ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬಂಧಿತರಾಗಿರುವ ಉಪ ತಹಶೀಲ್ದಾರ್ ಪಿ ಎಸ್ ಮಹೇಶ್ ಅವರ ಜಾಮೀನು ಮನವಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ತಮ್ಮನ್ನು ಕುರಿತು ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಕೈಬಿಡುವಂತೆ ಕೋರಿ ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸೀಮಂತ್ ಕುಮಾರ್ ಸಿಂಗ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ಹಿಂಪಡೆದರು.
ಈ ಸಂಬಂಧ ಸೀಮಂತ್ ಕುಮಾರ್ ಸಿಂಗ್ ಪರ ವಕೀಲ ಶ್ರೀನಿವಾಸ್ ರಾವ್ ಎಸ್ ಎಸ್ ಅವರು ಸಲ್ಲಿಸಿದ ಮೆಮೊ ಪರಿಗಣಿಸಿದ ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ಪೀಠವು ಅರ್ಜಿ ಹಿಂಪಡೆಯಲು ಅನುಮತಿಸಿತು.
ಇದೇ ರೀತಿಯ ವಿಶೇಷ ಮನವಿಯನ್ನು ಸೀಮಂತ್ ಕುಮಾರ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದು, ಸದರಿ ಮನವಿಯ ನಾಳೆ ವಿಚಾರಣೆಗೆ ಬರಲಿದೆ. ಹೀಗಾಗಿ, ಹೈಕೋರ್ಟ್‌ನಲ್ಲಿನ ಮನವಿ ಹಿಂಪಡೆಯಲಾಗಿದೆ.
ಆರೋಪಿಯು ಸಲ್ಲಿಸಿರುವು ಜಾಮೀನು ಅರ್ಜಿಯಷ್ಟೇ ಆಗಿದೆ. ಆದರೆ, ನ್ಯಾಯಮೂರ್ತಿಗಳು ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ. ತಮ್ಮ ಹಾಗೂ ತಮ್ಮ ನೇತೃತ್ವದ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ. ತಮ್ಮ ಸೇವಾ ವರದಿಯನ್ನು ಸಲ್ಲಿಸಲು ಕೋರಿರುವುದು ಸಹ ಜಾಮೀನು ಅರ್ಜಿಯ ವ್ಯಾಪ್ತಿಯ ಹೊರಗಿದೆ ಎಂದು ಸೀಮಂತ್ ಕುಮಾರ್ ಅರ್ಜಿಯಲ್ಲಿ ಆಕ್ಷೇಪಿಸಿದ್ದರು. ಜುಲೈ 7ರಂದು ವಿಚಾರಣೆ ವೇಳೆ ನ್ಯಾ. ಎಚ್ ಪಿ ಸಂದೇಶ್ ಎಡಿಜಿಪಿಯವರ ಕುರಿತು ಅವಲೋಕನ ಮಾಡಿದ್ದರು.