ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿಯನ್ನು ಆರೋಪಿಯಾಗಿ ಮಾಡಲಾಗುವುದು: ದೆಹಲಿ ಹೈಕೋರ್ಟ್‌ಗೆ ಇ ಡಿ ಮಾಹಿತಿ

ಸಿಸೋಡಿಯಾ ಪರ ವಕೀಲರು, ಸಿಬಿಐ ಹಾಗೂ ಇ ಡಿ ಮಂಡಿಸಿದ ವಾದಗಳನ್ನು ವಿವರವಾಗಿ ಆಲಿಸಿದ ನ್ಯಾಯಾಲಯ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.
Manish Sisodia and Delhi HCFacebook
Manish Sisodia and Delhi HCFacebook

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಔಪಚಾರಿಕವಾಗಿ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಜಾರಿ ನಿರ್ದೇಶನಾಲಯ (ಇ ಡಿ) ಮಂಗಳವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಎಎಪಿ ನಾಯಕ ಹಾಗೂ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸುವ ವೇಳೆ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರಿಗೆ ಇ ಡಿ ಪರ ವಾದ ಮಂಡಿಸಿದ ವಿಶೇಷ ವಕೀಲ ಜೊಹೆಬ್ ಹುಸೇನ್ ಅವರು ಈ ಮಾಹಿತಿ ನೀಡಿದರು. 

ಆದರೆ ಸಿಸೋಡಿಯಾ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರು ಎಂದು ಅವರ ಪರ ವಕೀಲರು ವಾದಿಸಿದರು.

ಸಿಸೋಡಿಯಾ ಅವರ ಜಾಮೀನು ಅರ್ಜಿ ವಜಾಗೊಳಿಸಿದ ಬಳಿಕ ಮೂವರು ಆರೋಪಿಗಳಾದ ಬಿನೊಯ್‌ ಬಾಬು, ಸಂಜಯ್‌ ಸಿಂಗ್‌ ಹಾಗೂ ಈಚೆಗೆ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ದೊರೆತಿದೆ. ಸಿಸೋಡಿಯಾ ಅವರು ಓಡಿ ಹೋಗುವ ಯಾವುದೇ ಭೀತಿ ಇಲ್ಲ. ಆರೋಪಪಟ್ಟಿ ಸಲ್ಲಿಸುವುದಕ್ಕೂ ಮೊದಲೇ ಸಿಸೋಡಿಯಾ ಅವರನ್ನು ಬಂಧಿಸಲಿಲ್ಲ ಎಂಬ ಅಂಶದಿಂದ ತನಿಖಾ ಸಂಸ್ಥೆ ತಪ್ಪಿಸಿಕೊಳ್ಳಲಾಗದು. ಸಿಸೋಡಿಯಾ 14.5 ತಿಂಗಳಿನಿಂದ ಬಂಧನದಲ್ಲಿದ್ದಾರೆ ಎಂಬುದಾಗಿ ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಮೋಹಿತ್ ಮಾಥುರ್ ವಾದಿಸಿದರು.

ವಾದಗಳನ್ನು ವಿವರವಾಗಿ ಆಲಿಸಿದ ನ್ಯಾಯಾಲಯ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.

ವಿಚಾರಣೆ ವಿಳಂಬಕ್ಕೆ ಯಾರು ಹೊಣೆ?

ಸಿಸೋಡಿಯಾ ಪರ ಹಾಜರಾದ ಹಿರಿಯ ವಕೀಲ ದಯನ್ ಕೃಷ್ಣನ್, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕನ ವಿರುದ್ಧದ ವಿಚಾರಣೆ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿಲ್ಲ ಎಂದು ದೂರಿದರು.

ವಿಚಾರಣೆಯನ್ನು ವಿಳಂಬಗೊಳಿಸಲು ಸಿಸೋಡಿಯಾ ಯತ್ನಿಸಿದ್ದರು ಎಂದು ಇ ಡಿ ಅರ್ಜಿಗಳನ್ನು ಅವಲಂಬಿಸಿ ವಿಚಾರಣಾ ನ್ಯಾಯಾಲಯ ಆರೋಪಿಸಿತ್ತು. ಆದರೆ ವಿಚಾರಣಾ ನ್ಯಾಯಾಲಯ ತೀರ್ಪು ನೀಡುವ ವೇಳೆ ವಿವೇಚನೆ ಬಳಸಿಲ್ಲ. ತಿಹಾರ್ ಜೈಲಿನಲ್ಲಿ ಕುಳಿತು ವಿಚಾರಣೆಯನ್ನು ವಿಳಂಬಗೊಳಿಸಲು ಪಿತೂರಿ ನಡೆಸುತ್ತಿದ್ದೇವೆ ಎಂದು ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಿಗೆ ಅನ್ನಿಸಿದ್ದಾದರೂ ಹೇಗೆ? ಇ ಡಿಯೇ ವಿಚಾರಣೆ ವಿಳಂಬಗೊಳಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಸಿಸೋಡಿಯಾ ಅವರ ವಿರುದ್ಧದ ಸಿಬಿಐ ಪ್ರಕರಣದಲ್ಲಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮೋಹಿತ್‌ ಮಾಥೂರ್ ಇದಕ್ಕೆ ದನಿಗೂಡಿಸಿದರು. ಇ ಡಿಯನ್ನು ಪ್ರತಿನಿಧಿಸಿದ ವಿಶೇಷ ವಕೀಲ ಜೊಹೆಬ್‌ ಹುಸೇನ್ ಈ ವಾದಗಳನ್ನು ಬಲವಾಗಿ ವಿರೋಧಿಸಿದರು. ಸಿಸೋಡಿಯಾ ಹಗರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಅವರಿಗೆ ಜಾಮೀನು ನೀಡಬಾರದು ಎಂದು ವಾದಿಸಿದರು. ಇದಕ್ಕೆ ಪೂರಕವಾಗಿ ಸಿಬಿಐ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರಿಪುದಮನ್‌ ಭಾರದ್ವಾಜ್‌ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com