ಸ್ಥಳೀಯ ಸಂಸ್ಥೆ ಚುನಾವಣೆ ವಿಪ್‌ ಉಲ್ಲಂಘನೆ: ಅನರ್ಹತೆ ಪ್ರಕ್ರಿಯೆಗೆ ನಿಯಮ ರೂಪಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಅನರ್ಹತೆ ಪ್ರಕ್ರಿಯೆ ಕುರಿತು ಕಾಯಿದೆ ಅಡಿ ನಿಯಮ ರಚಿಸದ ಕಾರಣ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಕಾಯಿದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದರಿಂದ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶ ಸೋಲುತ್ತಿದೆ ಎಂದಿರುವ ಪೀಠ.
High Court of Karnataka, Dharwad Bench
High Court of Karnataka, Dharwad Bench

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ವಿಪ್ ಉಲ್ಲಂಘನೆ ಪ್ರಕರಣದಲ್ಲಿ ಸಿಲುಕಿ ಸದಸ್ಯರು ಅನರ್ಹತೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯಿದೆ) 1987ರ ಕಾಯಿದೆಯಡಿ ಅನರ್ಹತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ ರೂಪಿಸುವಂತೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ರಾಜ್ಯ ಸರ್ಕಾರಕ್ಕೆ ಈಚೆಗೆ ಆದೇಶಿಸಿದೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ವಿಪ್ ಉಲ್ಲಂಘಿಸಿದ ಆರೋಪ ಸಂಬಂಧ ತಮ್ಮನ್ನು ಸದಸ್ಯರ ಸ್ಥಾನದಿಂದ ಅನರ್ಹತೆಗೊಳಿಸಿದ್ದ ಜಿಲ್ಲಾಧಿಕಾರಿಯ ಕ್ರಮ ಪ್ರಶ್ನಿಸಿ ಸವಿತಾ, ಚಾಂದಿನಿ ಮತ್ತು ಗೋದಾವರಿ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎನ್ ಎಸ್ ಸಂಜಯಗೌಡ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

ರಾಜ್ಯ ಸರ್ಕಾರವು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯಿದೆ) -1987ರ ಕಾಯಿದೆ ಅಡಿಯಲ್ಲಿ ಅನರ್ಹತೆ ಪ್ರಕ್ರಿಯೆಗೆ ನಿಯಮ ರೂಪಿಸುವವರೆಗೆ ರಾಜಕೀಯ ಪಕ್ಷದ ತೀರ್ಮಾನವನ್ನು (ವಿಪ್) ಚುನಾಯಿತ ಸದಸ್ಯರಿಗೆ ರವಾನಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನ್ಯಾಯಾಲಯ ರೂಪಿಸಿದೆ.

ಸ್ಥಳೀಯ ಸಂಸ್ಥೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ರಾಜಕೀಯ ಪಕ್ಷ ವಿಪ್ ಜಾರಿ ಮಾಡಬೇಕು. ಇದನ್ನು ಚುನಾಯಿತ ಸದಸ್ಯರ ಸಭೆ ನಡೆಸುವ ಸಕ್ಷಮ ಅಧಿಕಾರಿಗೆ ರವಾನಿಸಬೇಕು. ಪಕ್ಷವು ತನ್ನ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ಐದು ದಿನಗಳ ಮುನ್ನ ತಲುಪಿಸಬೇಕು. ಪಕ್ಷದ ತೀರ್ಮಾನವನ್ನು ಸಭೆ ನಡೆಸುವ ಐದು ದಿನಗಳ ಮುನ್ನ ಸಕ್ಷಮ ಅಧಿಕಾರಿಯು ಸ್ಥಳೀಯ ಸಂಸ್ಥೆಯ ತನ್ನ ಸದಸ್ಯರಿಗೆ ಕಳುಹಿಸಬೇಕು. ವಿಪ್ ನೋಟಿಸ್ ಅನ್ನು ಆರ್‌ಪಿಎಡಿ, ಕೊರಿಯರ್ ಅಥವಾ ಇ-ಮೇಲ್ ಮೂಲಕ ಕಳುಹಿಸುವುದು ರಾಜಕೀಯ ಪಕ್ಷಗಳಿಗೆ ಸೇರಿದ ವಿಚಾರ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಅನುಮತಿ ಕೋರಲು ಸದಸ್ಯರಿಗೆ ಐದು ದಿನಗಳ ಕಾಲಾವಕಾಶ ನೀಡಬೇಕಾಗುತ್ತದೆ. ಆಗ ಸದಸ್ಯರು ಅನರ್ಹತೆಗೆ ಒಳಗಾಗುವ ಸನ್ನಿವೇಶವನ್ನು ತಪ್ಪಿಸಬಹುದು. ಒಂದೊಮ್ಮೆ ಪಕ್ಷದ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ತಲುಪಿಸದೆ ಹೋದರೆ, ಸದಸ್ಯರ ವಿರುದ್ಧ ಅನರ್ಹತೆ ಪ್ರಕ್ರಿಯೆ ಕೈಗೊಳ್ಳುವಂತಿಲ್ಲ. ಒಂದೊಮ್ಮೆ ತೀರ್ಮಾನ ಕುರಿತ ನೋಟಿಸ್ ಜಾರಿಗೊಳಿಸಿದರೆ, ಅದು ವಿಪ್ ಜಾರಿ ಮಾಡಿದಂತಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

“ನೋಟಿಸ್ (ವಿಪ್) ಅನ್ನು ಅರ್ಜಿದಾರರಿಗೆ ವೈಯಕ್ತಿಕವಾಗಿ ಅಥವಾ ಯಾವುದೇ ರೀತಿ ತಲುಪಿಸುವ ಪ್ರಯತ್ನ ನಡೆದಿಲ್ಲ. ವಿಪ್ ಜಾರಿಗೊಳಿಸಿದ ಮತ್ತು ಪಕ್ಷದ ನಿರ್ಧಾರವನ್ನು ಅರ್ಜಿದಾರಿಗೆ ತಿಳಿಸಿರುವ ಬಗ್ಗೆ ಸಾಕ್ಷ್ಯಧಾರಗಳ ಕೊರತೆ ಇದೆ” ಎಂದು ತಿಳಿಸಿ ಜಿಲ್ಲಾಧಿಕಾರಿ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿದೆ.

“ಅನರ್ಹತೆ ಪ್ರಕ್ರಿಯೆ ಕುರಿತಂತೆ ಕಾಯಿದೆ ಅಡಿ ಸೂಕ್ತ ನಿಯಮಗಳನ್ನು ರಚಿಸದ ಕಾರಣ ಇಂತಹ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ, ಕಾಯಿದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದರಿಂದ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶವೇ ಸೋಲು ಕಾಣುತ್ತಿದೆ” ಎಂದು ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ: 2020ರ ನವೆಂಬರ್‌ 11ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಇದರಿಂದ ಯಾರ ಪರವಾಗಿ ಮತ ಚಲಾಯಿಸಬೇಕು ಎಂಬ ಕುರಿತು ಚರ್ಚಿಸಲು ಬಿಜೆಪಿಯು 2020ರ ನವೆಂಬರ್‌ 7ರಂದು ಸದಸ್ಯರ ಸಭೆ ನಡೆಸಿತ್ತು. ಅಧ್ಯಕ್ಷ ಹುದ್ದೆಗೆ ಲಕ್ಷ್ಮಿ ಮಹಾಲಿಂಗಪ್ಪ ಮದ್ದಾಪುರ ಅವರನ್ನು ಮತ್ತು ಉಪಾಧ್ಯಕ್ಷ ಹುದ್ದೆಗೆ ಸ್ನೇಹಾ ಶಿವಾನಂದ ಅಂಗಡಿ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿತ್ತು. ಅವರಿಗೆ ಮತಹಾಕುವಂತೆ ಎಲ್ಲಾ ಪುರಸಭೆ ಸದಸ್ಯರಿಗೆ ಸೂಚಿಸಲಾಗಿತ್ತು. ಸಭೆಗೆ ಅರ್ಜಿದಾರರು ಗೈರಾಗಿದ್ದರು.

2020ರ ನವೆಂಬರ್‌ 9ರಂದು ಚುನಾವಣೆ ನಡೆದಾಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಕ್ರಮವಾಗಿ ಸವಿತಾ ಮತ್ತು ಚಾಂದಿನಿ ಸ್ಪರ್ಧಿಸಿದ್ದರು. ಇದರಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಸಮಾನವಾಗಿ ಅಂದರೆ ತಲಾ 10 ಮತಗಳನ್ನು ಗಳಿಸಿದ್ದರು. ಅಂತಿಮವಾಗಿ ಟಾಸ್ ಮೂಲಕ ಚುನಾವಣೆ ನಡೆಸಲು ನಿರ್ಧರಿಸಲಾಯಿತು. ಟಾಸ್‌ನಲ್ಲಿ ಸವಿತಾ ಸೋತರೆ, ಚಾಂದಿನಿ ಜಯ ಸಾಧಿಸಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ಚುನಾವಣೆಯಲ್ಲಿ ಮತದಾನ ಮಾಡಿದ್ದಕ್ಕೆ ಅರ್ಜಿದಾರರನ್ನು ಅನರ್ಹಗೊಳಿಸಲು ಕೋರಿ ದೂರು ಸಲ್ಲಿಕೆಯಾಗಿತ್ತು. ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಅರ್ಜಿದಾರರನ್ನು ಅನರ್ಹಗೊಳಿಸಿ 2021ರ ಏಪ್ರಿಲ್‌ 8ರಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com