'ಆಮ್ ಆದ್ಮಿʼ ಜೈಲಿಗೆ ಹೋಗಬೇಕು ಆದರೆ ಸಿಎಂ ಅವರನ್ನು ಮುಟ್ಟಬಾರದು ಎಂದರೆ ಹೇಗೆ?' ಕೇಜ್ರಿವಾಲ್ ಅರ್ಜಿಗೆ ಇ ಡಿ ವಿರೋಧ

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಎಎಸ್‌ಜಿ ವಾದಗಳನ್ನು ಅದರಲ್ಲಿಯೂ ಎಎಸ್‌ಜಿ ಅವರು ಭಯೋತ್ಪಾದಕ ವಾಹನ ಸ್ಫೋಟಿಸುವ ಹೋಲಿಕೆ ನೀಡಿದ್ದಕ್ಕೆ ಬಲವಾಗಿ ವಿರೋಧಿಸಿದರು.
'ಆಮ್ ಆದ್ಮಿʼ ಜೈಲಿಗೆ ಹೋಗಬೇಕು ಆದರೆ ಸಿಎಂ ಅವರನ್ನು ಮುಟ್ಟಬಾರದು ಎಂದರೆ ಹೇಗೆ?' ಕೇಜ್ರಿವಾಲ್ ಅರ್ಜಿಗೆ ಇ ಡಿ ವಿರೋಧ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಮುಂಬರುವ ಲೋಕಸಭಾ ಚುನಾವಣೆ ಇಲ್ಲವೇ ತಮ್ಮ ಸಿಎಂ ಸ್ಥಾನ ಉಲ್ಲೇಖಿಸಿ ಯಾವುದೇ ವಿಶೇಷ ವಿನಾಯಿತಿ ಪಡೆಯುವಂತಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ ಡಿ) ಬುಧವಾರ ದೆಹಲಿ ಹೈಕೋರ್ಟ್‌ ಮುಂದೆ ವಾದಿಸಿದೆ.

ಇ ಡಿಯನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಎಸ್‌ ವಿ ರಾಜು ಅವರು ಕೇಜ್ರಿವಾಲ್‌ ಅವರ ಪಕ್ಷದ ಹೆಸರು ʼಆಮ್‌ ಆದ್ಮಿ (ಜನ ಸಾಮಾನ್ಯ) ಎಂಬುದನ್ನೇ ಈ ವೇಳೆ ಚಾಣಾಕ್ಷ ರೀತಿಯಲ್ಲಿ ದಾಳವಾಗಿ ಉರುಳಿಸಿದರು. ಎಲ್ಲರೂ ಸಮಾನರು. ದೇಶ ಲೂಟಿ ಮಾಡುವವರಿಗೆ ಮುಂಬರುವ ದಿನಗಳಲ್ಲಿ ವಿನಾಯಿತಿ ನೀಡುವಂತಿಲ್ಲ ಎಂದರು.

“ಆಮ್‌ ಆದ್ಮಿ (ಸಾಮಾನ್ಯ ಜನ) ಅಪರಾಧ ಮಾಡಿದರೆ ಸೆರೆವಾಸ ಅನುಭವಿಸಬೇಕಾಗುತ್ತದೆ. ಆದರೆ ನೀವು ಮುಖ್ಯಮಂತ್ರಿಯಾಗಿರುವುದರಿಂದ ನಿಮ್ಮನ್ನು ಬಂಧಿಸುವಂತಿಲ್ಲವೇ? ನೀವು ದೇಶ ಲೂಟಿ ಮಾಡಿದರೂ ಚುನಾವಣೆ ಹಿನ್ನೆಲೆಯಲ್ಲಿ ಯಾರೂ ನಿಮ್ಮನ್ನು ಮುಟ್ಟುವಂತಿಲ್ಲವೇ” ಎಂದು ಪ್ರಶ್ನಿಸಿದರು.

ಲೋಕಸಭೆ ಚುನಾವಣೆ  ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಬಂಧನವಾಗಿದೆ ಎಂಬ ಕೇಜ್ರಿವಾಲ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ಅವರು ರಾಜಕಾರಣಿಯೂ ಆಗಿರುವ ಭಯೋತ್ಪಾದಕನನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಆತ ಸೇನಾ ವಾಹನವೊಂದನ್ನು ಸ್ಫೋಟಿಸಿ ನೀವು ನನ್ನನ್ನು ಬಂಧಿಸಬಾರದು ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಹೊರಟಿದ್ದೇನೆ ಎಂದರೆ ಅದು ಯಾವ ಬಗೆಯ ವಾದವಾಗುತ್ತದೆ ಎಂದು ಪ್ರಶ್ನಿಸಿದರು.

ಕೇಜ್ರಿವಾಲ್ ವಿರುದ್ಧ ಸಾಕ್ಷಿಗಳು ನೀಡಿರುವ ಹೇಳಿಕೆಗಳು ನಿಜವೋ ಇಲ್ಲವೋ ಎಂಬುದು ವಿಚಾರಣೆಯ ವಿಷಯವಾಗಿದೆ ಎಂದು ಅವರು ಹೇಳಿದರು.

"ಹೇಳಿಕೆಗಳನ್ನು ನಂಬಬೇಕು ಅಥವಾ ನಂಬಬಾರದು ಎಂಬುದು ವಿಚಾರಣೆಯ ವಿಷಯವಾಗಿದೆ. ನ್ಯಾಯಾಲಯ ತನಿಖಾಧಿಕಾರಿಯ ಸ್ಥಾನದಲ್ಲಿ ಕೂರಲಾಗದು. ಅಬಕಾರಿ ನೀತಿ ರೂಪಿಸಲು ಹೊರಗಿನವರು ಭಾಗಿಯಾಗಿದ್ದಾರೆ ಎಂದು ಸಾಬೀತುಪಡಿಸುವ ಸಾಕ್ಷಿಗಳ  ಹೇಳಿಕೆಗಳಿವೆ" ಎಂದು ವಾದಿಸಿದರು.  

ಮುಖ್ಯವಾಗಿ ವ್ಯಕ್ತಿ ಹೊತ್ತಿರುವ ಪಕ್ಷದ ಜವಾಬ್ದಾರಿಗೂ ಅವರ ವೈಯಕ್ತಿಕ ಪಾತ್ರಕ್ಕೂ ಸಂಬಂಧ ಇರದು ಎಂದು ಎಎಸ್‌ಜಿ ನುಡಿದರು.

"ಅವರ ಪಾತ್ರವನ್ನು ಮರೆತುಬಿಡಿ, ಪಾತ್ರವನ್ನು ನೋಡುವ ಅಗತ್ಯವಿಲ್ಲ, ಕಂಪನಿಯ / ಪಕ್ಷದ ವ್ಯವಹಾರಗಳಿಗೆ ಅವರು ಜವಾಬ್ದಾರನಾಗಿದ್ದಾರೆ ಎಂಬುದನ್ನಷ್ಟೇ ನೋಡಬೇಕಿದೆ” ಎಂದು ಅವರು ಹೇಳಿದರು.

 ಅಕ್ರಮ ಹಣ ವರ್ಗಾವಣೆಯಿಂದ ಲಾಭ ಪಡೆದ ಎಎಪಿ ವ್ಯವಹಾರಗಳಿಗೆ ಕೇಜ್ರಿವಾಲ್ ಹೊಣೆಗಾರರಾಗಿದ್ದರಿಂದ ಅವರನ್ನು ಬಂಧಿಸಲಾಗಿದೆ ಎಂದು  ನ್ಯಾಯಾಲಯಕ್ಕೆ ತಿಳಿಸಲಾಯಿತು.

ಹಣದ ಜಾಡು ಪತ್ತೆ ಹಚ್ಚಿಲ್ಲ ಎಂಬ ಕೇಜ್ರಿವಾಲ್‌ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಅವರು “ಹಣದ ಸುಳಿವು ಸಿಕ್ಕಿದೆ. ಅದನ್ನು ಪತ್ತೆ ಮಾಡಿದ್ದು ಹಣವನ್ನು ವ್ಯಯಿಸಿರುವ ಕಾರಣಕ್ಕೆ ಅದು ದೊರೆಯುತ್ತಿಲ್ಲ" ಎಂದರು.

ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಎಎಸ್‌ಜಿ ವಾದಗಳನ್ನು ಅದರಲ್ಲಿಯೂ ಎಎಸ್‌ಜಿ ಅವರು ಭಯೋತ್ಪಾದಕ ವಾಹನ  ಸ್ಫೋಟಿಸುವ ಹೋಲಿಕೆ ನೀಡಿದ್ದಕ್ಕೆ ಬಲವಾಗಿ ವಿರೋಧಿಸಿದರು.

“ಇದು ವಿಲಕ್ಷಣ ಉದಾಹರಣೆ” ಎಂದು ಜರಿದ ಅವರು ಅಪರಾಧ ಪ್ರಕ್ರಿಯೆ ಕುರಿತಂತೆ ಪ್ರತಿಕ್ರಿಯಿಸುತ್ತಾ ಶವ ಪತ್ತೆಯಾಗದಿದ್ದರೂ ಕೊಲೆ ಪ್ರಕರಣ ಮುಂದುವರಿಯುತ್ತದೆ ಎನ್ನುತ್ತಾರೆ ಅವರು ಎಂದರು. ಕೇಜ್ರಿವಾಲ್‌ ನೇರವಾಗಿ ಅಪರಾಧಿಯಾಗದಿದ್ದರೂ ಅವರು ಕೃತ್ಯ ಎಸಗಿದಂತೆ ಎಂಬ ಎಎಸ್‌ಜಿ ವಾದಕ್ಕೆ ಆಕ್ಷೇಪಿಸಿದ ಅವರು ಅವರು ಅಕ್ರಮ ಹಣ ವರ್ಗಾವಣೆಯ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಅವರ (ಕೇಜ್ರಿವಾಲ್) ವಿರುದ್ಧ ಯಾವುದೇ ಪುರಾವೆಗಳಿಲ್ಲ. ದೆಹಲಿಯ ಮುಖ್ಯಮಂತ್ರಿ ಹವಾಲಾ ವಹಿವಾಟುಗಳನ್ನು ನಿರ್ವಹಿಸುತ್ತಾರೆ ಎಂದು ಹೇಳುವುದು ಅಪಹಾಸ್ಯವಾಗಿದೆ” ಎಂದರು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನ್ನ ಬಂಧನ ಮತ್ತು ವಶ ಪ್ರಶ್ನಿಸಿ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರಿದ್ದ ಏಕಸದಸ್ಯ ಪೀಠದೆದುರು ಈ ವಾದ ಮಂಡಿಸಲಾಯಿತು.  ಮುಂದೆ ಈ ಸಲ್ಲಿಕೆಗಳನ್ನು ಸಲ್ಲಿಸಲಾಯಿತು.

ಸುಮಾರು ಮೂರು ಗಂಟೆಗಳ ಕಾಲ ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.

Kannada Bar & Bench
kannada.barandbench.com