ವ್ಯಭಿಚಾರವನ್ನು ಅಪರಾಧೀಕರಿಸುವ ಕಾನೂನು ಇಲ್ಲದಿರುವುದು ದ್ವಿಪತ್ನಿತ್ವಕ್ಕೆ ಪರವಾನಗಿ ಅಲ್ಲ: ದೆಹಲಿ ಹೈಕೋರ್ಟ್

ವ್ಯಭಿಚಾರವನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂದ ಮಾತ್ರಕ್ಕೆ ಮೊದಲ ಮದುವೆ ಊರ್ಜಿತವಾಗಿರುವ ಸಮಯದಲ್ಲೇ ಬೇರೊಬ್ಬರನ್ನು ಗುಟ್ಟಾಗಿ ಮದುವೆಯಾಗಬಹುದು ಎಂದರ್ಥವಲ್ಲ ಎಂಬುದಾಗಿ ತಿಳಿಸಿದ ನ್ಯಾಯಾಲಯ.
ಮದುವೆ
ಮದುವೆ
Published on

ವ್ಯಭಿಚಾರವನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲದಿರುವುದು ಮೊದಲ ಮದುವೆ ಊರ್ಜಿತವಾಗಿರುವ ಸಂದರ್ಭದಲ್ಲಿಯೇ ಬೇರೊಬ್ಬರನ್ನು ಮದುವೆಯಾಗಲು ಜನರಿಗೆ ಸಂಪೂರ್ಣ ರಕ್ಷಣೆಯನ್ನು ನೀಡದು ಎಂದು ದೆಹಲಿ ಹೈಕೋರ್ಟ್‌ ಈಚೆಗೆ ತಿಳಿಸಿದೆ.

ವ್ಯಭಿಚಾರವನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂದ ಮಾತ್ರಕ್ಕೆ ಮೊದಲ ಮದುವೆ ಊರ್ಜಿತವಾಗಿರುವ ಸಮಯದಲ್ಲೇ ಬೇರೊಬ್ಬರನ್ನು ಗುಟ್ಟಾಗಿ ಮದುವೆಯಾಗಬಹುದು ಎಂದರ್ಥವಲ್ಲ. ಅದೇ ರೀತಿ ಅಂತಹ ಸಂಬಂಧವನ್ನು ಆಕ್ಷೇಪಿಸುವ ಮೊದಲ ಸಂಗಾತಿಯು ಎರಡನೆಯ ಮದುವೆಯು ಅಗತ್ಯ ವಿಧಿ, ವಿಧಾನಗಳ ಮೂಲಕ ಸಿಂಧುವಾಗಿದೆ ಎಂದು ನಿರೂಪಿಸಬೇಕು ಎಂದು ವಾದಿಸುವಂತಿಲ್ಲ ಎಂಬುದಾಗಿ ನ್ಯಾ. ಸ್ವರಣ ಕಾಂತಾ ಶರ್ಮಾ ಹೇಳಿದರು.

ಹೀಗಾಗಿ ದ್ವಿಪತ್ನಿತ್ವ ಪ್ರಕರಣದಲ್ಲಿ ಸಮನ್ಸ್‌ ನೀಡುವ ಹಂತದಲ್ಲಿ ತನ್ನ ಪತಿ/ ಪತ್ನಿಯ ಎರಡನೇ ಮದುವೆಗೆ ಸಂಬಂಧಿಸಿದಂತೆ ಅವರು ಸಪ್ತಪದಿ ತುಳಿದಿದ್ದಾರೆ ಎಂಬುದನ್ನು ಸಂಗಾತಿ ಸಾಬೀತುಪಡಿಸದೇ ಇರುವುದನ್ನು ಕಾನೂನಿನ ಪರಿಣಾಮವನ್ನು ಎದುರಿಸುವುದರಿಂದ ನುಣುಚಿಕೊಳ್ಳಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ.

ದ್ವಿಪತ್ನಿತ್ವದ ಅಪರಾಧದ ಕಾನೂನು ಪರಿಣಾಮದಿಂದ ತಪ್ಪಿಸಿಕೊಳ್ಳಲು ಬುದ್ಧಿವಂತಿಕೆಯ ತಂತ್ರವನ್ನು ಬಳಸಿಕೊಳ್ಳಬಾರದು. ಕಾನೂನು ಪ್ರಕ್ರಿಯೆಗಳು ತಂತ್ರಗಾರಿಕೆಯ ಅಂಶಗಳನ್ನು ಒಳಗೊಳ್ಳುತ್ತವಾದರೂ ಅಂತಹ ಜಾಣ್ಮೆಯ ತಂತ್ರಗಳನ್ನು ನ್ಯಾಯ ಮತ್ತು ನ್ಯಾಯಿಕ ತತ್ವದೊಂದಿಗೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ಏಕಸದಸ್ಯ ಪೀಠ ನುಡಿದಿದೆ.

ಎರಡನೇ ಮದುವೆ ರಹಸ್ಯವಾಗಿ ನಡೆಯುವುದರಿಂದ ಅದನ್ನು ಸಾಬೀತುಪಡಿಸುವುದು ಕಷ್ಟ ಎಂಬ ವಿಚಾರವನ್ನು ನ್ಯಾಯಾಲಯ ಒಪ್ಪಿಕೊಂಡಿತು.

ಮದುವೆಯ ಆಚರಣೆಗೆ ಅಗತ್ಯವಾದ ಎಲ್ಲಾ ಸಮಾರಂಭಗಳನ್ನು ಪತಿ ತನ್ನ ಎರಡನೇ ಮದುವೆಯಲ್ಲಿ ನಿರ್ವಹಿಸಿದ್ದಾನೆ ಎಂದು ಸಾಬೀತುಪಡಿಸುವಂತೆ ಸಮನ್ಸ್ ನೀಡುವ ಹೆಂಡತಿಯನ್ನು ಕೇಳಿದರೆ ಅದು ಆಕೆಗೆ ತೊಡಕುಂಟುಮಾಡುವಂತಹ ಹೊರೆಯಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 494 ರ ಅಡಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮಹಿಳೆಯ ಪತಿ, ಎರಡನೇ ಹೆಂಡತಿ ಹಾಗೂ ಆತನ ಹೆತ್ತವರಿಗೆ ಸಮನ್ಸ್‌ ನೀಡಿತ್ತು. ಈ ಆದೇಶವನ್ನು ಸೆಷನ್ಸ್‌ ನ್ಯಾಯಾಲಯ ರದ್ದಗೊಳಿಸಿತ್ತು. ಸೆಷನ್ಸ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಐಪಿಸಿ ಸೆಕ್ಷನ್ 494 ದ್ವಿಪತ್ನಿತ್ವವನ್ನು ಅಪರಾಧ ಎನ್ನುತ್ತದೆ.

ಈ ಹಿನ್ನೆಲೆಯಲ್ಲಿ ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಹೈಕೋರ್ಟ್‌ ಪ್ರಕರಣದ ಆರೋಪಿಗಳಿಗೆ ಸಮನ್ಸ್ ನೀಡುವ ಮ್ಯಾಜಿಸ್ಟ್ರೇಟ್ ನಿರ್ಧಾರ ಎತ್ತಿಹಿಡಿಯಿತು.

Kannada Bar & Bench
kannada.barandbench.com