ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯು ಭಾರಿ ಆತಂಕ ಸೃಷ್ಟಿಸಿದ್ದು, ಇಡೀ ಜನಸಮುದಾಯವನ್ನು ಆತಂಕಕ್ಕೆ ದೂಡಿದೆ. ಹಲವಾರು ವಕೀಲರು ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ವೆಚ್ಚ ಭರಿಸಲಾಗದೇ ತೀವ್ರ ಥರದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಕೀಲರಿಗೆ ನೆರವಾಗಲು ದೇಣಿಗೆ ನೀಡುವಂತೆ ಹಿರಿಯ ವಕೀಲರಲ್ಲಿ ಬೆಂಗಳೂರು ವಕೀಲರ ಸಂಘವು ಮನವಿ ಮಾಡಿದೆ.
ಪ್ರತಿ ವರ್ಷದ ಸಂಘದ ವಾರ್ಷಿಕೋತ್ಸವ ನಡೆಸಲು ವಕೀಲರು ನೀಡುತ್ತಿದ್ದ ದೇಣಿಗೆಯನ್ನು ಪ್ರಸಕ್ತ ವರ್ಷ ಸಂಕಷ್ಟದಲ್ಲಿ ಸಿಲುಕಿರುವ ವಕೀಲರ ಆರೋಗ್ಯ ವೆಚ್ಚ ಭರಿಸಲು ಬಳಸಲಾಗುವುದು ಏಪ್ರಿಲ್ ೯ರಂದು ನಡೆದ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಕೇಂದ್ರ ಸರ್ಕಾರವು ಸೋಂಕಿನ ಕೊಂಡಿಯನ್ನು ತುಂಡರಿಸುವ ಉದ್ದೇಶದಿಂದ ಲಾಕ್‌ಡೌನ್ ಘೋಷಿಸಿದಾಗ ಹಲವು ಹಿರಿ-ಕಿರಿಯ ವಕೀಲರು ಉದಾರವಾಗಿ ದೇಣಿಗೆ ನೀಡುವ ಮೂಲಕ ಸಹೋದ್ಯೋಗಿಗಳ ಸಂಕಷ್ಟಕ್ಕೆ ನೆರವಾಗಿದ್ದರು. ಇದಕ್ಕೆ ಬೆಂಗಳೂರು ಸಂಘವು ಆಭಾರಿಯಾಗಿರುತ್ತದೆ ಎಂದೂ ನೆರವನ್ನು ಸ್ಮರಿಸಲಾಗಿದೆ.
ದೆಹಲಿಯಲ್ಲಿ ವಕೀಲರಿಗೆ ವಿಮೆ ಯೋಜನೆ ಜಾರಿಗೊಳಿಸಿರುವಂತೆ ರಾಜ್ಯದಲ್ಲೂ ವಕೀಲರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಸಭೆಯನ್ನು ಈಚೆಗೆ ನಡೆಸಲಾಗಿತ್ತು.