ಆಜ್‌ತಕ್‌ ವಿರುದ್ಧ ಮಾನಹಾನಿಕರ ಟ್ವೀಟ್ ಮಾಡದಂತೆ ʼಟ್ರಾಕ್ಟರ್ 2 ಟ್ವಿಟರ್ʼ ಹ್ಯಾಂಡಲ್‌ಗೆ ದೆಹಲಿ ಹೈಕೋರ್ಟ್ ನಿರ್ಬಂಧ

ಆಜ್‌ತಕ್‌ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿರುವ ಕೆಲ ಮಾನಹಾನಿಕರ ಟ್ವೀಟ್‌ಗಳನ್ನು ತೆಗೆದುಹಾಕುವಂತೆ ಕೂಡ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಆಜ್‌ತಕ್‌ ವಿರುದ್ಧ ಮಾನಹಾನಿಕರ ಟ್ವೀಟ್ ಮಾಡದಂತೆ ʼಟ್ರಾಕ್ಟರ್ 2 ಟ್ವಿಟರ್ʼ ಹ್ಯಾಂಡಲ್‌ಗೆ ದೆಹಲಿ ಹೈಕೋರ್ಟ್ ನಿರ್ಬಂಧ

ರೈತರ ಪ್ರತಿಭಟನೆ ವರದಿಗಾರಿಕೆಗೆ ಸಂಬಂಧಿಸಿದಂತೆ ʼಆಜ್‌ತಕ್‌ʼ ಹಿಂದಿ ಸುದ್ದಿವಾಹಿನಿ ವಿರುದ್ಧ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಮಾನಹಾನಿಕರ ವಿಚಾರಗಳನ್ನು ತೆಗೆದುಹಾಕುವಂತೆ ʼಟ್ರಾಕ್ಟರ್‌ 2 ಟ್ವಿಟರ್‌ʼ ಹ್ಯಾಂಡಲ್‌ಗೆ ದೆಹಲಿ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಫೇಸ್‌ಬುಕ್, ಟೆಲಿಗ್ರಾಮ್ ಹಾಗೂ ಟ್ವಿಟರ್‌ನಲ್ಲಿ ವಾಹಿನಿ ವಿರುದ್ಧ ಯಾವುದೇ ಮಾನಹಾನಿಕರ ಪೋಸ್ಟ್‌ ಪ್ರಕಟಿಸದಂತೆಯೂ 'ಟ್ರ್ಯಾಕ್ಟರ್ 2 ಟ್ವಿಟರ್' ಹ್ಯಾಂಡಲ್‌ನ ನಿರ್ಮಾತೃ ಹಾಗೂ ಸಹ ನಿರ್ಮಾತೃಗಳಿಗೆ ತಡೆ ನೀಡಲಾಗಿದೆ. ತನ್ನ ಮಧ್ಯಂತರ ಆದೇಶದಲ್ಲಿ ನ್ಯಾ. ರೇಖಾ ಪಲ್ಲಿ ಮಾನಹಾನಿಕರ ವಿಷಯಗಳನ್ನು ತೆಗೆದುಹಾಕಲು ಮೂರು ದಿನಗಳ ಕಾಲ ಗಡುವು ನೀಡಿದರು. ಒಂದು ವೇಳೆ ಹಾಗೆ ಮಾಡಲು ವಿಫಲವಾದರೆ ಸಾಮಾಜಿಕ ಮಾಧ್ಯಮ ಕಂಪೆನಿಗಳೇ ಅವುಗಳನ್ನು ತೆಗೆದುಹಾಕಬೇಕು ಎಂದು ಸೂಚಿಸಿದರು. ಪಾಸ್‌ವರ್ಡ್‌ ರಕ್ಷಿತ ಫೈಲ್‌ ಮೂಲಕ ʼಆಜ್‌ತಕ್‌ʼಗೆ ಸಂಬಂಧಿಸಿದ ಹ್ಯಾಂಡಲ್‌ಗಳ ವಿವರ ಬಹಿರಂಗಪಡಿಸುವಂತೆಯೂ ಸಾಮಾಜಿಕ ಮಾಧ್ಯಮ ಜಾಲತಾಣಗಳಿಗೆ ನಿರ್ದೇಶಿಸಲಾಗಿದೆ.

ಪೋಸ್ಟ್‌ಗಳಲ್ಲಿ ʼದೇಶದ್ರೋಹಿ ಆಜ್‌ತಕ್‌ʼ, ʼಕೋಮುವಾದಿʼ ಹಾಗೂ ʼವಿಷಕಾರಿʼ ಎಂದು ವಾಹಿನಿಯನ್ನು ಬಿಂಬಿಸಿರುವ ಬಗ್ಗೆ ಹಾಗೂ ಆಕ್ಷೇಪಾರ್ಹ ಗ್ರಾಫಿಕ್‌ ಬಳಸಿರುವ ಬಗ್ಗೆ ವಕೀಲ ಹೃಷಿಕೇಶ್‌ ಬರೂವ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಲಿಂಕ್‌ಗಳನ್ನು ಒದಗಿಸಿ ಅವುಗಳಿಗೆ ನಿರ್ಬಂಧ ಹೇರುವಂತೆ ಕೋರಿದರು. ಮಾನಹಾನಿಕರ ಎನ್ನಲು ಈ ಅಂಶ ಸಾಕು ಎಂದು ನ್ಯಾ. ರೇಖಾ ಅಭಿಪ್ರಾಯಪಟ್ಟರು. ವಾಹಿನಿಗೆ ಉಂಟಾಗಿರುವ ಸರಿಪಡಿಸಲಾಗದ ಹಾನಿಯನ್ನು ತಡೆಯಲು ಮಧ್ಯಂತರ ಆದೇಶವನ್ನು ತಕ್ಷಣ ಹೊರಡಿಸಲಾಗುತ್ತದೆ ಎಂದು ಅವರು ಹೇಳಿದರು.

ಆದರೆ, ಮೊದಲು ಔಪಚಾರಿಕ ಅರ್ಜಿಗಳನ್ನು ವಿಚಾರಣೆ ನಡೆಸದೆ ಟ್ವಿಟರ್‌ ಹ್ಯಾಂಡಲ್‌ ಬ್ಲಾಕ್‌ ಮಾಡಲಾಗದು ಎಂದು ನ್ಯಾಯಾಲಯ ಹೇಳಿತು. ಅಲ್ಲದೆ ಖಾತರಿ ಇಲ್ಲದಿರುವುದರಿಂದ ಅನಾಮಿಕ ವ್ಯಕ್ತಿಗಳ ವಿರುದ್ಧ ಆದೇಶ ಹೊರಡಿಸುವುದಕ್ಕೆ ಕೂಡ ನ್ಯಾಯಾಲಯ ನಿರಾಕರಿಸಿತು. ಐಟಿ ನಿಯಮ- 2021ರ ಅಡಿ ಮಧ್ಯಸ್ಥಗಾರರಾಗಿರುವ ಟ್ವಿಟರ್‌, ಫೇಸ್‌ಬುಕ್‌ ಹಾಗೂ ಟೆಲಿಗ್ರಾಂಗಳು ಹಾಗೂ ಡಿಜಿಟಲ್‌ ಸೇವಾ ಪೂರೈಕೆದಾರರಿಗೆ ಪ್ರಕರಣ ಸಂಬಂಧ ನೋಟಿಸ್‌ ನೀಡಲಾಗಿದ್ದು ಪ್ರತಿವಾದಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಯಿತು. ಪ್ರಕರಣದ ಮುಂದಿನ ವಿಚಾರಣೆ ಜುಲೈ 24ರಂದು ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com