ಪಶ್ಚಿಮ ಬಂಗಾಳ ಕಲ್ಲಿದ್ದಲು ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ ನವದೆಹಲಿಯ ಜಾರಿ ನಿರ್ದೇಶನಾಲಯ (ಇ ಡಿ) ನೀಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಟಿಎಂಸಿ ನಾಯಕ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಪತ್ನಿ ರುಜಿರಾ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಸಿಬಿಐನ ನಿಯತ ದೂರಿನಲ್ಲಿ ತನ್ನ ಅಥವಾ ತನ್ನ ಪತ್ನಿಯ ಹೆಸರಿಲ್ಲ. ಆದರೂ ಇ ಡಿ ಸಮನ್ಸ್ ನೀಡಿದೆ ಎಂದು ಬ್ಯಾನರ್ಜಿ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಪಿಎಂಎಲ್‌ಎ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ತನ್ನ ನಿಬಂಧನೆಗಳಿಗೆ ಹೊಂದಿಕೆಯಾಗದಿದ್ದರೂ ಅಕ್ರಮ ಹಣ ವರ್ಗಾವಣೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 65 ಅನ್ನು, ಕ್ರಿಮಿನಲ್ ಪ್ರೊಸೀಜರ್ ಕೋಡ್‌ಗೆ (ಸಿಆರ್‌ಪಿಸಿ) ಅನ್ವಯಿಸಲಾಗಿದೆ.
ಆದ್ದರಿಂದ, ಪಿಎಂಎಲ್ಎ ಸೆಕ್ಷನ್ 50 ರ ಅಡಿಯಲ್ಲಿ ಆರೋಪಿತನಾಗದ ವ್ಯಕ್ತಿಗೆ ನೀಡಿದ ಸಮನ್ಸ್ ಅನ್ನು ಸೆಕ್ಷನ್ 160 ಸಿಆರ್‌ಪಿಸಿ ಅಡಿ ಸಮನ್ಸ್ ಎಂದು ಪರಿಗಣಿಸಬೇಕು ಎಂದು ವಾದಿಸಲಾಗಿದೆ. ಇದೇ ವಿಚಾರವು, ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವ್ಯಕ್ತಿಗಳನ್ನು ವಿಚಾರಣೆಗೆ ಕರೆಸಿಕೊಳ್ಳುವ ಅಧಿಕಾರಿಗಳಿಗೂ ಅನ್ವಯಿಸಬೇಕು ಎಂದು ಕೋರಲಾಗಿದ್ದು ಪ್ರಸ್ತುತ ಪ್ರಕರಣದಲ್ಲಿ ಅಧಿಕಾರ ವ್ಯಾಪ್ತಿ ನವದೆಹಲಿಯ ಪ್ರಾದೇಶಿಕ ಮಿತಿಗಳನ್ನು ಮೀರಿದೆ ಎಂದು ವಾದಿಸಲಾಯಿತು.
ಈ ಹಿನ್ನೆಲೆಯಲ್ಲಿ, ಇಬ್ಬರು ಅರ್ಜಿದಾರರ ವಿರುದ್ಧದ ತನಿಖೆಯು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆಯಬೇಕು ಏಕೆಂದರೆ, ಇ ಡಿಯ ಪರಿಪೂರ್ಣ ಮಟ್ಟದ ಕಾರ್ಯಕಾರಿ ವಲಯ ಕಚೇರಿ ಅಲ್ಲಿ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನದ ವ್ಯಾಜ್ಯ ಕಾರಣ ಹಾಗೂ ಅದರ ಎಲ್ಲಾ ಬೆಳವಣಿಗೆಗಳು ಪಶ್ಚಿಮ ಬಂಗಾಳದಲ್ಲಿ ನಡೆದಿರುವುದರಿಂದ ಅರ್ಜಿದಾರರ ವಿಚಾರಣೆಯನ್ನು ಕೋಲ್ಕತ್ತಾದಲ್ಲಿಯೇ ನಡೆಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಜೊತೆಗೆ, ಸಿಆರ್‌ಪಿಸಿಯ ಸೆಕ್ಷನ್ 160ರ ಪ್ರಕಾರ ಮಹಿಳಾ ಸಾಕ್ಷಿಯೊಬ್ಬಳು ಆಕೆಯ ನಿವಾಸ ಹೊರತುಪಡಿಸಿ ತನಿಖೆಯ ಉದ್ದೇಶಕ್ಕಾಗಿ ಯಾವುದೇ ಸ್ಥಳಕ್ಕೆ ಹಾಜರಾಗುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಲಾಗಿದೆ.
ಇ ಡಿ ಕೆಲ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ತನ್ನ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದು ಅಕ್ರಮದಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಅನಗತ್ಯ ರಕ್ಷಣೆ ನೀಡುತ್ತಿರುವ ಹಿನ್ನೆಲೆಯಲ್ಲಿ ತನಿಖೆಯ ನ್ಯಾಯಸಮ್ಮತತೆಯ ಬಗ್ಗೆ ತಮಗೆ ಆತಂಕವಿದೆ ಎಂದು ಅರ್ಜಿದಾರರು ಹೇಳಿದ್ದಾರೆ.
ಇ ಡಿ ತಮ್ಮಿಬ್ಬರಿಗೂ ಸಮನ್ಸ್ ನೀಡಿದೆಯಾದರೂ, ಅದು ಜಾರಿ ಪ್ರಕರಣ ಮಾಹಿತಿ ವರದಿಯ (ಇಸಿಐಆರ್) ಪ್ರತಿ ಒದಗಿಸಿಲ್ಲ. ಮತ್ತು ತಮ್ಮನ್ನು ಸಾಕ್ಷಿಯಾಗಿ ಕರೆಸಿಕೊಳ್ಳಲಾಗುತ್ತಿದೆಯೇ ಅಥವಾ ಆರೋಪಿಗಳನ್ನಾಗಿಯೇ ಎಂಬುದನ್ನೂ ತಿಳಿಸಿಲ್ಲ. ಅಲ್ಲದೆ, ಇ ಡಿ ತಮ್ಮ ರಾಜಕೀಯ ಪ್ರತಿಷ್ಠೆ ಹಾಳು ಮಾಡುವ ಉದ್ದೇಶದಿಂದ ಮಾಧ್ಯಮಗಳಿಗೆ ಮಾಹಿತಿಯನ್ನು ಆಯ್ದು ಸೋರಿಕೆ ಮಾಡುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಇ ಡಿ ನವದೆಹಲಿಯಿಂದ ತಮಗೆ ನೀಡಲಾದ ಸಮನ್ಸ್ ರದ್ದುಗೊಳಿಸಲು ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಭಿಷೇಕ್ ಮತ್ತು ಅವರ ಪತ್ನಿ, ಕೋರಿದ್ದು ದೆಹಲಿಯಲ್ಲಿ ತಮ್ಮ ವಿಚಾರಣೆ ನಡೆಸದಂತೆ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದಿದ್ದಾರೆ.