ಆಧಾರ್ ವಯೋಮಾನ ದೃಢೀಕರಣದ ನಿಖರ ದಾಖಲೆಯಲ್ಲ: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌

ಕುಟುಂಬದ ವಿರೋಧವನ್ನು ಲೆಕ್ಕಿಸದೆ ಪ್ರೀತಿಸಿ ಮದುವೆಯಾದ ಯುವ ಜೋಡಿಗೆ ಸಂಬಂಧಿಕರಿಂದ ಉಂಟಾಗಬಹುದಾದ ಬೆದರಿಕೆಯಿಂದ ರಕ್ಷಣೆಯನ್ನು ನ್ಯಾಯಾಲಯವು ಇದೇ ವೇಳೆ ನೀಡಿತು.
Aadhar
Aadhar
Published on

ಆಧಾರ್‌ ವಯೋಮಾನ ದೃಢೀಕರಣದ ನಿಖರ ದಾಖಲೆಯಲ್ಲ ಎಂದು ಇತ್ತೀಚೆಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ (ನವದೀಪ್‌ ಸಿಂಗ್‌ ವರ್ಸಸ್‌ ಪಂಜಾಬ್‌ ಸರ್ಕಾರ).

ಕುಟುಂಬದ ವಿರೋಧವನ್ನು ಲೆಕ್ಕಿಸದೆ ಪ್ರೀತಿಸಿ ಮದುವೆಯಾದ ಯುವ ಜೋಡಿಯು ಸಂಬಂಧಿಕರಿಂದ ಬೆದರಿಕೆಯನ್ನು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅವರಿಗೆ ರಕ್ಷಣೆಯನ್ನು ನೀಡಿತು.

ಆದರೆ, ಇದೇ ವೇಳೆ ಮದುವೆಯ ಸಿಂಧುತ್ವವನ್ನು ಪ್ರಶ್ನಿಸದೆ ರಕ್ಷಣೆಯನ್ನು ಒದಗಿಸಿರುವ ಅಂಶವನ್ನು ನ್ಯಾಯಾಲಯವು ಗಮನಿಸಿತು. ಆಗ ನ್ಯಾಯಾಲಯವು, ಒಂದೊಮ್ಮೆ ಅರ್ಜಿದಾರರ ವಯೋಮಾನವು ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ ಸೂಚಿಸಲಾಗಿರುವ ಮದುವೆಯ ವಯೋಮಿತಿಗಿಂತ ಕಡಿಮೆ ವಯೋಮಿತಿಗೆ ಒಳಪಟ್ಟರೆ ಆಗ ತಾನು ನೀಡಿರುವ ಆದೇಶವನ್ನು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಬಂಧ ಎಂದು ಅರ್ಥೈಸುವಂತಿಲ್ಲ ಎನ್ನುವುದನ್ನು ಖಚಿತಪಡಿಸಿತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮೋಲ್‌ ರತ್ತನ್‌ ಸಿಂಗ್ ಅವರು, “ಆಧಾರ್‌ ಕಾರ್ಡ್‌ಗಳನ್ನು ಹೊರತುಪಡಿಸಿ ಅರ್ಜಿದಾರರಿಬ್ಬರ ವಯೋಮಾನದ ನಿಖರ ದಾಖಲೆಗಳಿಲ್ಲ. ಆಧಾರ್‌ ಕಾರ್ಡ್‌ ವಯೋಮಾನದ ನಿಖರ ದಾಖಲೆಯಲ್ಲ. ಒಂದೊಮ್ಮೆ ಅರ್ಜಿದಾರರು 2006ರ ಬಾಲ್ಯ ವಿವಾಹ ನಿಷೇಧ ಕಾಯಿದೆಯಡಿ ನಿಗದಿಪಡಿಸಿರುವ ಮದುವೆಯ ವಯೋಮಿತಿಯ ಕೆಳಗೆ ಇದ್ದರೆ ಆಗ ತಾನು ನೀಡಿರುವ ಆದೇಶವನ್ನು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಬಂಧ ಎಂದು ಅರ್ಥೈಸುವಂತಿಲ್ಲ” ಎಂದು ಆದೇಶಿಸಿದರು.

ಇತ್ತೀಚೆಗೆ ಮೇಘಾಲಯ ಹೈಕೋರ್ಟ್‌ ಸಹ ಗುರುತು ಪತ್ರಕ್ಕಾಗಿ ಕೇವಲ ಆಧಾರ್‌ ಕಾರ್ಡ್‌ಅನ್ನು ಮಾತ್ರವೇ ಒತ್ತಾಯಿಸದಂತೆ ಹೇಳಿತ್ತು. ಭಾರತದ ನಾಗರಿಕರಿಗೆ ತಮ್ಮ ಗುರುತನ್ನು ನಿರೂಪಿಸುವ ಇತರ ಅಧಿಕೃತ ದಾಖಲೆಗಳು ಲಭ್ಯವಿರುವುದರಿಂದ ಅದನ್ನು ಬಳಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

Kannada Bar & Bench
kannada.barandbench.com