ಕಳಪೆ ಗುಣಮಟ್ಟದ ಕೃಷಿ ಸಲಕರಣೆ ಪೂರೈಸಿದ ಕಂಪನಿಗಳ ವಿರುದ್ಧ ಕ್ರಮ: ಸರ್ಕಾರ, ಲೋಕಾಯುಕ್ತಕ್ಕೆ ಹೈಕೋರ್ಟ್‌ ನೋಟಿಸ್‌

ಕಳಪೆ ಗುಣಮಟ್ಟದ ಸಲಕರಣೆಗಳಿಂದಾಗಿ ರೈತರ ಬೆಳೆಗಳು ನಷ್ಟವಾಗುತ್ತಿದ್ದು, ಅವರು ಸಂಕಷ್ಟಕ್ಕೆ ಸಿಲುವಂತೆ ಮಾಡಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
Karnataka High Court
Karnataka High Court
Published on

ಕಳಪೆ ಗುಣಮಟ್ಟದ ಕೃಷಿ ಸಲಕರಣೆಗಳನ್ನು ವಿತರಿಸುವ ಮೂಲಕ ರೈತರು ಸಂಕಷ್ಟಕ್ಕೆ ಸಿಲುಕಲು ಕಾರಣರಾದ ಅಧಿಕಾರಿಗಳು ಹಾಗೂ ಸಲಕರಣೆ ಪೂರೈಕೆ ಕಂಪನಿಗಳ ವಿರುದ್ಧ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನೋಟಿಸ್ ಜಾರಿಗೊಳಿಸಿದೆ.

ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ರಾಜ್ಯ ಸರ್ಕಾರ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೃಷಿ ಆಯುಕ್ತರು, ತೋಟಗಾರಿಕೆ ನಿರ್ದೇಶಕರು, ಲೋಕಾಯುಕ್ತ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಜುಲೈ 8ಕ್ಕೆ ಮುಂದೂಡಿತು.

ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಿಂದ ಕೃಷಿ ಚಟುವಟಿಕೆಗಳಿಗೆ ಕೃಷಿ ಸಲಕರಣೆಗಳನ್ನು ಅದರಲ್ಲೂ ಮುಖ್ಯವಾಗಿ ಸ್ಪಿಂಕ್ಲರ್ ಪೈಪ್, ಟಾರ್ಪಾಲ್‌ಗಳನ್ನು ರೈತರಿಗೆ ಪೂರೈಸಲಾಗುತ್ತಿದೆ. ಆದರೆ, ಈ ಸಲಕರಣೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಲಕರಣೆಗಳ ಪೂರೈಕೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಕಳಪೆ ಗುಣಮಟ್ಟದ ಸಲಕರಣೆಗಳಿಂದಾಗಿ ರೈತರ ಬೆಳೆಗಳು ನಷ್ಟವಾಗುತ್ತಿದ್ದು,ಅವರು ಸಂಕಷ್ಟಕ್ಕೆ ಸಿಲುವಂತೆ ಮಾಡಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

Kannada Bar & Bench
kannada.barandbench.com