ದೇವಘರ್‌ ಮೇವು ಹಗರಣ: ಲಾಲು ಸೇರಿದಂತೆ ಆರೋಪಿಗಳಿಗೆ ವಯಸ್ಸಾಗಿದೆ ಎಂದ ಸುಪ್ರೀಂ ಕೋರ್ಟ್‌

“ಕಾನೂನು ಪ್ರಶ್ನೆ ಏನು ಎಂಬುದು ನಮಗೆಲ್ಲ ತಿಳಿದಿದೆ. ಆರೋಪಿಗಳು 60, 70 ಹಾಗೂ 80 ವರ್ಷ ವಯಸ್ಸಿನವರಾಗಿದ್ದಾರೆ,” ಎಂದು ನ್ಯಾಯಾಲಯ ಹೇಳಿದೆ.
Lalu Prasad Yadav
Lalu Prasad Yadav
Published on

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಸೇರಿದಂತೆ ದೇವಘರ್‌ ಮೇವು ಹಗರಣದ ಆರೋಪಿಗಳು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿತು.

ಪ್ರಕರಣದಲ್ಲಿ ಲಾಲು ಅವರಿಗೆ ಜಾರ್ಖಂಡ್‌ ಹೈಕೋರ್ಟ್‌ ನೀಡಿದ್ದ ಜಾಮೀನು ವಿರೋಧಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎನ್‌ ಕೋಟೀಶ್ವರ್‌ ಸಿಂಗ್‌ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ವಾಲ್ಮೀಕಿ ನಿಗಮದ ಹಣ ದುರ್ಬಳಕೆ: ಶಾಸಕ ನಾಗೇಂದ್ರ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಸಿಬಿಐ

ಸಿಬಿಐ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಶಿಕ್ಷೆಯನ್ನು ಅಮಾನತುಗೊಳಿಸುವ ವೇಳೆ ಕಾಯಿದೆಯನ್ನು ತಪ್ಪಾಗಿ ಅನ್ವಯಿಸಲಾಗಿದೆ ಎಂದರು.

“ಇದು ಕಾನೂನು ಪ್ರಶ್ನೆ. ಅದನ್ನು ಸರಿಯಾಗಿ ಅನ್ವಯಿಸಬೇಕು. ಕಾನೂನು ಉಲ್ಲಂಘಿಸಲಾಗಿದ್ದು ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ. ಹೀಗೆ ಮಾಡಲಾಗದು. ಇದು ಕಾನೂನುಬಾಹಿರ ಆದೇಶ,” ಎಂದು ರಾಜು ವಾದಿಸಿದರು.

ಲಾಲು ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚು ಆರೋಪಿಗಳಿದ್ದು, ಕೆಲವರಿಗೆ ಸಿಬಿಐ ಮೇಲ್ಮನವಿಯ ನೋಟಿಸ್ ತಲುಪಿಲ್ಲ ಮತ್ತು ಕೆಲವರು ಇನ್ನೂ ತಮ್ಮ ಉತ್ತರಗಳನ್ನು ಸಲ್ಲಿಸಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ಈ ವಿಶೇಷ ಅನುಮತಿ ಅರ್ಜಿ ಏನೆಂಬುದು ನಮಗೆ ಇಬ್ಬರಿಗೂ (ನ್ಯಾಯಮೂರ್ತಿಗಳಿಗೆ) ತಿಳಿದಿದೆ. ಇದರ ಫಲಿತಾಂಶವೇನು ಎನ್ನುವುದೂ ನಿಮ್ಮಿಬ್ಬರಿಗೂ ತಿಳಿದಿದೆ ಎಂದು ಭಾವಿಸುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ. ಮೇಲ್ಮನವಿಯನ್ನು ವಿಲೇವಾರಿ ಮಾಡಲು ದಿನಾಂಕ ನಿಗದಿ ಮಾಡಬಹುದು. ಕಾನೂನು ಪ್ರಶ್ನೆ ಏನೆಂಬುದು ಎಲ್ಲರಿಗೂ ಗೊತ್ತಿದೆ. ಆರೋಪಿಗಳು 60, 70 ಮತ್ತು 80ರ ವಯೋಮಾನದಲ್ಲಿದ್ದಾರೆ,” ಎಂದಿತು.

Also Read
ಭೀಮಾ ಕೋರೆಗಾಂವ್: ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು

ಆಗ ಎಎಸ್‌ಜಿ, “ಅವರು ಎಲ್ಲರೂ ಕಾನೂನುಬಾಹಿರವಾಗಿ ಹೊರಗಿದ್ದಾರೆ. ಇದು ಶಿಕ್ಷೆಯ ನಂತರದ ಜಾಮೀನಾಗಿದೆ,” ಎಂದು ವಾದಿಸಿದರು. ಅಂತಿಮವಾಗಿ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ ತಿಂಗಳಿಗೆ ಮುಂದೂಡಿತು. “ಕೇಸ್‌ಗಳ ಕಡತಗಳು ಹಾಗೆಯೇ ಬಾಕಿಯಾಗಿವೆ. ಏಪ್ರಿಲ್‌ನಲ್ಲಿ ದಿನಾಂಕ ನಿಗದಿ ಮಾಡುತ್ತೇವೆ. ಪ್ರತಿವಾದಿಗಳು ಮೃತಪರಾಗಿರುವ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕಾಗುತ್ತದೆ” ಎಂದು ನ್ಯಾಯಾಲಯ ನಿರ್ದೇಶಿಸಿತು.

1991–94ರ ಅವಧಿಯಲ್ಲಿ ದೇವಘರ್‌ ಸರ್ಕಾರಿ ಬೊಕ್ಕಸದಿಂದ ₹89 ಲಕ್ಷ ದುರ್ಬಳಕೆ ಮಾಡಲಾಗಿದೆ ಎಂಬುದು ಪ್ರಕರಣದ ಆರೋಪ. ಹಗರಣ ನಡೆದ ಸಮಯದಲ್ಲಿ ಲಾಲು ಅವರು ಬಿಹಾರ ಮುಖ್ಯಮಂತ್ರಿ ಆಗಿದ್ದರು.

Kannada Bar & Bench
kannada.barandbench.com