ ಬಳಿಕ ನಡೆಸಲಾಗುವುದು ಎಂದಿತು.

Kannada Bar & Bench
kannada.barandbench.com