ಸಿಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಆಕಾರ್‌; ನ್ಯಾಯಾಲಯದ ಆದೇಶದ ಹೊರತಾಗಿಯೂ ಮತ್ತೆ ಪ್ರಯಾಣಕ್ಕೆ ತಡೆ

ದೆಹಲಿಯ ನ್ಯಾಯಾಲಯವು ಗುರುವಾರವಷ್ಟೇ ಪಟೇಲ್‌ ವಿರುದ್ಧದ ಲುಕ್‌ಔಟ್‌ ಸುತ್ತೋಲೆಯನ್ನು ರದ್ದುಪಡಿಸಿತ್ತು; ಅಲ್ಲದೆ, ಸಿಬಿಐ ಮುಖ್ಯಸ್ಥರು ಪಟೇಲ್‌ ಅವರಿಗೆ ಲಿಖಿತ ಕ್ಷಮಾಪಣೆ ಕೋರುವಂತೆ ಸೂಚಿಸಿತ್ತು.
Aakar Patel
Aakar Patelamnesty.org
Published on

ತಮ್ಮ ವಿರುದ್ಧ ಹೊರಡಿಸಲಾಗಿದ್ದ ಲುಕ್‌ಔಟ್‌ ಸುತ್ತೋಲೆಯನ್ನು ರದ್ದುಪಡಿಸಲು ಆದೇಶಿಸಿದ್ದ ದೆಹಲಿ ನ್ಯಾಯಾಲಯದ ಆದೇಶವನ್ನು ಪಾಲಿಸದ ಕೇಂದ್ರ ತನಿಖಾ ದಳದ (ಸಿಬಿಐ) ವಿರುದ್ಧ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಭಾರತ ಘಟಕದ ಮಾಜಿ ಮುಖ್ಯಸ್ಥ ಆಕಾರ್ ಪಟೇಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪಟೇಲ್‌ ಅವರನ್ನು ಏಪ್ರಿಲ್‌ 6ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕಕ್ಕೆ ಹೋಗುವುದರಿಂದ ತಡೆಯಲಾಗಿತ್ತು. ಇದರ ವಿರುದ್ಧ ಅವರು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಪ್ರಕರಣವನ್ನು ಆಲಿಸಿದ್ದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪವನ್‌ ಕುಮಾರ್‌ ಅವರು ಲುಕ್‌ಔಟ್‌ ಸುತ್ತೋಲೆಯನ್ನು ಬದಿಗೆ ಸರಿಸಿದ್ದರು. ಅಲ್ಲದೆ, ಸಿಬಿಐ ಮುಖ್ಯಸ್ಥರಿಗೆ ತಮ್ಮ ಅಧೀನ ಅಧಿಕಾರಿಗಳು ತೋರಿರುವ ಕರ್ತವ್ಯ ಲೋಪದ ಕಾರಣಕ್ಕೆ ಪಟೇಲ್‌ ಅವರಿಗೆ ಲಿಖಿತವಾಗಿ ಕ್ಷಮಾಪಣಾ ಪತ್ರ ಬರೆಯುವಂತೆ ಸೂಚಿಸಿದ್ದರು.

ಇತ್ತ ಪಟೇಲ್‌ ಅವರು ಗುರುವಾರ ಮತ್ತೆ ಅಮೆರಿಕ ಪ್ರಯಾಣಕ್ಕೆ ಮುಂದಾದ ವೇಳೆ ಅವರನ್ನು ಮರಳಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ಇಮಿಗ್ರೇಷನ್‌ ಅಧಿಕಾರಿಗಳು ನ್ಯಾಯಾಲಯದ ಆದೇಶದ ಸಂಬಂಧ ತನಿಖಾಧಿಕಾರಿಯಿಂದ ಮಾಹಿತಿ ಪಡೆಯಲು ಮುಂದಾದರು. ಆದರೆ, ಅಧಿಕಾರಿಯ ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಇದರಿಂದ ಪಟೇಲ್‌ ಅವರನ್ನು ವಿಮಾನ ಹತ್ತಲು ಬಿಡಲಿಲ್ಲ.

ಘಟನೆಯ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಪ್ರಸ್ತಾಪಿಸಿರುವ ಪಟೇಲ್‌ ನ್ಯಾಯಾಲಯದ ಆದೇಶವನ್ನು ತನಿಖಾಧಿಕಾರಿಯು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

Kannada Bar & Bench
kannada.barandbench.com