ಮಚ್ಚು ಹಿಡಿದು ರೀಲ್ಸ್: ವಿನಯ್‌, ರಜತ್‌ರನ್ನು ಮಾ.28ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಬಂಧಿತರಾಗಿದ್ದ ವಿನಯ್‌ ಮತ್ತು ರಜತ್‌ ಅವರನ್ನು 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌ ನಿರ್ಮಲಾ ಅವರು ಮಾರ್ಚ್‌ 28ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.
ಮಚ್ಚು ಹಿಡಿದು ರೀಲ್ಸ್: ವಿನಯ್‌, ರಜತ್‌ರನ್ನು ಮಾ.28ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ
Published on

ಸಾರ್ವಜನಿಕವಾಗಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ಬಿಗ್‌ಬಾಸ್‌ ಸ್ಪರ್ಧಿಗಳಾದ ರಜತ್‌ ಕಿಶನ್ ಹಾಗೂ ವಿನಯ್‌ ಗೌಡ ಅವರನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಬಂಧಿತರಾಗಿದ್ದ ವಿನಯ್‌ ಮತ್ತು ರಜತ್‌ ಅವರನ್ನು 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಎಸ್‌ ನಿರ್ಮಲಾ ಅವರು ಮಾರ್ಚ್‌ 28ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ರೀಲ್ಸ್‌ ಹಿನ್ನೆಲೆಯಲ್ಲಿ ಮಾರ್ಚ್‌ 24ರಂದು ವಿನಯ್‌ ಮತ್ತು ರಜತ್‌ಗೆ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ ಬಸವೇಶ್ವರ ನಗರ ಠಾಣೆಯ ಪೊಲೀಸರು ನೋಟಿಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಇಬ್ಬರೂ ರೀಲ್ಸ್‌ನಲ್ಲಿ ತಾವು ಬಳಸಿದ್ದು ಫೈಬರ್‌ನಿಂದ ಮಾಡಲಾದ ಮಚ್ಚು ಎಂದು ವಿವರಣೆ ನೀಡಿದ್ದರು. ಇದರಿಂದ ಇಬ್ಬರನ್ನೂ ಪೊಲೀಸರು ಮನೆಗೆ ಕಳುಹಿಸಿದ್ದರು.

ಈ ಮಧ್ಯೆ, ರಜತ್‌ ಪತ್ನಿ ಅಕ್ಷತಾ ಅವರು ಫೈಬರ್‌ ಮಚ್ಚನ್ನು ಪೊಲೀಸರಿಗೆ ತಂದು ನೀಡಿದ್ದರು. ಇದು ನಕಲಿ ಎಂದು ತಿಳಿದ ಪೊಲೀಸರು ಆಕೆಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ತದನಂತರ ರೀಲ್ಸ್‌ನಲ್ಲಿರುವ ಮಚ್ಚು ಹಾಗೂ ಠಾಣೆಗೆ ಹಾಜರುಪಡಿಸಲಾದ ಮಚ್ಚು ಬೇರೆಬೇರೆಯಾಗಿರುವುದನ್ನು ಮನಗಂಡು ಸಾಕ್ಷ್ಯ ನಾಶದ ಆರೋಪವನ್ನು ವಿನಯ್‌ ಹಾಗೂ ರಜತ್‌ ವಿರುದ್ಧ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನ.25 ಮಂಗಳವಾರ ಈ ಇಬ್ಬರನ್ನೂ ಮತ್ತೊಮ್ಮೆ ವಿಚಾರಣೆಗೆ ಕರೆದಿದ್ದ ಪೊಲೀಸರು ಅವರನ್ನು ವಶಕ್ಕೆ ಪಡೆದು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

Kannada Bar & Bench
kannada.barandbench.com