

ರಜೆ ಪಡೆಯದೆ ನೌಕರಿಗೆ ಗೈರಾಗುವುದು ದುರ್ನಡತೆಯಾಗಲಿದ್ದು, ಶ್ರದ್ಧೆಯಿಂದ ಕೆಲಸ ಮಾಡದ ಉದ್ಯೋಗಿಗೆ ಸಹಾನುಭೂತಿ ತೋರುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ಅನಧಿಕೃತವಾಗಿ ಉದ್ಯೋಗಕ್ಕೆ ಗೈರಾದ ಹಿನ್ನೆಲೆಯಲ್ಲಿ ಟ್ರೈನಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಸೇವೆಯಿಂದ ತೆಗೆದುಹಾಕಿದ್ದ ಆದೇಶ ರದ್ದುಪಡಿಸಿದ ಕಾರ್ಮಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಬಿಎಂಟಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ಜ್ಯೋತಿ ಅವರ ಏಕಸದಸ್ಯ ಪೀಠವು ಪುರಸ್ಕರಿಸಿದೆ.
ರಜೆ ಕೋರಿಕೆಯನ್ನಾಗಲಿ ಅಥವಾ ಪೂರ್ವಾನುಮತಿಯನ್ನಾಗಲಿ ಪಡೆಯದೆ ಉದ್ಯೋಗಿಯು 2016ರ ಡಿಸೆಂಬರ್ 1ರ ನಂತರ ಅನಧಿಕೃತವಾಗಿ ನೌಕರಿಗೆ ಗೈರಾಗಿದ್ದಾರೆ. ಈ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಬಿಎಂಟಿಸಿ ಶಿಸ್ತು ಪ್ರಾಧಿಕಾರವು ಸೇವೆಯಿಂದ ಉದ್ಯೋಗಿಯನ್ನು ವಜಾಗೊಳಿಸಿದೆ. ಉದ್ಯೋಗ ನಿರ್ವಹಣೆ ಮಾಡುವ ಸಮಯದಲ್ಲಿ ಸಕಾರಣವಿಲ್ಲದೆ ಉದ್ಯೋಗಕ್ಕೆ ನೌಕರ ಅನಧಿಕೃತವಾಗಿ ಗೈರಾಗಬಾರದು. ರಜೆ ಕೋರದೆ ಉದ್ಯೋಗಕ್ಕೆ ಗೈರಾಗುವುದು ದುರ್ನಡತೆಯಾಗಲಿದೆ. ದುರ್ನಡತೆಯು ಶಿಸ್ತು ಕ್ರಮವನ್ನು ಸಮರ್ಥಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಯಾವುದೇ ಉದ್ಯೋಗಿ ಗೈರುಹಾಜರಿಯ ರಜೆಯನ್ನು ಹಕ್ಕೆಂದು ಸಾಧನೆ ಮಾಡಲಾಗದು. ರಜೆ ಕೋರದೆ ಉದ್ಯೋಗಕ್ಕೆ ಗೈರಾಗುವುದು ಶಿಸ್ತಿನ ಉಲ್ಲಂಘನೆಯಾಗುತ್ತದೆ. ಈ ಪ್ರಕರಣದಲ್ಲಿ ಉದ್ಯೋಗಿ ಅನಧಿಕೃತವಾಗಿ ನೌಕರಿಗೆ ಗೈರಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಉದ್ಯೋಗಿಗೆ ಶಿಕ್ಷೆ ನೀಡಲಾಗಿದೆ. ಆದರೆ, ಅವರು ದೀರ್ಘಾವಧಿ ಸೇವೆ ಸಲ್ಲಿಸಿದ್ದಾರೆ ಎಂಬ ಆಧಾರದಲ್ಲಿ ಶಿಕ್ಷೆಯನ್ನು ಕಾರ್ಮಿಕ ನ್ಯಾಯಾಲಯವು ರದ್ದುಪಡಿಸಿದೆ. ದೀಘಾವಧಿ ಸೇವೆಯು ದುರ್ನಡತೆಯನ್ನು ಕ್ಷಮಿಸುವ ಮಾನದಂಡವಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರತಿವಾದಿ ಉದ್ಯೋಗಿಯು ಶ್ರದ್ದೆಯಿಂದ ಕೆಲಸ ಮಾಡುವಂತಹ ಆಸಕ್ತಿ ಹೊಂದಿರಲಿಲ್ಲ. ಶ್ರದ್ದೆಯಿಂದ ಕೆಲಸ ಮಾಡದ ಉದ್ಯೋಗಿಗೆ ಯಾವುದೇ ಸಹಾನುಭೂತಿ ತೋರುವ ಅಗತ್ಯವಿಲ್ಲ. ಸಹಾನೂಭೂತಿ ತೋರುವುದು ತಪ್ಪಾಗುತ್ತದೆ. ಹೀಗಾಗಿ, ಪ್ರತಿವಾದಿ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸಿ ಬಿಎಂಟಿಸಿ 2018ರಂದು 29ರಂದು ಹೊರಡಿಸಿದ ಆದೇಶವನ್ನು ಪುರಸ್ಕರಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.