ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೆಗಾ ಮಾರ್ಕೆಟ್‌ಗೆ ಜಮ್ನಾಲಾಲ್ ಟ್ರಸ್ಟ್ ಭೂಮಿ: ಆದೇಶ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು ಉತ್ತರ ತಾಲ್ಲೂಕಿನ ಮಾಗಡಿ ರಸ್ತೆಯಲ್ಲಿರುವ ಜಮ್ನಾಲಾಲ್ ಬಜಾಜ್ ಸೇವಾ ಟ್ರಸ್ಟ್‌ಗೆ ಸೇರಿದ ಭೂಮಿಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ "ಮೆಗಾ ಮಾರ್ಕೆಟ್" ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
ಯಶವಂತಪುರದ ಶ್ರೀಗಂಧದ ಕಾವಲು ಪ್ರದೇಶದಲ್ಲಿ ಸುಮಾರು 172 ಎಕರೆ ಮತ್ತು ಹೇರೋಹಳ್ಳಿ ಗ್ರಾಮದಲ್ಲಿ 100 ಎಕರೆ ಸೇವಾ ಟ್ರಸ್ಟ್ ನ ಹೆಸರಿನಲ್ಲಿತ್ತು. ಆದರೆ, ಮೆಗಾ ಮಾರ್ಕೆಟ್ ಸ್ಥಾಪನೆಗಾಗಿ ಈ ಶ್ರೀಗಂಧದ ಕಾವಲಿನಲ್ಲಿನ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 1994ರಲ್ಲಿ ಮತ್ತು ಹೇರೋಹಳ್ಳಿಯ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 1999ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೆಟ್ಟಿಲೇರಿದ್ದು ಏಕಸದಸ್ಯ ಪೀಠವು ಟ್ರಸ್ಟ್ ವಾದವನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಟ್ರಸ್ಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ಸಹ ತಿರಸ್ಕರಿಸಿದೆ. ಏಕಸದಸ್ಯ ಪೀಠದ ತೀರ್ಪಿನಲ್ಲಿ ಯಾವುದೇ ಲೋಪಗಳಿಲ್ಲ ಎಂದು ಹೇಳಿದೆ.
ಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಟ್ರಸ್ಟ್ ಕಾಲಕಾಲಕ್ಕೆ ವಿವಿಧ ನ್ಯಾಯಾಲಯಗಳಿಂದ ಪಡೆದ ತಡೆಯಾಜ್ಞೆಗಳೇ ಪ್ರಮುಖ ಕಾರಣ. ಕಾನೂನುಬದ್ಧ ಕಾಲಮಿತಿಯಲ್ಲೇ ಪ್ರಕ್ರಿಯೆ ನಡೆದಿದೆ. ಮಾರುಕಟ್ಟೆ ಯೋಜನೆಯನ್ನು ವೈಜ್ಞಾನಿಕವಾಗಿ ಜಾರಿಗೆ ತರಲು ಸರ್ಕಾರವು 'ತುರ್ತು ಕಲಮು' ಬಳಕೆ ಕಾನೂನು ಬದ್ಧವಾಗಿದೆ. ಟ್ರಸ್ಟ್ ಈಗಾಗಲೇ ಪರಿಹಾರದ ಮೊತ್ತವನ್ನು ನಿರ್ಧರಿಸುವ ಸಭೆಗಳಲ್ಲಿ ಭಾಗವಹಿಸಿತ್ತು ಮತ್ತು ಸುಮಾರು 2.36 ಕೋಟಿ ರೂಪಾಯಿಗಳ ಪರಿಹಾರವನ್ನು ಪಡೆದುಕೊಂಡಿದೆ. ಹಣ ಪಡೆದ ಹತ್ತು ವರ್ಷಗಳ ನಂತರ ಅದನ್ನು ಹಿಂದಿರುಗಿಸಲು ಪ್ರಯತ್ನಿಸಿ ಭೂಸ್ವಾಧೀನವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಹೇಳಿದೆ.
ಟ್ರಸ್ಟ್ ಹೆಚ್ಚುವರಿ ಭೂಮಿ ಹೊಂದಿದೆ ಎಂಬ ಕಾರಣಕ್ಕೆ ಸರ್ಕಾರ ಉಳಿದ ಪರಿಹಾರ ಹಣವನ್ನು ತಡೆಹಿಡಿದಿತ್ತು. ಟ್ರಸ್ಟ್ ಆ ಪ್ರಕರಣದಲ್ಲಿ 2022ರಲ್ಲಿ ಗೆಲುವು ಸಾಧಿಸಿದ್ದರೂ, ಅದು ಮೂಲ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಭೂ ಸ್ವಾಧೀನದಲ್ಲಿ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದನ್ನು ಟ್ರಸ್ಟ್ ಪ್ರಮುಖವಾಗಿ ಪ್ರಶ್ನಿಸಿತ್ತು. ಭೂಸ್ವಾಧೀನ ಪ್ರಕ್ರಿಯೆಯು ಕಾಲಮಿತಿಯೊಳಗೆ ಮುಗಿದಿಲ್ಲ ಮತ್ತು ಹೊಸ ಭೂಸ್ವಾಧೀನ ಕಾಯಿದೆಯು (2013) ಅಡಿಯಲ್ಲಿ ಈ ಪ್ರಕ್ರಿಯೆಯು ರದ್ದಾಗಿದೆ ಎಂದು ಟ್ರಸ್ಟ್ ವಾದಿಸಿತ್ತು.

