
ಸರ್ಕಾರಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದರಿಂದ ಮನನೊಂದು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವಾಹನದ ಚಾಲಕ ಬಾಬು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾದ ಪ್ರಕರಣದಲ್ಲಿ ಬಿಜೆಪಿ ಸಂಸದ ಡಾ. ಕೆ ಸುಧಾಕರ್ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೋಮವಾರ ನಿರ್ದೇಶಿಸಿದೆ.
ಚಿಕ್ಕಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ವಜಾ ಕೋರಿ ಸುಧಾಕರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ನಡೆಸಿತು.
“ಚಿಕ್ಕಬಳ್ಳಾಪುರ ಗ್ರಾಮೀಣ ಠಾಣೆಯ ಪೊಲೀಸರು ಸುಧಾಕರ್ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು. ಸುಧಾಕರ್ ತನಿಖೆಗೆ ಸಹಕರಿಸಬೇಕು. ಹೈಕೋರ್ಟ್ ಅನುಮತಿ ಪಡೆಯದೇ ಸಕ್ಷಮ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಂತಿಲ್ಲ” ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಅರ್ಜಿದಾರ ಸುಧಾಕರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಸಾವನ್ನಪ್ಪಿರುವ ಬಾಬು ಜೊತೆ ಸುಧಾಕರ್ ಯಾವುದೇ ಸಂಪರ್ಕ ಹೊಂದಿರಲಿಲ್ಲ. ಸುಧಾಕರ್ ಅವರು ಒಂದೇ ಒಂದು ಪೈಸೆ ಹಣವನ್ನೂ ಬಾಬು ಅವರಿಂದ ಪಡೆದಿಲ್ಲ. ಬಾಬು ಹಣ ನೀಡಿದ್ದಾರೆ ಎನ್ನಲಾದ ಮಂಜುನಾಥ್ ಮತ್ತು ನಾಗೇಶ್ ಸಹ ಸುಧಾಕರ್‌ಗೆ ಪರಿಚಿತರಲ್ಲ. ಹೀಗಾಗಿ, ಸುಧಾಕರ್ ವಿರುದ್ಧ ಮಾಡಿರುವ ಆರೋಪ ಸುಳ್ಳು” ಎಂದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಅನುಮಾನ ಬಂದಿದೆ. ತನಿಖೆ ನಡೆಸಲು ಅನುಮತಿಸಬೇಕು, ಸುಧಾಕರ್ ಅವರನ್ನು ಬಂಧಿಸುವುದಿಲ್ಲ” ಎಂದರು.
ಪ್ರಕರಣದ ಹಿನ್ನೆಲೆ: ಬಾಬು ಅವರ ಪತ್ನಿಯು ಬಾಬು ಡೆತ್ ನೋಟ್ ಆಧರಿಸಿ ಆಗಸ್ಟ್ 7ರಂದು ಚಿಕ್ಕಬಳ್ಳಾಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ, 2021ರಲ್ಲಿ ಸಚಿವರಾಗಿದ್ದ ಡಾ. ಕೆ ಸುಧಾಕರ್ ಮತ್ತು ಅವರ ಪರಿಚಿತರು ಎನ್ನಲಾದ ನಾಗೇಶ್ ಮತ್ತು ಮಂಜುನಾಥ್ ಅವರು ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಪತಿ ಬಾಬು ಅವರಿಂದ ₹35 ಲಕ್ಷ ಲಂಚ ಪಡೆದಿದ್ದರು. ಬಾಬು ಅವರು ಈ ಹಣವನ್ನು ಸಾಲ ಮಾಡಿ ನೀಡಿದ್ದರು. ಈ ನಡುವೆ ಕೆಲಸವೂ ಸಿಗದೆ, ಸಾಲಬಾಧೆ ಹೆಚ್ಚಾಗಿ, ಮಾನಸಿಕವಾಗಿ ನೊಂದಿದ್ದರು ಎಂದು ತಿಳಿಸಿದ್ದಾರೆ.
ಇದರ ಅನ್ವಯ ಕೆ ಸುಧಾಕರ್, ನಾಗೇಶ್ ಮತ್ತು ಮಂಜುನಾಥ್ ವಿರುದ್ಧ ಬಿಎನ್‌ಎಸ್ ಸೆಕ್ಷನ್‌ಗಳಾದ 108, 352, 351(2), 3(5) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಸೆಕ್ಷನ್‌ಗಳಾದ 3(2)(v) ಅಡಿ ಪ್ರಕರಣ ದಾಖಲಿಸಲಾಗಿದೆ.