ವ್ಯಕ್ತಿಯ ಹಕ್ಕುಗಳಿಗಿಂತ ಮಾಧ್ಯಮಗಳ ವಾಕ್ ಸ್ವಾತಂತ್ರ್ಯ ಮಿಗಿಲಲ್ಲ: ಜಮ್ಮು ಮತ್ತು ಕಾಶ್ಮೀರ ನ್ಯಾಯಾಲಯ
ಮಾಧ್ಯಮಗಳಿಗೆ ಲಭ್ಯವಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ನಾಗರಿಕರ ವೈಯಕ್ತಿಕ ಹಕ್ಕುಗಳಿಗಿಂತ ಮಿಗಿಲಾದ ಸ್ಥಾನದಲ್ಲಿಲ್ಲ ಎಂದು ಜಮ್ಮು ಕಾಶ್ಮೀರದ ನ್ಯಾಯಾಲಯವೊಂದು ತಿಳಿಸಿದೆ. 23 ವರ್ಷದ ಮಹಿಳೆಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ಕಾಶ್ಮೀರದ ಒಂಬತ್ತು ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿತ ವ್ಯಕ್ತಿಗೆ ಕೂಡ ಮೂಲಭೂತ ಹಕ್ಕುಗಳಿದ್ದು, ಆರೋಪಿಯ ಮತ್ತು ಸಾಮಾನ್ಯ ವ್ಯಕ್ತಿಗಳ ಮೂಲಭೂತಹಕ್ಕುಗಳ ನಡುವೆ ಯಾವುದೇ ವ್ಯತ್ಯಾಸ ಇಲ್ಲ ಎಂದು ಕೂಡ ನ್ಯಾಯಾಲಯ ತಿಳಿಸಿದೆ. ಹೀಗಾಗಿ ಅವಹೇಳನಕಾರಿ ಮತ್ತು ಮಾನಹಾನಿಕರ ಸಂಗತಿಗಳನ್ನು ಪ್ರಕಟಿಸಲು ಮಾಧ್ಯಮಗಳಿಗೆ ಅವಕಾಶ ಮಾಡಿಕೊಟ್ಟರೆ ಅದು ಫಿರ್ಯಾದಿ ಮತ್ತು ಆತನ ಕುಟುಂಬಕ್ಕೆ ಅಪಖ್ಯಾತಿ ತಂದಂತಾಗುವುದಲ್ಲದೆ ನಿಸ್ಪಕ್ಷಪಾತ ತನಿಖೆಗೆ ಅಡ್ಡಿಆಗಬಹುದು ಎಂದು ನ್ಯಾಯಾಧೀಶ ಶಬೀರ್ ಅಹ್ಮದ್ ಮಲಿಕ್ ಹೇಳಿದ್ದಾರೆ.
ಲಿಖಿತ ಹೇಳಿಕೆಯನ್ನು ಸಲ್ಲಿಸಲು ಮಾಧ್ಯಮ ಸಂಸ್ಥೆಗಳಿಗೆ ಸಮನ್ಸ್ ನೀಡುವುದರ ಜೊತೆಗೆ ಸಾಮಾಜಿಕ ಮಾಧ್ಯಮ / ಅಂತರ್ಜಾಲ ಅಥವಾ ಸುದ್ದಿ ಪೋರ್ಟಲ್‌ಗಳಲ್ಲಿ ಈಗಾಗಲೇ ಪ್ರಕಟವಾಗಿರುವ ಯಾವುದೇ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆಗಳು ಅಥವಾ ವಿಷಯಗಳ ಲಿಂಕ್‌ಗಳನ್ನು ತೆಗೆದು ಹಾಕುವಂತೆ ಕೂಡ ನ್ಯಾಯಾಲಯ ಪ್ರತಿವಾದಿಗಳಿಗೆ ನಿರ್ದೇಶನ ನೀಡಿದೆ.
ಇರ್ಜಾನ್ ಕೌನ್ಸಾರ್ ಖಾನ್ ಅವರು ಮಾಧ್ಯಮಗಳ ವಿರುದ್ಧ ಸಲ್ಲಿಸಿದ್ದ ಮೊಕದ್ದಮೆಯನ್ನು ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅಪರಾಧ ಸಾಬೀತಾಗುವವರೆಗೂ ಆರೋಪಿಗಳನ್ನು ಮುಗ್ಧರೆಂದೇ ಪರಿಗಣಿಸಬೇಕು ಎಂಬ ಅಪರಾಧ ನ್ಯಾಯಶಾಸ್ತ್ರದ ಸುಪ್ರಸಿದ್ಧ ತತ್ವವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು.