
ಮಾನಸಿಕ ವಿಶೇಷ ಚೇತನ ವ್ಯಕ್ತಿಗಳನ್ನು ಅನಗತ್ಯ ಕ್ರಿಮಿನಲ್ ಹೊಣೆಗಾರಿಕೆಯಿಂದ ಕಾನೂನು ರಕ್ಷಿಸುತ್ತದೆಯಾದರೂ, ಅವರನ್ನು ಕಣ್ಮುಚ್ಚಿ ಬಿಡುಗಡೆ ಮಾಡಲು ಅದು ಅನುಮತಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಸರ್ಕಾರ ಮತ್ತು ನೀರಜ್ ನಡುವಣ ಪ್ರಕರಣ].
'ಬುದ್ಧಿಮಾಂದ್ಯ' ವ್ಯಕ್ತಿಗಳು ತಮ್ಮ ಕ್ರಿಯೆಗಳ ಕಾನೂನುಬಾಹಿರತೆಯನ್ನು ಅರ್ಥಮಾಡಿಕೊಳ್ಳದಿದ್ದರೂ ಅವರು ಪುನರಾವರ್ತಿತ ಅಪರಾಧ ಎಸಗುವ ಅಪಾಯ ಸಮಾಜಕ್ಕೆ ಇರುವುದು ವಾಸ್ತವ ಎಂದು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥ ಅಥವಾ ಮನೋಖಿನ್ನತೆಯಿಂದ ಬಳಲುತ್ತಿರುವ ಆರೋಪಿಗಳನ್ನು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದೆ ಅಥವಾ ನ್ಯಾಯಾಂಗ ಅವರ ಬಿಡುಗಡೆ ಬಗ್ಗೆ ತೃಪ್ತಿ ವ್ಯಕ್ತಪಡಿಸದೆಯೇ ಅವರನ್ನು ಬಿಡುಗಡೆ ಮಾಡುವಂತಿಲ್ಲ ಎಂಬ ಸಿಆರ್‌ಪಿಸಿ ಸೆಕ್ಷನ್ 330ನ್ನು ಪಾಲಿಸಬೇಕು ಎಂದು ಪೀಠ ಹೇಳಿದೆ.
ಸಿಆರ್‌ಪಿಸಿ ಸೆಕ್ಷನ್ 330 ಕೃತ್ಯದ ಸ್ವರೂಪವನ್ನು ಎಚ್ಚರಿಕೆಯಿಂದ ಗಮನಿಸಲು ಮತ್ತು ಆರೋಪಿಯ ಮಾನಸಿಕ ಸ್ಥಿತಿಗತಿ ನಿರ್ಣಯಿಸಲು ವೈದ್ಯಕೀಯ ಅಥವಾ ತಜ್ಞರ ಅಭಿಪ್ರಾಯ ಪಡೆಯಲು ಮತ್ತು ಆನಂತರವಷ್ಟೇ ಅವರನ್ನು ಬಿಡುಗಡೆಗೊಳಿಸಲು ಆದೇಶಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನೀರಜ್ ಎಂಬ ವ್ಯಕ್ತಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
ನೀರಜ್‌ನ ಮಾನಸಿಕ ವಯಸ್ಸು ನಾಲ್ಕು ವರ್ಷದ ಮಗುವಿನಷ್ಟಿದ್ದು, ಅವನು ತೀವ್ರ 'ಬುದ್ಧಿಮಾಂದ್ಯತೆ'ಯಿಂದ ಬಳಲುತ್ತಿದ್ದಾನೆ ಎಂದು ವೈದ್ಯಕೀಯ ಮಂಡಳಿ ತೀರ್ಮಾನಿಸಿತ್ತು. ಆದರೂ, ಕಾನೂನಿನಡಿಯಲ್ಲಿ ಅಗತ್ಯವಿರುವ ಕಡ್ಡಾಯ ವಿಚಾರಣೆ ನಡೆಸದೆ, ಐಕ್ಯೂ ಪ್ರಮಾಣಪತ್ರದ ಆಧಾರದ ಮೇಲಷ್ಟೇ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ವಾದಿಸಿತ್ತು.
ಆರೋಪಿಗಳನ್ನು ಸುರಕ್ಷಿತ ಕಸ್ಟಡಿಯಲ್ಲಿ ಇರಿಸಲು ಮತ್ತು ತೆಗೆದುಕೊಂಡ ಕ್ರಮವನ್ನು ಸರ್ಕಾರಕ್ಕೆ ವರದಿ ಮಾಡಲು ಅವಕಾಶ ನೀಡುವ ಸಿಆರ್‌ಪಿಸಿಯ ಸೆಕ್ಷನ್ 330 (2)ನ್ನು ಪಾಲಿಸಲು ವಿಚಾರಣಾ ನ್ಯಾಯಾಲಯ ವಿಫಲವಾಗಿದೆ ಎಂದು ಅದು ಹೇಳಿತು.
ವಾದಗಳನ್ನು ಆಲಿಸಿದ ಹೈಕೋರ್ಟ್ ಆರೋಪಿಯನ್ನು ಬಿಡುಗಡೆ ಮಾಡುವಾಗ ವಿಚಾರಣಾ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 330ನ್ನು ಪಾಲಿಸಿಲ್ಲ ಎಂದುತೀರ್ಪು ನೀಡಿತು. ಹೀಗಾಗಿ ಕಾರ್ಯವಿಧಾನ ಪಾಲಿಸದೆ ನೀರಜ್‌ನನ್ನು ಬಿಡುಗಡೆ ಮಾಡಿದ ಆದೇಶವನ್ನು ಅದು ರದ್ದುಗೊಳಿಸಿತು. ಸೆಕ್ಷನ್ 330ನ್ನು ಪಾಲಿಸಿ ಹೊಸದಾಗಿ ಆದೇಶ ಹೊರಡಿಸಲು ಪ್ರಕರಣವನ್ನು ವಿಚಾರಣಾ ನ್ಯಾಯಾಲಯಕ್ಕೆ ಅದು ಮರಳಿಸಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]