ಲಂಚ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಒಂದೇ ದಿನದಲ್ಲಿ ವಿಚಾರಣೆಗೆ ಪಟ್ಟಿ ಮಾಡಿದ್ದಕ್ಕೆ ತೀವ್ರ ಆಕ್ಷೇಪ ಎತ್ತಿರುವ ಬೆಂಗಳೂರು ವಕೀಲರ ಸಂಘವು (ಎಎಬಿ) ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರಿಗೆ ಮಂಗಳವಾರ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ.
ನಿರೀಕ್ಷಣಾ ಜಾಮೀನು ಅರ್ಜಿಯಂತಹ ಹೊಸ ಪ್ರಕರಣಗಳನ್ನು ಪಟ್ಟಿ ಮಾಡಲು ಹೈಕೋರ್ಟ್‌ನಲ್ಲಿ ಹಲವು ದಿನ ಮತ್ತು ವಾರಗಳೇ ಹಿಡಿಯುತ್ತವೆ. ಆದರೆ, ವಿಐಪಿ ಪ್ರಕರಣಗಳನ್ನು ರಾತ್ರೋರಾತ್ರಿ ವಿಚಾರಣೆಗೆ ಪರಿಗಣಿಸಲಾಗುತ್ತದೆ. ಇದರಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುವುದಕ್ಕೆ ನಾಂದಿ ಹಾಡಲಿದೆ. ಶಾಸಕರನ್ನೂ ಸಾಮಾನ್ಯ ವ್ಯಕ್ತಿ ಎಂದು ಪರಿಗಣಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಲಾಗಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಒಂದೇ ದಿನದಲ್ಲಿ ವಿಚಾರಣೆಗೆ ಪಟ್ಟಿ ಮಾಡಿರುವುದರಿಂದ ಅದೇ ರೀತಿ ಎಲ್ಲಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಎಎಬಿಯು ಕೋರಿದೆ. "ಒಂದೇ ದಿನದಲ್ಲಿ ಎಲ್ಲಾ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಬೇಕು. ಇದರಿಂದ ಸಾಮಾನ್ಯ ಜನರನ್ನು ವಿಐಪಿಗಳ ಹಾಗೆ ಪರಿಗಣಿಸಿದಂತಾಗುತ್ತದೆ" ಎಂದು ಸಿಜೆಐ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಲಾಗಿದೆ.
ನ್ಯಾಯದೇಗುಲ ಎಲ್ಲರಿಗೂ ಸಮಾನವಾಗಿರುವುದು ಅಗತ್ಯವಾಗಿದ್ದು, ಯಾವುದೇ ವಿಐಪಿ ಸಾಮಾನ್ಯ ವ್ಯಕ್ತಿಯಂತೆ ಕಾಯಬೇಕು. ಈ ನಿಟ್ಟಿನಲ್ಲಿ ಎಎಬಿಯು ಆಘಾತ ಮತ್ತು ತೀವ್ರ ಕಳಕಳಿಯನ್ನು ವ್ಯಕ್ತಪಡಿಸುತ್ತದೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಮತ್ತು ಖಜಾಂಚಿ ಎಂ ಟಿ ಹರೀಶ್ ಅವರ ಸಹಿ ಮಾಡಿರುವ ಪತ್ರದಲ್ಲಿ ವಿವರಿಸಲಾಗಿದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ (ಕೆಎಸ್‌ಡಿಎಲ್) ಕಚ್ಚಾ ವಸ್ತುಗಳ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುವಂತೆ ವಕೀಲ ಸಂದೀಪ್ ಪಾಟೀಲ್ ಅವರು ಸೋಮವಾರ ನ್ಯಾ. ಕೆ ನಟರಾಜನ್ ಅವರ ನೇತೃತ್ವದ ಪೀಠಕ್ಕೆ ಕೋರಿದ್ದರು. ಮಂಗಳವಾರಕ್ಕೆ (ಇಂದು) ವಿಚಾರಣೆಗೆ ಪಟ್ಟಿ ಮಾಡುವಂತೆ ನ್ಯಾಯಮೂರ್ತಿಗಳು ಆದೇಶಿಸಿದ್ದರು. ಇಂದು ವಿಚಾರಣೆ ನಡೆಸಿದ್ದ ನ್ಯಾಯಾಲಯವು ವಿರೂಪಾಕ್ಷಪ್ಪ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಇದರ ಬೆನ್ನಿಗೇ ಎಎಬಿ ಪತ್ರ ಬರೆದಿರುವುದು ಚರ್ಚೆ ಹುಟ್ಟು ಹಾಕಿದೆ.