ವಕೀಲರು ವೃತ್ತಿಪರತೆ ಕಾಪಾಡಿಕೊಂಡು ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಬೇಕು: ಸಿಜೆ ಕಿವಿಮಾತು

“ಹೈಕೋರ್ಟ್‌ಗೆ ನಮ್ಮವರೇ ಮುಖ್ಯ ನ್ಯಾಯಮೂರ್ತಿಯಾಗಿ ಬರಲು ಮೂರು ದಶಕ ಕಾಯಬೇಕಾಯಿತು. ಇದು ಅಪರೂಪದ ಸಂಗತಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ.
ವಕೀಲರು ವೃತ್ತಿಪರತೆ ಕಾಪಾಡಿಕೊಂಡು ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಬೇಕು: ಸಿಜೆ ಕಿವಿಮಾತು
Published on

“ವಕೀಲರು ವೃತ್ತಿಪರತೆ ಕಾಪಾಡಿಕೊಂಡು ಪ್ರಾಮಾಣಿಕವಾಗಿ ಜವಾಬ್ದಾರಿ ನಿಭಾಯಿಸಬೇಕು” ಎಂದು ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆ) ಪಿ ಎಸ್‌ ದಿನೇಶ್‌ ಕುಮಾರ್‌ ವಕೀಲ ಸಮುದಾಯಕ್ಕೆ ಕಿವಿಮಾತು ಹೇಳಿದರು.

ಬೆಂಗಳೂರು ವಕೀಲರ ಸಂಘದ (ಎಎಬಿ) ವತಿಯಿಂದ ನೂತನ ಸಿಜೆ ಅವರಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಕುಮಾರ್‌ ಅವರು ಮಾತನಾಡಿದರು.

“ಎಎಬಿ ಸದಸ್ಯನಾಗಿ 35 ವರ್ಷಗಳಾಗಿವೆ. ಸರ್ಕಾರಿ ವಕೀಲನಾಗಿದ್ದಾಗ ಪ್ರತಿವಾದಿ ವಕೀಲರು ಪ್ರಕರಣದಲ್ಲಿ ಜಯಿಸಿದರೆ ಖುಷಿಪಡುತ್ತಿದ್ದೆ. ನನ್ನವರು ನನಗೆ ಸನ್ಮಾನಿಸುತ್ತಿರುವುದು ಖುಷಿ ನೀಡುವ ವಿಚಾರ” ಎಂದು ಹರ್ಷಿಸಿದರು.

“ವ್ಯಾಜ್ಯ ರಹಿತ ಸಮಾಜ ಸುಂದರ. ಆದರೆ, ಅದು ಕಷ್ಟ ಸಾಧ್ಯ” ಎಂದು ಅಭಿಪ್ರಾಯಪಟ್ಟರು. ಬಾಕಿ ಪ್ರಕರಣಗಳು ಅಪಾರ ಪ್ರಮಾಣದಲ್ಲಿ ಉಳಿಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಕೆ ಸೋಮಶೇಖರ್ ಅವರು ಮಾತನಾಡಿ “ಕಾನೂನು ವೃತ್ತಿಯಲ್ಲಿರುವ ನಾವು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು” ಎಂದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “1998ರಿಂದ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಅವರು ನಮಗೆ ಪರಿಚಯ. ಅವರ ವ್ಯಕ್ತಿತ್ವ ನಮಗೆ ಮಾದರಿ, ಅವರ ವೃತ್ತಿಪರತೆ ಸ್ಫೂರ್ತಿ” ಎಂದರು.

ಎಎಬಿ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು “ಹೈಕೋರ್ಟ್‌ಗೆ ನಮ್ಮವರೇ ಮುಖ್ಯ ನ್ಯಾಯಮೂರ್ತಿಯಾಗಿ ಬರಲು ಮೂರು ದಶಕ ಕಾಯಬೇಕಾಯಿತು. ಇದು ಅಪರೂಪದ ಸಂಗತಿ” ಎಂದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಕೋಶಾಧಿಕಾರಿ ಹರೀಶ್ ಎಂ ಟಿ, ಪದಾಧಿಕಾರಿಗಳು, ವಕೀಲರು, ನ್ಯಾಯಾಂಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Kannada Bar & Bench
kannada.barandbench.com