ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಿದರೆ ಬಾಧಿತರು ಕ್ರಿಮಿನಲ್‌ ಪ್ರಕರಣ ದಾಖಲಿಸಬಹುದು: ಹೈಕೋರ್ಟ್‌

Karnataka HC and Justice Suraj Govindaraj
Karnataka HC and Justice Suraj Govindaraj

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂಬ ಬಗ್ಗೆ ಆರೋಪಗಳಿದ್ದರೆ ಬಾಧಿತ ಖಾಸಗಿ ವ್ಯಕ್ತಿಗಳೂ ಪೊಲೀಸ್‌ ಠಾಣೆ ಅಥವಾ ನ್ಯಾಯಾಲಯದಲ್ಲಿ ಕ್ರಿಮಿನಲ್‌ ದೂರು ದಾಖಲಿಸಲು ಅವಕಾಶವಿದೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ.

ಸಿವಿಲ್‌ ದಾವೆಯೊಂದಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ತಾಲ್ಲೂಕಿನ ನಿವಾಸಿ ವಾಸಂತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠವು ವಜಾ ಮಾಡಿದೆ.

ಅರ್ಜಿದಾರೆ ಪರ ವಕೀಲ ಸಂಕೇತ್‌ ಏಣಗಿ ಅವರು “ನಕಲಿ ದಾಖಲೆಗಳ ವಿಚಾರದಲ್ಲಿ ನ್ಯಾಯಾಲಯಗಳು ಮಾತ್ರವೇ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಬಹುದೇ ಹೊರತು ಖಾಸಗಿ ವ್ಯಕ್ತಿಗಳಲ್ಲ. ಈ ಪ್ರಕರಣದಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಉಮೇಶ್‌ಗೆ ಅಧಿಕಾರ ಇಲ್ಲ. ಇಷ್ಟಕ್ಕೂ 2019ರಲ್ಲಿಯೇ ನಾನು ವಿಚಾರಣಾಧೀನ ನ್ಯಾಯಾಲಯದಲ್ಲಿ ಹೂಡಿದ್ದ ದಾವೆ ವಾಪಸ್‌ ಪಡೆದಿದ್ದೇನೆ ಎಂದು ವಾದಿಸಿದ್ದರು.

ಪ್ರತಿವಾದಿ ಪರ ವಕೀಲ ಕರಣ್‌ ಅವರು “ತಮ್ಮ ವಿರುದ್ಧ ಅರ್ಜಿದಾರೆ ನಕಲಿ ದಾಖಲೆ ಬಳಕೆ ಮಾಡಿರುವುದರಿಂದ ದೂರು ದಾಖಲಿಸುವುದು ಅನಿವಾರ್ಯವಾಯಿತು” ಎಂದಿದ್ದರು.

ಪ್ರಕರಣದ ಹಿನ್ನೆಲೆ: ತೀರ್ಥಹಳ್ಳಿ ತಾಲ್ಲೂಕಿನ ಗಬಡಿ ಗ್ರಾಮದ ನಿವೇಶನಕ್ಕೆ ಸಂಬಂಧಿಸಿದಂತೆ ವಾಸಂತಿ ಅವರು 2015ರಲ್ಲಿ ಅದೇ ಗ್ರಾಮದ ಜಿ ಡಿ ಉಮೇಶ್‌ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ದಾಖಲಿಸಿದ್ದರು.

ವಾಸಂತಿ ನ್ಯಾಯಾಲಯಕ್ಕೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಉಮೇಶ್‌ ಪ್ರತ್ಯೇಕ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು. ಇದನ್ನು ವಿಚಾರಣೆಗೆ ಅಂಗೀಕರಿಸಿದ್ದ ಸ್ಥಳೀಯ ವಿಚಾರಣಾಧೀನ ನ್ಯಾಯಾಲಯವು ಐಪಿಸಿ ಸೆಕ್ಷನ್‌ಗಳಾದ 420, 419, 423, 415, 417, 465, 471 ಮತ್ತು 468 ಅಡಿಯಲ್ಲಿ ಸಂಜ್ಞೇಯ ಅಪರಾಧ ದಾಖಲಿಸಿಕೊಂಡು ಸಮನ್ಸ್‌ ಜಾರಿಗೊಳಿಸಿತ್ತು. ಇದನ್ನು ವಜಾ ಮಾಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

Attachment
PDF
Vasanthi Vs Umesh G D.pdf
Preview
Kannada Bar & Bench
kannada.barandbench.com