ಜಾಮೀನು ಆದೇಶ ತಪ್ಪಾಗಿ ಅರ್ಥೈಸಿದ ವಿಚಾರಣಾ ನ್ಯಾಯಾಲಯ- ಜೈಲಿನಲ್ಲೇ ಕೊಳೆಯುವಂತಾದ ಆರೋಪಿ: ಕ್ರಮಕ್ಕೆ ಸುಪ್ರೀಂ ಆದೇಶ

ಜಾಮೀನು ಮಂಜೂರಾದರೂ ಆರೋಪಿಗಳನ್ನು ಬಿಡುಗಡೆ ಮಾಡದಿರುವ ಇಂತಹ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿದೆ.
ಜಾಮೀನು ಆದೇಶ ತಪ್ಪಾಗಿ ಅರ್ಥೈಸಿದ ವಿಚಾರಣಾ ನ್ಯಾಯಾಲಯ- ಜೈಲಿನಲ್ಲೇ ಕೊಳೆಯುವಂತಾದ ಆರೋಪಿ: ಕ್ರಮಕ್ಕೆ  ಸುಪ್ರೀಂ ಆದೇಶ

ಆಂಧ್ರಪ್ರದೇಶದ ವಿಚಾರಣಾ ನ್ಯಾಯಾಲಯವೊಂದು ಸುಪ್ರೀಂ ಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ತಪ್ಪಾಗಿ ಅರ್ಥೈಸಿ ಆರೋಪಿ ಜೈಲಿನಲ್ಲೇ ಕೊಳೆಯುವಂತಾದದ್ದಕ್ಕೆ ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದೆ. [ಗೋಪಿಸೆಟ್ಟಿ ಹರಿಕೃಷ್ಣ ಮತ್ತು ಆಂಧ್ರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

“ಆದೇಶ ನೀಡಿದ ಮೂರು ದಿನಗಳೊಳಗೆ ಆರೋಪಿಗಳನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಸೂಕ್ತ ಷರತ್ತಿನ ಆಧಾರದಲ್ಲಿ ವಿಚಾರಣಾ ನ್ಯಾಯಾಲಯ ಆರೋಪಿಗಳಿಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು” ಎಂದು ಸುಪ್ರೀಂ ಕೋರ್ಟ್‌ ತನ್ನ ಹಿಂದಿನ ಆದೇಶದಲ್ಲಿ ಸೂಚಿಸಿತ್ತು. ಆದರೆ ಆದೇಶ ನೀಡಿದ ಒಂದು ತಿಂಗಳ ಬಳಿಕ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿತ್ತು. ಕೋವಿಡ್‌ ಸಾಂಕ್ರಾಮಿಕದಿಂದಾಗಿ ಖೈದಿಯ ಬಿಡುಗಡೆ ಸಾಧ್ಯವಾಗಿಲಿಲ್ಲ. ಕೊನೆಗೆ ವಿಚಾರಣಾ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿದಾಗ ಮೂರು ದಿನಗಳ ಒಳಗೆ ಹಾಜರಾಗಬೇಕಾದ ಷರತ್ತನ್ನು ಉಲ್ಲಂಘಿಸಿರುವುದರಿಂದ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದಾಗಿ ನ್ಯಾಯಾಧೀಶರು ತಿಳಿಸಿದರು. ಪರಿಣಾಮ ಖೈದಿ ಕಂಬಿಗಳ ಹಿಂದೆಯೇ ಉಳಿಯುವಂತಾಗಿತ್ತು.

Also Read
[ದೇಶದ್ರೋಹ] ನೆಹರೂ ಅವರಿಂದ ಏನು ಮಾಡಲಾಗಲಿಲ್ಲವೋ ಅದನ್ನು ಹಾಲಿ ಸರ್ಕಾರ ಮಾಡುತ್ತಿದೆ: ಸುಪ್ರೀಂಗೆ ಮೆಹ್ತಾ ವಿವರಣೆ

ಇದನ್ನು ತುಂಬಾ ದುರದೃಷ್ಟಕರ ಎಂದು ಬಣ್ಣಿಸಿರುವ ನ್ಯಾಯಮೂರ್ತಿಗಳಾದ ಯು ಯು ಲಲಿತ್‌, ರವೀಂದ್ರ ಭಟ್‌ ಹಾಗೂ ಸುಧಾಂಶು ಧುಲಿಯಾ ಅವರಿದ್ದ ಪೀಠ ಸುಪ್ರೀಂ ಕೋರ್ಟ್‌ ಜಾಮೀನು ಆದೇಶವನ್ನು ಹೇಗೆ ತಪ್ಪಾಗಿ ಅರ್ಥೈಸಲಾಯಿತು ಎಂಬ ಬಗ್ಗೆ ವಿವರಣೆ ನೀಡುವಂತೆ ವಿಚಾರಣಾ ನ್ಯಾಯಾಧೀಶರನ್ನು ಕೇಳಿದೆ.

"ಈ ಪ್ರಕರಣ ಅತ್ಯಂತ ದುರದೃಷ್ಟಕರ ಸ್ಥಿತಿಯನ್ನು ಬಿಂಬಿಸುತ್ತದೆ. ನ್ಯಾಯಾಂಗ ಅಧಿಕಾರಿಯೊಬ್ಬರು ಈ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ನೀಡಿದ ಆದೇಶವನ್ನು ತಾವೇ ಆದೇಶ ಹೊರಡಿಸಿದ ರೀತಿಯಲ್ಲಿ ಓದಿರುವುದು ಆಶ್ಚರ್ಯ ತಂದಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಾಮೀನಿನ ಮೇಲೆ ಬಿಡುಗಡೆ ಮಾಡಲು ಮೂರು ದಿನಗಳ ಷರತ್ತನ್ನು ಮುಂದಿಟ್ಟದ್ದು ಏಕೆ ಎಂದು ಸುಪ್ರೀಂ ಕೋರ್ಟ್ ಪ್ರಮುಖವಾಗಿ ಪ್ರಶ್ನಿಸಿತು. ಈ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್‌ ಆಡಳಿತಾತ್ಮಕ ನೆಲೆಯಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು ವಿಚಾರಣಾ ನ್ಯಾಯಾಧೀಶರಿಂದ ವಿವರಣೆ ಪಡೆಯುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ ತಾನು ನೀಡಿದ ಆದೇಶ ಪ್ರಕರಣದ ಅಂತಿಮ ಆದೇಶದ ಮೇಲೆ ಪರಿಣಾಮ ಬೀರಬಾರದು ಎಂದು ಕೂಡ ಸರ್ವೋಚ್ಚ ನ್ಯಾಯಾಲಯ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ಇಂತಹ ಪ್ರಕರಣಗಳು ಭವಿಷ್ಯದಲ್ಲಿ ಮರುಕಳಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ, ಜಾಮೀನು ಮಂಜೂರಾದರೂ ಆರೋಪಿಗಳನ್ನು ಬಿಡುಗಡೆ ಮಾಡದಿರುವ ಇಂತಹ ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್‌ ಎಲ್ಲಾ ಹೈಕೋರ್ಟ್‌ಗಳಿಂದ ಮಾಹಿತಿ ಕೇಳಿದೆ. ಆದೇಶದ ಪ್ರಕಾರ ದೇಶದ ಎಲ್ಲಾ ಹೈಕೋರ್ಟ್‌ಗಳು ಆರು ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸಬೇಕಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Gopisetty_Harikrishna_vs_State_of_AP.pdf
Preview

Related Stories

No stories found.
Kannada Bar & Bench
kannada.barandbench.com