
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಆಧಾರ್ ಕಾರ್ಡ್‌ಗಳು ಅಥವಾ ಪಡಿತರ ಚೀಟಿಗಳನ್ನು ಮತದಾನದ ಅರ್ಹತೆಯ ಪುರಾವೆಯಾಗಿ ಪರಿಗಣಿಸಲಾಗುವುದಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ವಿವರವಾದ ಅಫಿಡವಿಟ್‌ನಲ್ಲಿ, ಎರಡೂ ದಾಖಲೆಗಳು ಸಂವಿಧಾನದ 326ನೇ ವಿಧಿಯ ಅಡಿಯಲ್ಲಿ ಅಗತ್ಯವಿರುವ ಮಾನದಂಡವನ್ನು ಪೂರೈಸಲು ವಿಫಲವಾಗಿವೆ ಎಂದು ಆಯೋಗ ಹೇಳಿದೆ. ಆಧಾರ್ ಕುರಿತು, ಆಯೋಗವು ನಿರ್ದಿಷ್ಟವಾಗಿ ಹೇಳಿದ್ದು: "ಗಣತಿ ನಮೂನೆಯಲ್ಲಿ ಒದಗಿಸಲಾದ 11 ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಅನ್ನು ಸೇರಿಸಲಾಗಿಲ್ಲ, ಏಕೆಂದರೆ ಅದು ವಿಧಿ 326 ರ ಅಡಿಯಲ್ಲಿ ಅರ್ಹತೆಯನ್ನು ಪರೀಕ್ಷಿಸಲು ಸಹಾಯ ಮಾಡುವುದಿಲ್ಲ." ಆಧಾರ್ ಗುರುತನ್ನು ಸ್ಥಾಪಿಸಬಹುದು, ಆದರೆ ಪೌರತ್ವವಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಜನವರಿ 2024 ರ ನಂತರ ನೀಡಲಾದ ಆಧಾರ್ ಕಾರ್ಡ್‌ಗಳು "ಆಧಾರ್ ಪೌರತ್ವದ ಪುರಾವೆಯಲ್ಲ" ಎನ್ನುವ ಶಾಸನಬದ್ಧ ಹಕ್ಕು ನಿರಾಕರಣೆಯನ್ನು ಹೊಂದಿವೆ ಎಂದು ಅಫಿಡವಿಟ್‌ನಲ್ಲಿ ಸೂಚಿಸಲಾಗಿದೆ.
ತನ್ನ ನಿಲುವಿಗಿರುವ ಕಾನೂನಾತ್ಮಕ ಆಧಾರವನ್ನು ನೀಡಲು ಆಯೋಗವು ರಾಣಿ ಮಿಸ್ತ್ರಿ ವರ್ಸಸ್ ಸ್ಟೇಟ್ ಆಫ್ ವೆಸ್ಟ್ ಬಂಗಾಳ ಸೇರಿದಂತೆ ಹಲವು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದೆ. ಆ ಪ್ರಕರಣದಲ್ಲಿ ಕಲ್ಕತ್ತಾ ಹೈಕೋರ್ಟ್, "ಉಲ್ಲೇಖಿಸಲಾದ ಆಧಾರ್ ಕಾರ್ಡ್ ಸ್ವತಃ ಅದನ್ನು ಹೊಂದಿರುವವರಿಗೆ ಸಂಬಂಧಿಸಿದಂತೆ ಪೌರತ್ವ ಅಥವಾ ನಿವಾಸದ ಯಾವುದೇ ಪುರಾವೆ, ಹಕ್ಕನ್ನು ನೀಡುವುದಿಲ್ಲ," ಎಂದು ಅವಲೋಕಿಸಿತ್ತು.
ಹಾಗಿದ್ದರೂ, ಎಸ್‌ಐಆರ್ ಪರಿಷ್ಕರಣೆ ವೇಳೆ ಬಿಹಾರದಲ್ಲಿ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಇಸಿಐ ದೃಢಪಡಿಸಿದೆ, ಆದರೆ ಇದು ಗುರುತಿನ ಪರಿಶೀಲನೆಯ ಸೀಮಿತ ಉದ್ದೇಶಕ್ಕಾಗಿ ಮಾತ್ರ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಪಡಿತರ ಚೀಟಿಗಳ ಬಗ್ಗೆ, ಆಯೋಗವು ಇದೇ ರೀತಿಯ ನಿಲುವನ್ನು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರಾಜ್ಯ ಅಧಿಕಾರಿಗಳು ಪಡಿತರ ಚೀಟಿಗಳನ್ನು ನೀಡುತ್ತಿದ್ದರೂ, ಚಲಾವಣೆಯಲ್ಲಿರುವ ನಕಲಿ ಮತ್ತು ತಾತ್ಕಾಲಿಕ ಕಾರ್ಡ್‌ಗಳ ಪ್ರಮಾಣದಿಂದಾಗಿ ಅವುಗಳ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಲಾಗುತ್ತದೆ ಎಂದು ಅದು ತಿಳಿಸಿದೆ.
ಪರಿಣಾಮವಾಗಿ, ಚುನಾವಣಾ ಅರ್ಹತೆಯನ್ನು ಪರಿಶೀಲಿಸಲು ಅವಲಂಬಿಸಬೇಕಾದ 11 ದಾಖಲೆಗಳ ಪಟ್ಟಿಯಲ್ಲಿ ಪಡಿತರ ಚೀಟಿಗಳನ್ನು ಸೇರಿಸಲಾಗಿಲ್ಲ. ಆದಾಗ್ಯೂ, ಪಟ್ಟಿ ಸಮಗ್ರವಾಗಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಎಸ್‌ಐಆರ್ ಪ್ರಕ್ರಿಯೆಯ ಕಾನೂನಾತ್ಮಕತೆಯನ್ನು ಸಮರ್ಥಿಸಿಕೊಂಡಿರುವ ಆಯೋಗವು ಇದೇ ವೇಳೆ, ಆಧಾರ್ ಮತ್ತು ಪಡಿತರ ಚೀಟಿಗಳನ್ನು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಸ್ವತಂತ್ರ ಪುರಾವೆಯಾಗಿ ಬಳಸಲಾಗುವುದಿಲ್ಲ, ಆದರೆ ಪೂರಕ ದಾಖಲೆಗಳಾಗಿ ಮಾತ್ರ ಬಳಸಬಹುದು ಎಂದು ಒತ್ತಿ ಹೇಳಿದೆ.
"ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು" ಎಂದು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ.
ಎಸ್‌ಐಆರ್ ಪ್ರಕ್ರಿಯೆಯು ದೊಡ್ಡ ಪ್ರಮಾಣದ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು, ವಿಶೇಷವಾಗಿ ಸಮಾಜದ ಅಂಚಿನಲ್ಲಿರುವ ಸಮುದಾಯಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಆಯೋಗ ಅಫಿಡವಿಟ್ ಸಲ್ಲಿಸಿದೆ.
ಅರ್ಜಿದಾರರ ಆಕ್ಷೇಪಗಳನ್ನು ತಿರಸ್ಕರಿಸಿರುವ ಆಯೋಗವು ಹೀಗೆ ಹೇಳಿದೆ: "ಗಣತಿ ನಮೂನೆಯನ್ನು ಸಲ್ಲಿಸಲು ವಿಫಲವಾದರೆ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗುತ್ತದೆ ಮತ್ತು ಅಂತಹ ಸಲ್ಲಿಕೆಗೆ ಮೂವತ್ತೊಂದು ದಿನಗಳ ಅವಧಿ ಸಾಕಾಗುವುದಿಲ್ಲ ಎಂದು ಅರ್ಜಿದಾರರು ವಾದಿಸುತ್ತಾರೆ, ಇದು ತಪ್ಪು."