ವಿಚಾರಣಾಧೀನ ನ್ಯಾಯಾಲಯದಿಂದ ಖುಲಾಸೆಯಾದರೆ ಆರೋಪಿಯಾಗಿದ್ದವರಿಗೆ ಪಾಸ್‌ಪೋರ್ಟ್‌ ಮರಳಿಸಬೇಕು: ಹೈಕೋರ್ಟ್‌

“ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾದರೆ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಧಿ ಮುಗಿಯುವವರೆಗೆ ಕಾಯದೆ, ಅದೇ ಆಧಾರದಲ್ಲಿ ವಿಚಾರಣಾಧೀನ ನ್ಯಾಯಾಲಯ ಪಾಸ್‌ಪೋರ್ಟ್‌ ಅನ್ನು ತನ್ನ ಬಳಿಯೇ ಇಟ್ಟುಕೊಳ್ಳಬಾರದು” ಎಂದಿರುವ ಹೈಕೋರ್ಟ್‌.
Justice M Nagaprasanna
Justice M Nagaprasanna

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯು ವಿಚಾರಣಾಧೀನ ನ್ಯಾಯಾಲಯದಿಂದ ಖುಲಾಸೆಯಾದರೆ ಆನಂತರ ಆರೋಪಿಯಾಗಿದ್ದವರಿಗೆ ಪಾಸ್‌ಪೋರ್ಟ್‌ ಮರಳಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶ ನೀಡಿದೆ.

ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಬೆಂಗಳೂರಿನ ಫ್ರಾನ್ಸಿಸ್ ಕ್ಸೇವಿಯರ್ ಕ್ರಾಸ್ಟೊ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಖುಲಾಸೆಯಾದರೆ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಧಿ ಮುಗಿಯುವವರೆಗೆ ಕಾಯದೆ, ಅದೇ ಆಧಾರದಲ್ಲಿ ವಿಚಾರಣಾಧೀನ ನ್ಯಾಯಾಲಯ ಪಾಸ್‌ಪೋರ್ಟ್‌ ಅನ್ನು ತನ್ನ ಬಳಿಯೇ ಇಟ್ಟುಕೊಳ್ಳಬಾರದು” ಎಂದು ಪೀಠ ಆದೇಶಿಸಿದೆ. ಅಲ್ಲದೇ, ಅರ್ಜಿದಾರ ಫ್ರಾನ್ಸಿಸ್ ಕ್ಸೇವಿಯರ್‌ಗೆ ಪಾಸ್‌ಪೋರ್ಟ್ ಮರಳಿಸುವಂತೆ ಸಂಬಂಧಿಸಿದ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

“ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದ ಪೀಠವು ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದಾರೆ. ಆದರೆ, ವಿಚಾರಣಾಧೀನ ನ್ಯಾಯಾಲಯ ಆ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು ಎಂಬ ಕಾರಣಕ್ಕೆ ವಶಪಡಿಸಿಕೊಂಡಿದ್ದ ಪಾಸ್‌ಪೋರ್ಟ್ ಅನ್ನು ತನ್ನ ಬಳಿಯೇ ಇಟ್ಟುಕೊಳ್ಳುವಂತಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿವರ: 2015ರಲ್ಲಿ ಬೆಂಗಳೂರಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಮುಂಬೈ ಮೂಲದ ಫ್ರಾನ್ಸಿಸ್ ಕ್ಸೇವಿಯರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಆರೋಪಿಯಾಗಿದ್ದ ಅವರ ಪಾಸ್ ಪೋರ್ಟ್ ಅನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯವು ವಶಕ್ಕೆ ಪಡೆದಿತ್ತು. ಬಳಿಕ 2023ರ ಏಪ್ರಿಲ್‌ 12ರಂದು ಪ್ರಕರಣದಲ್ಲಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಿ ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ಆದರೆ, ಖುಲಾಸೆ ನಂತರ ಸಿಆರ್‌ಪಿಸಿ ಸೆಕ್ಷನ್ 452 ಪ್ರಕಾರ (ವಶಪಡಿಸಿಕೊಂಡು ವಸ್ತುಗಳನ್ನು ಮರಳಿಸುವುದು) ಪಾಸ್‌ಪೋರ್ಟ್ ಮರಳಿಸಲು ನಿರಾಕರಿಸಿತ್ತು. ಪ್ರಕರಣ ಕುರಿತ ಮೇಲ್ಮನವಿ ಅವಧಿ ಮುಗಿಯುವವರೆಗೆ ಪಾಸ್ಪೋರ್ಟ್ ಮರಳಿಸುವುದಿಲ್ಲ ಎಂದು ವಿಚಾರಣಾಧೀನ ನ್ಯಾಯಾಲಯ ಹೇಳಿತ್ತು. ಈ ಆದೇಶ ಪ್ರಶ್ನಿಸಿದ್ದ ಫ್ರಾನ್ಸಿಸ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅರ್ಜಿ ಪುರಸ್ಕರಿಸಿರುವ ಹೈಕೋರ್ಟ್, ಖುಲಾಸೆಗೊಳಿಸಿದ ನಂತರ ಪಾಸ್‌ಪೋರ್ಟ್‌ ಮರಳಿಸಬೇಕು. ಮೇಲ್ಮನವಿ ಸಲ್ಲಿಕೆ ಅವಧಿವರೆಗೆ ಪಾಸ್‌ಪೋರ್ಟ್‌ ಇಟ್ಟುಕೊಳ್ಳುವಂತಿಲ್ಲ ಎಂದು ಆದೇಶಿಸಿದೆ.

Attachment
PDF
Francis Zavier Crasto Vs State of Karnataka.pdf
Preview

Related Stories

No stories found.
Kannada Bar & Bench
kannada.barandbench.com