ಲಾಕ್‌ಡೌನ್‌ ವೇಳೆ ಸುಳ್ಳು ಸುದ್ದಿ ಹರಡಿದ ಆರೋಪ: ಕಾಂಗ್ರೆಸ್‌ ಕಾರ್ಯಕರ್ತೆಯನ್ನು ಆರೋಪ ಮುಕ್ತಗೊಳಿಸಿದ ನ್ಯಾಯಾಲಯ

ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ ವಿಡಿಯೊದಲ್ಲಿ ಆರೋಪಿಯ ಧ್ವನಿ ಇಲ್ಲ ಎಂದು ಎಫ್‌ಎಸ್‌ಎಲ್‌ ವರದಿ ನೀಡಲಾಗಿದೆ. ಪೊಲೀಸರು ವಾಟ್ಸ್‌ಆ್ಯಪ್‌ ಗ್ರೂಪಿನ ವಿವರ, ಸ್ವತಂತ್ರ ಸಾಕ್ಷಿಗಳನ್ನು ವಿಚಾರಣೆ ಮಾಡಿಲ್ಲ ಎಂದಿರುವ ನ್ಯಾಯಾಲಯ.
ಲಾಕ್‌ಡೌನ್‌ ವೇಳೆ ಸುಳ್ಳು ಸುದ್ದಿ ಹರಡಿದ ಆರೋಪ: ಕಾಂಗ್ರೆಸ್‌ ಕಾರ್ಯಕರ್ತೆಯನ್ನು ಆರೋಪ ಮುಕ್ತಗೊಳಿಸಿದ ನ್ಯಾಯಾಲಯ
Published on

ಲಾಕ್‌ಡೌನ್‌ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಪೊಲೀಸರ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತೆ ಪದ್ಮಾ ಹರೀಶ್ ಅವರನ್ನು ನಗರದ ಎಸಿಜೆಎಂ ನ್ಯಾಯಾಲಯ ಇತ್ತೀಚೆಗೆ ಪ್ರಕರಣದಿಂಧ ಖುಲಾಸೆಗೊಳಿಸಿದೆ.

ಬಿಹಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ, ಅದನ್ನು ಕರ್ನಾಟಕ ಪೊಲೀಸರ ಕೃತ್ಯ ಎಂದು ಬಿಂಬಿಸಿದ್ದ ಆರೋಪ ಪದ್ಮಾ ಅವರ ಮೇಲಿತ್ತು.

ಪ್ರಕರಣದ ವಿಚಾರಣೆ ನಡೆಸಿದ 47ನೇ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಬಿ ಸಿದ್ದರಾಜು ಆರೋಪಿಯನ್ನು ಆಪಾದನೆಗಳಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು “ದೂರುದಾರರು ತಮ್ಮ ದೂರಿನೊಂದಿಗೆ ವಿಡಿಯೋ ಕ್ಲಿಪ್ಪಿಂಗ್ ಕೊಟ್ಟಿಲ್ಲ. ಆರೋಪಿಯ ಮೊಬೈಲ್ ನಂಬರ್ ಉಲ್ಲೇಖ ಮಾಡಿಲ್ಲ. ಆರೋಪ ಪಟ್ಟಿಯಲ್ಲಿ ಕೊಟ್ಟ ಸ್ಕ್ರೀನ್ ಶಾಟ್ ಆರೋಪಿಯ ವಿಡಿಯೋಗೆ ಸಂಬಂಧಪಟ್ಪಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಿದ ವಿಡಿಯೋದಲ್ಲಿ ಆರೋಪಿಯ ಧ್ವನಿ ಇಲ್ಲ ಎಂದು ಎಫ್‌ಎಸ್‌ಎಲ್‌ ವರದಿ ನೀಡಲಾಗಿದೆ. ಪೊಲೀಸರು ವಾಟ್ಸ್‌ಆ್ಯಪ್‌ ಗ್ರೂಪಿನ ವಿವರ, ಸ್ವತಂತ್ರ ಸಾಕ್ಷಿಗಳನ್ನು ವಿಚಾರಣೆ ಮಾಡಿಲ್ಲ” ಎಂಬ ಅಭಿಪ್ರಾಯದೊಂದಿಗೆ ನ್ಯಾಯಾಲಯ ಪದ್ಮಾ ಅವರನ್ನು ಆರೋಪ ಮುಕ್ತಗೊಳಿಸಿದೆ.

ಪದ್ಮಾ ಹರೀಶ್‌ ಪರ ವಕೀಲ ಸೂರ್ಯ ಮುಕುಂದರಾಜ್‌ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ದಕ್ಷಿಣ ಸಿಇಎನ್ (ಸೈಬರ್, ಎಕನಾಮಿಕ್‌ ಅಂಡ್‌ ನಾರ್ಕೊಟಿಕ್‌ ಕ್ರೈಂ) ಪೊಲೀಸ್ ಠಾಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಷತಾ ಕುರಕುಂದಿ 2021ರ ಮೇ 12ರಂದು ದೂರು ನೀಡಿ, ‘ಪೊಲೀಸ್ ಸಮವಸ್ತ್ರದಲ್ಲಿದ್ದ ಕೆಲವರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪದ್ಮಾ ಹರೀಶ್ ಎಂದು ಹೇಳಿಕೊಂಡಿದ್ದ ಮಹಿಳೆಯೊಬ್ಬರು ಅದನ್ನು ಕರ್ನಾಟಕ ಪೊಲೀಸರ ಕೃತ್ಯವೆಂದು ಬಿಂಬಿಸಿ ರಾಜ್ಯದ ಪೊಲೀಸರನ್ನು ನರಭಕ್ಷಕರು ಎಂದು ಕರೆದಿದ್ದರಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಗಳ ಜಾರಿಗೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ್ದರು’ ಎಂದು ಆರೋಪಿಸಿದ್ದರು.

ಈ ಸಂಬಂಧ ಪದ್ಮಾ ವಿರುದ್ಧ ಐಪಿಸಿ ಸೆಕ್ಷನ್‌ 153, 504, 505(2), 505(1)(B), 505(1)(C), ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66, ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಸುಗ್ರೀವಾಜ್ಞೆ 2020ರ ಸೆಕ್ಷನ್‌ 6ರ ಅಡಿ ಪ್ರಕರಣ ದಾಖಲಾಗಿತ್ತು.

Kannada Bar & Bench
kannada.barandbench.com