ಎಪಿಪಿ ಪರೀಕ್ಷೆ: ಹಳೆಯ ಮಾದರಿಯಲ್ಲಿಯೇ ಪರೀಕ್ಷೆ ನಡೆಸಲು ಎಎಬಿ ಕೋರಿಕೆ

ಸಹಾಯಕ ಸರ್ಕಾರಿ ಅಭಿಯೋಜಕರ ಪೂರ್ವಭಾವಿ ಪರೀಕ್ಷೆಯಲ್ಲಿ 2,000ಕ್ಕೂ ಅಧಿಕ ಅಭ್ಯರ್ಥಿಗಳು ಪಾಸು ಮಾಡಿದ್ದು, ಮುಖ್ಯ ಪರೀಕ್ಷೆಗೆ 1,700 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
Lawyers
Lawyers
Published on

ಸಹಾಯಕ ಸರ್ಕಾರಿ ಅಭಿಯೋಜಕರ ಪರೀಕ್ಷೆ ಶೀಘ್ರದಲ್ಲೇ ಆರಂಭವಾಗುವ ಹಿನ್ನೆಲೆಯಲ್ಲಿ ಹಳೆಯ ವಿಧಾನದಲ್ಲಿಯೇ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟಿಸಿ, ಪರೀಕ್ಷೆಗೂ ಮುನ್ನ ಕನಿಷ್ಠ 15 ದಿನ ಕಾಲಾವಕಾಶ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್ಸ್‌ ಮತ್ತು ಸರ್ಕಾರಿ ಮೊಕದ್ದಮೆ ವಿಭಾಗದ ನಿರ್ದೇಶಕರಿಗೆ ಬೆಂಗಳೂರು ವಕೀಲರ ಸಂಘ ಮನವಿ ಮಾಡಿದೆ.

ಸಹಾಯಕ ಸರ್ಕಾರಿ ಅಭಿಯೋಜಕರ ಪೂರ್ವಭಾವಿ ಪರೀಕ್ಷೆಯಲ್ಲಿ 2,000ಕ್ಕೂ ಅಧಿಕ ಅಭ್ಯರ್ಥಿಗಳು ಪಾಸು ಮಾಡಿದ್ದು, ಮುಖ್ಯ ಪರೀಕ್ಷೆಗೆ 1,700 ಮಂದಿಯನ್ನು ಮಾತ್ರ ಆಹ್ವಾನಿಸಲಾಗಿದೆ. ಇದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ. ಮಾದರಿ ಪ್ರಶ್ನೆ ಪತ್ರಿಕೆ-1ದಲ್ಲಿ ಪಠ್ಯಕ್ರಮದ ಹೊರತಾಗಿ ಪ್ರಶ್ನೆಗಳನ್ನು ಕೇಳಲಾಗಿದೆ. ಹಳೆಯ ವಿಧಾನಕ್ಕೆ ಬದಲಾಗಿ ಹೊಸ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ರೂಪಿಸಲಾಗಿದೆ ಎಂಬ ಆಕ್ಷೇಪಗಳು ವ್ಯಕ್ತವಾಗಿವೆ. ಇದು ಪರೀಕ್ಷಾರ್ಥಗಳಲ್ಲಿ ಆತಂಕ ಉಂಟು ಮಾಡಿದೆ. ಹೀಗಾಗಿ, ಪ್ರಾಸಿಕ್ಯೂಷನ್‌ ನಿರ್ದೇಶಕರು ಮತ್ತು ಗೃಹ ಇಲಾಖೆಯು ಸ್ಪಷ್ಟನೆ ನೀಡುವ ಮೂಲಕ ಅಭ್ಯರ್ಥಿಗಳಲ್ಲಿ ಆತಂಕ ದೂರಮಾಡಬೇಕು ಎಂದು ಕೋರಲಾಗಿದೆ.

ಹಲವು ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಅವರನ್ನು ಏತಕ್ಕಾಗಿ ಮುಖ್ಯ ಪರೀಕ್ಷೆಗೆ ಆಹ್ವಾನಿಸಿಲ್ಲ ಎಂಬುದನ್ನು ತಿಳಿಸಬೇಕು. ಅಲ್ಲದೇ, ಅವರಿಗೂ ಮುಖ್ಯ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ಪರೀಕ್ಷೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಕಾನೂನು ಶಾಲೆಯು ಪ್ರಶ್ನೆಗಳು ಪಠ್ಯಕ್ರಮಕ್ಕೆ ಸೀಮಿತವಾಗಿರುವಂತೆ ಖಾತರಿಪಡಿಸಬೇಕು. ಬಹುತೇಕ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದು ಈ ಹಂತದಲ್ಲಿ ಪರೀಕ್ಷಾ ವಿಧಾನ ಬದಲಿಸುವುದರಿಂದ ಸಮಸ್ಯೆಯಾಗುತ್ತದೆ ಎಂದು ವಿವರಿಸಲಾಗಿದೆ.

ಪರೀಕ್ಷೆ ಒಂದು ವಾರವಿರುವಾಗ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿರುವುದರಿಂದ ಹಳೆಯ ವಿಧಾನದಲ್ಲಿನ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಅಭ್ಯರ್ಥಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ, ಹಳೆಯ ವಿಧಾನದಲ್ಲಿ ಪರೀಕ್ಷೆ ನಡೆಸುವ ಎಲ್ಲರಿಗೂ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎಎಬಿ ಕೋರಿದೆ.

Kannada Bar & Bench
kannada.barandbench.com