ಕರ್ತವ್ಯಕ್ಕೆ ಐದು ದಿನ ಗೈರು: ಖಾಸಗಿ ಶಾಲೆ ಅರೆಕಾಲಿಕ ಶಿಕ್ಷಕಿ ಸೇವೆ ವಜಾಗೊಳಿಸಿದ್ದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಮೇಲ್ಮನವಿದಾರರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಸೇವೆ ಕಾಯಂಗೊಂಡಿರಲಿಲ್ಲ. ಪ್ರೊಬೆಷನರಿ ಅವಧಿಯ ಸೇವೆಯನ್ನು ತೃಪ್ತಿಕವಾಗಿ ಪೂರೈಸಿದ್ದಾರೆ ಎಂಬುದಾಗಿ ಶಾಲೆಯಿಂದ ಘೋಷಣೆಯಾಗಿರಲಿಲ್ಲ ಎಂದಿರುವ ನ್ಯಾಯಾಲಯ.
Karnataka High Court
Karnataka High Court

ಐದು ದಿನ ಗೈರಾದ ಕಾರಣಕ್ಕಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಖಾಸಗಿ ಶಾಲೆಯ ಅರೆಕಾಲಿಕ ಶಿಕ್ಷಕಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದ ಶೈಕ್ಷಣಿಕ ಮೇಲ್ಮನವಿ ನ್ಯಾಯಮಂಡಳಿಯ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಎತ್ತಿಹಿಡಿದಿದೆ.

ಅಲ್ಪಾವಧಿಗೆ ಗೈರಾಗಿದ್ದಕ್ಕೆ ಸೇವೆಯಿಂದ ವಜಾಗೊಳಿಸಲಾಗಿದ್ದು, ಅದಕ್ಕೂ ಮುನ್ನ ಯಾವುದೇ ವಿಚಾರಣೆ ನಡೆಸಿಲ್ಲ ಮತ್ತು ವಿವರಣೆ ನೀಡಲು ತಮಗೆ ಸೂಕ್ತ ಅವಕಾಶ ಕಲ್ಪಿಸಿಲ್ಲ ಎಂದು ಆಕ್ಷೇಪಿಸಿ ದಾವಣಗೆರೆ ತಾಲ್ಲೂಕು ನಲ್ಕುಂದ ಗ್ರಾಮದ ಆರ್ ಸುಜಾತಮ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಬೆಂಗಳೂರಿನ ರಾಜಾಜಿನಗರದ ವಾಣಿ ವಿದ್ಯಾ ಕೇಂದ್ರದಲ್ಲಿ ಕನ್ನಡ ಶಿಕ್ಷಕಿಯಾಗಿ 2010ರಲ್ಲಿ ನೇಮಕಗೊಂಡಿದ್ದ ಆರ್ ಸುಜಾತಮ್ಮ 2013ರ ಫೆಬ್ರವರಿಯಲ್ಲಿ ಐದು ದಿನ ಕರ್ತವ್ಯಕ್ಕೆ ಗೈರಾಗಿದ್ದರು. ಸುಜಾತಮ್ಮ ತಮ್ಮ ಪುತ್ರಿಯ ಅನಾರೋಗ್ಯದ ಕಾರಣ ನೀಡಿ ದೀರ್ಘಕಾಲದ ರಜೆ ಪಡೆಯುತ್ತಿದ್ದರು. ಅಂತೆಯೇ ಅವರ ಬೋಧನಾ ಮಟ್ಟವೂ ಗಮನಾರ್ಹವಾಗಿರಲಿಲ್ಲ. ಐದು ದಿನ ರಜೆ ಹಾಕಿದ್ದಕ್ಕೆ ನೋಟಿಸ್‌ ನೀಡಿ ವಿವರಣೆ ಕೇಳಲಾಗಿತ್ತು. ಆದರೆ, ಅವರು ಸೂಕ್ತ ವಿವರಣೆ ನೀಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಶಿಕ್ಷಣ ಸಂಸ್ಥೆಯು ಸುಜಾತಮ್ಮ ಅವರನ್ನು ಸೇವೆಯಿಂದ ಬಿಡುಗಡೆ ಮಾಡಿ 2013ರ ಜುಲೈ 22ರಂದು ಆದೇಶಿಸಿತ್ತು.

ಈ ಆದೇಶ ಪ್ರಶ್ನಿಸಿ ಸುಜಾತಮ್ಮ ಶೈಕ್ಷಣಿಕ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಮಂಡಳಿ ವಜಾಗೊಳಿಸಿದ್ದರಿಂದ ಹೈಕೋರ್ಟ್‌ ಮೊರೆ ಹೋಗಿದ್ದರು. ಸುಜಾತಮ್ಮ ಅವರ ಸೇವೆಯಿಂದ ಬಿಡುಗಡೆ ಮಾಡಿದ್ದ ಕ್ರಮವನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ಎತ್ತಿಹಿಡಿದಿತ್ತು. ಇದರಿಂದ ಅವರು ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿದಾರರು ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಸೇವೆ ಕಾಯಂಗೊಂಡಿರಲಿಲ್ಲ. ಪ್ರೊಬೆಷನರಿ ಅವಧಿಯ ಸೇವೆಯನ್ನು ತೃಪ್ತಿಕವಾಗಿ ಪೂರೈಸಿದ್ದಾರೆ ಎಂಬುದಾಗಿ ಶಾಲೆಯಿಂದ ಘೋಷಣೆಯಾಗಿರಲಿಲ್ಲ. ಕರ್ತವ್ಯಕ್ಕೆ ಗೈರಾದ ಬಗ್ಗೆ ಶಿಕ್ಷಣ ಸಂಸ್ಥೆ ನೋಟಿಸ್‌ ನೀಡಿದ್ದರೂ ಆಕೆ ಸೂಕ್ತ ವಿವರಣೆ ನೀಡಿಲ್ಲ. ಮೇಲಾಗಿ ಅವರಿಗೆ ಸೇವಾ ನಿಯಮಗಳು ಅನ್ವಯಿಸುವುದಿಲ್ಲ. ಹೀಗಾಗಿ, ಅವರನ್ನು ಸೇವೆಯಿಂದ ಬಿಡುಗಡೆ ಮಾಡಿರುವ ಶಿಕ್ಷಣ ಸಂಸ್ಥೆಯು ತೀರ್ಮಾನ ಸರಿ ಇದೆ ಎಂದು ಹೇಳಿ ಏಕಸದಸ್ಯ ಪೀಠವು 2022ರ ಅಕ್ಟೋಬರ್‌ 31ರಂದು ಹೊರಡಿಸಿದ್ದ ತೀರ್ಪು ಸೂಕ್ತವಾಗಿದೆ . ಅದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯ ಕಂಡುಬರುತ್ತಿಲ್ಲ ಎಂದು ತೀರ್ಮಾನಿಸಿದ ವಿಭಾಗೀಯ ಪೀಠವು ಮೇಲ್ಮನವಿ ವಜಾಗೊಳಿಸಿದೆ.

Attachment
PDF
Sujathamma Vs Sri Vani Education Center.pdf
Preview

Related Stories

No stories found.
Kannada Bar & Bench
kannada.barandbench.com