ಬಂಧಿಸದಂತೆ ನೀಡಿದ ಮಧ್ಯಂತರ ಆದೇಶ ಬಳಸಿ ಗಂಭೀರ ಅಪರಾಧಿಗಳು ವರ್ಷಗಟ್ಟಲೆ ಜೈಲಿನಿಂದ ಹೊರ ಉಳಿಯುತ್ತಾರೆ: ಕೇರಳ ಹೈಕೋರ್ಟ್

ʼಬಂಧಿಸದಂತೆ ನೀಡಲಾದ ಮಧ್ಯಂತರ ಆದೇಶʼದ ಪ್ರಕಾರ ಬಾಕಿ ಉಳಿದಿರುವ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡಲಾಗುತ್ತಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳುವಂತೆ ತನ್ನ ರಿಜಿಸ್ಟ್ರಿಗೆ ಪೀಠ ಸೂಚಿಸಿದೆ.
Justice A Badharudeen
Justice A Badharudeen
Published on

ಅತ್ಯಾಚಾರ ಮತ್ತು ಕೊಲೆ ಯತ್ನ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ನ್ಯಾಯಾಲಯ ಬಂಧಿಸದಂತೆ ನೀಡಲಾದ ಮಧ್ಯಂತರ ಆದೇಶದ ಲಾಭ ಪಡೆದು ಹಲವು ವರ್ಷಗಳ ಕಾಲ ಆರೋಪಿಗಳು ಸೆರೆವಾಸದಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಕೇರಳ ಹೈಕೋರ್ಟ್‌ ಈಚೆಗೆ ಅಸಮಾಧಾನ ವ್ಯಕ್ತಪಡಿಸಿದೆ [ಎಂ ಎ ಮೋಹನನ್‌ ನಾಯರ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಆರೋಪಿ ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತನ್ನನ್ನು ಬಂಧಿಸದಂತೆ ಮಧ್ಯಂತರ ಆದೇಶ ಪಡೆದು ನಂತರ ಕೆಲವು ಬಾರಿ ಹಲವು ವರ್ಷಗಳವರೆಗೆ ಸೆರೆವಾಸದಿಂದ ದೂರ ಉಳಿದ ನೂರಾರು ಪ್ರಕರಣಗಳನ್ನು ಬಲ್ಲೆ ಎಂದು ನ್ಯಾ. ಎ ಬದರುದ್ದೀನ್ ಅವರಿದ್ದ ಪೀಠ ತಿಳಿಸಿದೆ.

2020ರಿಂದ ಪ್ರಾರಂಭವಾಗುವ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಗಮನಿಸಿದರೆ ಐಪಿಸಿಯ 376, 307, 326, 406, 409, 395, 420ಗಳಂತಹ ಸೆಕ್ಷನ್‌ಗಳಡಿ ಜಾಮೀನುದಾರರು ಗಂಭೀರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾದ ಹಲವು ಪ್ರಕರಣಗಳಲ್ಲಿ ತಮ್ಮನ್ನು ಬಂಧಿಸದಂತೆ ಅವರು ಮಧ್ಯಂತರ ರಕ್ಷಣೆ ಪಡೆದು ವರ್ಷಗಟ್ಟಲೆ ಜೈಲು ಶಿಕ್ಷೆ ತಪ್ಪಿಸಿಕೊಂಡ ನೂರಾರು ಪ್ರಕರಣಗಳಿವೆ ಎಂದು ಅವರು ಹೇಳಿದ್ದಾರೆ.

ಬಂಧಿಸದಂತೆ ಆದೇಶ ಜಾರಿಯಲ್ಲಿರುವಾಗ ಕಸ್ಟಡಿ ವಿಚಾರಣೆ ನಡೆಸುವುದು ಸಾಧ್ಯವಾಗದೇ ಇರುವುದರಿಂದ ಅಂತಹ ಪ್ರಕರಣಗಳ ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಬಂಧಿಸದಂತೆ ನ್ಯಾಯಾಲಯ ಆದೇಶ ನೀಡಿ ತನಿಖಾಧಿಕಾರಿಯ ಕೈಗಳನ್ನು ಕಟ್ಟಿಹಾಕವುದು ಜಿಗುಪ್ಸೆ ಹುಟ್ಟಿಸುವಂತಿದೆ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗೆ ಬಂಧಿಸದಂತೆ ಆದೇಶ ಜಾರಿಗೊಳಿಸುವುದರಿಂದ ಅತ್ಯಾಚಾರ ಪ್ರಕರಣಗಳಲ್ಲಿಯೂ ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸದೇ ಇರುವುದು ದಿಗಿಲು ಹುಟ್ಟಿಸುವಂತಿದೆ ಎಂದು ನ್ಯಾಯಾಲಯ ಹೇಳಿದೆ. ಪರಿಣಾಮ ಇಂತಹ ಪ್ರಕರಣಗಳಲ್ಲಿ ನಿರ್ಣಾಯಕ ಸಾಕ್ಷ್ಯವಿಲ್ಲದೆ ಅಂತಿಮ ವರದಿ ಸಲ್ಲಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಅಂತಹ ಘಟನೆಗಳನ್ನು ತಡೆಯುವುದಕ್ಕಾಗಿ,ʼಬಂಧಿಸದಂತೆ ನೀಡಲಾದ ಮಧ್ಯಂತರ ಆದೇಶʼದ ಪ್ರಕಾರ ಉಳಿದಿರುವ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತ್ವರಿತ ವಿಲೇವಾರಿಗಾಗಿ ಸೂಕ್ತ ಪೀಠಕ್ಕೆ ಸಲ್ಲಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ತನ್ನ ರಿಜಿಸ್ಟ್ರಾರ್‌ ಅವರಿಗೆ ಹೈಕೋರ್ಟ್‌ ಸೂಚಿಸಿದೆ.

ಕೊನ್ನಿ ಪ್ರಾದೇಶಿಕ ಸಹಕಾರಿ ಬ್ಯಾಂಕ್‌ನಲ್ಲಿ ಜವಾನನಾಗಿ ಸೇವೆ ಸಲ್ಲಿಸುತ್ತಿದ್ದ ಮೋಹನನ್ ನಾಯರ್ ಎಂಬುವವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ನಾಯರ್‌ ₹ 5.39 ಕೋಟಿಗೂ ಹೆಚ್ಚು ಹಣ ದುರುಪಯೋಗಪಡಿಸಿಕೊಂಡ ಪ್ರಕರಣದ ಭಾಗವಾಗಿದ್ದರು  ಎಂದು ಆರೋಪಿಸಲಾಗಿತ್ತು. ಜಾಮೀನು ಅರ್ಜಿ ಸಲ್ಲಿಸಿದ್ದ ಅವರಿಗೆ 2021ರಲ್ಲಿ ಬಂಧಿಸದಂತೆ ಮಧ್ಯಂತರ ಆದೇಶ ನೀಡಲಾಗಿತ್ತು. ಈ ಆದೇಶವನ್ನೇ ಇಟ್ಟುಕೊಂಡು ನಾಯರ್‌ ಬಂಧನದಿಂದ ತಪ್ಪಿಸಿಕೊಂಡದ್ದು ಮಾತ್ರವಲ್ಲದೆ ತನಿಖೆಗೆ ಸಹಕರಿಸದೇ ಇದ್ದುದು ಆಘಾತಕಾರಿ ಎಂದು ನ್ಯಾಯಾಲಯ ಹೇಳಿದೆ.

ಮಧ್ಯಂತರ ಆದೇಶದ ನಂತರ ಹಲವು ಬಾರಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲಾಗಿತ್ತಾದರೂ 2021ರ ನಂತರ ಪ್ರಸ್ತುತ ಪೀಠದ ಮುಂದೆ ಪ್ರಕರಣವನ್ನು ಪಟ್ಟಿಮಾಡುವವರೆಗೂ ಅದನ್ನು ಸೂಕ್ತ ಪೀಠದೆದುರು ಪಟ್ಟಿ ಮಾಡಿರಲಿಲ್ಲ ಎಂದು ತಿಳಿದುಬಂದಿತ್ತು. ಈ ಅವಧಿಯಲ್ಲಿ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಲಾಗಿದ್ದು, ನಾಯರ್ ಅವರನ್ನು ಪ್ರಶ್ನಿಸದ ಕಾರಣ ತನಿಖೆ ಪರಿಣಾಮಕಾರಿಯಾಗಿದೆಯೇ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು.

ಆದರೂ, ಅಂತಿಮವಾಗಿ ನಾಯರ್ ಅವರ ಅರ್ಜಿ ವಿಲೇವಾರಿ ಮಾಡುವುದು ಸೂಕ್ತವೆಂದು ಪರಿಗಣಿಸಿದ ನ್ಯಾಯಾಲಯ ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸಲು ಅವರಿಗೆ ಸ್ವಾತಂತ್ರ್ಯ ನೀಡಿತು.

Kannada Bar & Bench
kannada.barandbench.com