ಜೀಪ್‌ ಬೈಕ್‌ ನಡುವೆ ಅಪಘಾತ: ಮೃತ ಬೈಕ್‌ ಸವಾರನ ಕುಟುಂಬಕ್ಕೆ ಪರಿಹಾರವನ್ನು ₹15.8 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್‌

ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯು ₹8.8 ಲಕ್ಷ ಪರಿಹಾರ ನಿಗದಿ ಮಾಡಿದ್ದನ್ನು ಪರಿಷ್ಕರಿಸಿ ಹೈಕೋರ್ಟ್, ₹15.8 ಲಕ್ಷಗೆ ಹೆಚ್ಚಳ ಮಾಡಿ ಅದನ್ನು ಸಂತ್ರಸ್ತರ ಕುಟುಂಬಕ್ಕೆ ಪಾವತಿಸುವಂತೆ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಗೆ ಆದೇಶಿಸಿದೆ.
Karnataka HC, Kalburgi Bench
Karnataka HC, Kalburgi Bench

ರಾಯಚೂರಿನಲ್ಲಿ ಆರು ವರ್ಷಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ದ್ವಿಚಕ್ರ ವಾಹನ ಚಾಲಕನ ಕುಟುಂಬಕ್ಕೆ ಮೋಟಾರು ವಾಹನ ಅಪಘಾತ ನ್ಯಾಯ ಮಂಡಳಿ ಆದೇಶಿಸಿದ್ದ ₹8.8 ಲಕ್ಷ ಪರಿಹಾರವನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ₹₹15.8 ಲಕ್ಷಗಳಿಗೆ ಹೆಚ್ಚಳ ಮಾಡಿ ಆದೇಶಿಸಿದೆ.

ಅಪಘಾತದಲ್ಲಿ ಮೃತಪಟ್ಟಿದ್ದ 20 ವರ್ಷದ ಹುಲಿರಾಜ್‌ನ ಸಹೋದರರು ಮತ್ತು ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಮೊಹಮದ್‌ನವಾಜ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ದವ ವಿಭಾಗೀಯ ಪೀಠವು ಪುರಸ್ಕರಿಸಿದೆ.

ರಾಯಚೂರಿನ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯು ₹8.8 ಲಕ್ಷ ಪರಿಹಾರ ನಿಗದಿ ಮಾಡಿದ್ದನ್ನು ಪರಿಷ್ಕರಿಸಿ ಹೈಕೋರ್ಟ್, ₹15.8 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿ ಅದನ್ನು ಸಂತ್ರಸ್ತರ ಕುಟುಂಬಕ್ಕೆ ಪಾವತಿಸುವಂತೆ ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಗೆ ಆದೇಶಿಸಿದೆ.

ಅಲ್ಲದೇ, ಪ್ರಕರಣದಲ್ಲಿ ಮಹೇಂದ್ರ ಬಲೆರೊ ಜೀಪ್ ಚಾಲಕನ ನಿರ್ಲಕ್ಷ್ಯ ದೃಢಪಟ್ಟಿದ್ದರೂ, ದ್ವಿಚಕ್ರ ವಾಹನ ಸವಾರನ ಬಳಿ ಪರವಾನಗಿ ಇಲ್ಲದೇ ಇರುವ ಅಂಶವನ್ನೂ ಸಹ ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ಸ್ಥಳ ಪಂಚನಾಮೆ ಮತ್ತು ನಕ್ಷೆಯ ಪ್ರಕಾರ ಜೀಪ್ ರಸ್ತೆಯ ಮಧ್ಯಭಾಗವನ್ನು ದಾಟಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಆದರೆ, ಎಲ್ಲಾ ಅಂಶಗಳನ್ನು ನ್ಯಾಯಮಂಡಳಿ ಸರಿಯಾಗಿ ಪರಿಗಣಿಸಿಲ್ಲ ಎಂದಿದೆ.

ಅಲ್ಲದೇ, ನ್ಯಾಯ ಮಂಡಳಿಯು ಮೃತನ ಬಳಿ ವಾಹನ ಚಾಲನಾ ಪರವಾನಿಗೆ ಇಲ್ಲ ಎಂದ ಮಾತ್ರಕ್ಕೆ ಆತನೇ ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದಾನೆ ಎಂದು ಹೇಳಲಾಗದು, ಏಕೆಂದರೆ ಸುಪ್ರೀಂ ಕೋರ್ಟ್ ಸುಧೀರ್ ಕುಮಾರ್ ರಾಣಾ ವರ್ಸಸ್ ಸುರೀಂದರ್ ಸಿಂಗ್ ಪ್ರಕರಣದಲ್ಲಿ ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧವಾದರೂ, ಅದೇ ಅಪಘಾತಕ್ಕೆ ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗದು ಎಂದು ಹೇಳಿದೆ. ಅದನ್ನು ಈ ಪ್ರಕರಣದಲ್ಲಿ ಪರಿಗಣಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಕುಡಿಯುವ ನೀರು ಮಾರಾಟ ಮಾಡುವ ಹುಲಿರಾಜ್ 2017ರ ನವೆಂಬರ್‌ 10ರಂದು ಬೈಕ್‌ನಲ್ಲಿ ರಾಯಚೂರಿನ ಯರಮರಸ್‌ಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು.

ಮೃತರ ಸಹೋದರ ಮತ್ತು ತಾಯಿ, ಮೃತನು ಮನೆಗೆ ಆಧಾರವಾಗಿದ್ದನು. ಇದರಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಹಾಗಾಗಿ ₹54.5 ಲಕ್ಷ ರೂಪಾಯಿ ಪರಿಹಾರ ಕೋರಿ ಮೋಟಾರು ವಾಹನ ಅಪಘಾತ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ನ್ಯಾಯ ಮಂಡಳಿಯು ಅಪಘಾತ ಜೀಪ್ ಚಾಲಕನ ನಿರ್ಲಕ್ಷ್ಯ ಹಾಗೂ ಅಡ್ಡಾದಿಡ್ಡಿ ಚಾಲನೆಯಿಂದ ಆಗಿದೆ. ಆದರೆ, ಮೃತನು ವಾಹನ ಚಾಲನಾ ಪರವಾನಗಿ ಹೊಂದಿಲ್ಲ. ಹೀಗಾಗಿ ಆತನದ್ದೂ ನಿರ್ಲಕ್ಷ್ಯವಾಗುತ್ತದೆ ಎಂದು ₹8.8 ಲಕ್ಷ ರೂಪಾಯಿ ಮಾತ್ರ ಪರಿಹಾರ ನಿಗದಿ ಮಾಡಿತ್ತು.  ಅದನ್ನು ಪ್ರಶ್ನಿಸಿ ಮೃತರ ಕುಟುಂಬದವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com