ಆಪ್‌ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ: ಏ.13ರೊಳಗೆ ನಿರ್ಧಾರ ಕೈಗೊಳ್ಳಲು ಭಾರತೀಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಗಡುವು

ಆಗ ಪೀಠವು ಚುನಾವಣಾ ಆಯೋಗದ ಪರ ವಕೀಲರನ್ನು ಕುರಿತು “ಇನ್ನೂ ನೀವು ಏಕೆ ಮನವಿಯನ್ನು ಪರಿಗಣಿಸಿಲ್ಲ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿತು.
AAP
AAP

ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡುವಂತೆ ಕೋರಿ ಆಮ್‌ ಆದ್ಮಿ ಪಕ್ಷ (ಆಪ್‌) ಸಲ್ಲಿಸಿರುವ ಮನವಿಯ ಸಂಬಂಧ ಏಪ್ರಿಲ್‌ 13ರ ಒಳಗೆ ನಿರ್ಧಾರ ಕೈಗೊಳ್ಳುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಗುರುವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಮೂರುವರೆ ತಿಂಗಳ ಹಿಂದೆ ಸಲ್ಲಿಸಿರುವ ಮನವಿಯ ಸಂಬಂಧ ಇನ್ನೂ ಆಯೋಗವು ನಿರ್ಧಾರ ಕೈಗೊಂಡಿಲ್ಲ ಎಂದು ಆಕ್ಷೇಪಿಸಿ ಆಪ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ಇತ್ಯರ್ಥಪಡಿಸಿತು.

ಕಾನೂನಿನ ಅನ್ವಯ ಅರ್ಜಿದಾರರು ತಮ್ಮ ಪಕ್ಷವನ್ನು ರಾಷ್ಟ್ರೀಯ ಪಕ್ಷ ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ‌ ಸಂಬಂಧ ಏಪ್ರಿಲ್‌ 13ರ ಒಳಗೆ ತಡ ಮಾಡದೇ ನಿರ್ಧಾರ ಕೈಗೊಳ್ಳಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ದಿವಾಕರ್‌ ಅವರು “ಮೂರೂವರೆ ತಿಂಗಳ ಹಿಂದೆ ಆಪ್‌ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ಕಲ್ಪಿಸುವಂತೆ ಇಸಿಐಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಈ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ” ಎಂದು ಆಕ್ಷೇಪಿಸಿದರು.

ಆಗ ಪೀಠವು ಚುನಾವಣಾ ಆಯೋಗದ ಪರ ವಕೀಲರನ್ನು ಕುರಿತು “ಇನ್ನೂ ನೀವು ಏಕೆ ಮನವಿಯನ್ನು ಪರಿಗಣಿಸಿಲ್ಲ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿತು.

ಆಗ ಆಯೋಗದ ಪರ ವಕೀಲರು “ಶೀಘ್ರದಲ್ಲಿ ಅರ್ಜಿಯ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಪೀಠಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪೀಠವು ಏಪ್ರಿಲ್‌ 13ರ ಒಳಗೆ ಮನವಿಯ ಸಂಬಂಧ ನಿರ್ಧಾರ ಕೈಗೊಳ್ಳುವಂತೆ ಆದೇಶಿಸಿ, ಅರ್ಜಿ ವಿಲೇವಾರಿ ಮಾಡಿತು.

ದೆಹಲಿ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ಅಧಿಕಾರ ಹಿಡಿದಿರುವ ಆಪ್‌, ಗೋವಾ ಮತ್ತು ಗುಜರಾತ್‌ ವಿಧಾನಸಭಾ ಚುನಾವಣೆಗಳಲ್ಲಿ ಶೇ 6ರಷ್ಟು ಮತ ಪಡೆದಿದೆ. ಚುನಾವಣಾ ಚಿಹ್ನೆ (ಮೀಸಲು ಮತ್ತು ಹಂಚಿಕೆ) ಆದೇಶ 1968ರ ಸೆಕ್ಷನ್‌ 6(ಬಿ) ಪ್ರಕಾರ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶೇ 6ಕ್ಕಿಂತ ಹೆಚ್ಚು ಮತ ಪಡೆದರೆ ಅದನ್ನು ರಾಷ್ಟ್ರೀಯ ಪಕ್ಷ ಎಂದು ಘೋಷಿಸಬೇಕು ಎಂದು ಹೇಳಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ಹಿನ್ನೆಲೆಯಲ್ಲಿ 2022ರ ಡಿಸೆಂಬರ್‌ 19ರಂದು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಪ್‌ಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ಕಲ್ಪಿಸಬೇಕು ಎಂದು ಕೋರಿತ್ತು. ಅಲ್ಲದೇ, ಫೆಬ್ರವರಿ 6, ಮಾರ್ಚ್‌ 8 ಮತ್ತು 15ರಂದು ಮತ್ತೆ ನೆನಪು ಮಾಡಲಾಗಿತ್ತು. ಅದಾಗ್ಯೂ, ಮನವಿ ಪರಿಗಣಿಸದ ಹಿನ್ನೆಲೆಯಲ್ಲಿ ಆಪ್‌ ಹೈಕೋರ್ಟ್‌ ಕದ ತಟ್ಟಿತ್ತು.

ಅರ್ಜಿದಾರರ ಪರವಾಗಿ ಆನ್‌ ರೆಕಾರ್ಡ್‌ ವಕೀಲರಾಗಿ ಕೆ ಅಭಿಷೇಕ್‌ ಅವರು ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com