ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ, ಮೂತ್ರಾಲಯ ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದ: ಸರ್ಕಾರದ ವಿವರಣೆ

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ ಎನ್ ಅಜಯ್ ನಾಗಭೂಷಣ್ ಅವರ ಅಫಿಡವಿಟ್‌ ಅನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.
High Court of Karnataka
High Court of Karnataka

ರಾಜ್ಯದಲ್ಲಿ 2026ರ ಪ್ರಸ್ತಾವಿತ ಜನಸಂಖ್ಯೆಯ ಶೇ.5ರಷ್ಟು 'ಬಂದು ಹೋಗುವ ಜನಸಂಖ್ಯೆʼಗೆ (ಫ್ಲೋಟಿಂಗ್ ಪಾಪ್ಯುಲೇಷನ್) ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಲೆಟ್ಜ್‌‌ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಂ ಎನ್ ಅಜಯ್ ನಾಗಭೂಷಣ್ ಅವರ ಅಫಿಡವಿಟ್‌ ಅನ್ನು ಸರ್ಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ರಾಜ್ಯದಲ್ಲಿ ಪ್ರಸ್ತುತ 312 ನಗರ ಸ್ಥಳೀಯ ಸಂಸ್ಥೆಗಳಿವೆ. ಇವುಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ತಲಾ 6 ರಿಂದ 7 ಸೀಟುಗಳಂತೆ ಒಟ್ಟು 9,167 ಸೀಟುಗಳ ಸಾಮರ್ಥ್ಯದ 1,360 ಸಾರ್ವಜನಿಕ ಶೌಚಾಲಯಗಳಿವೆ. ಕೇಂದ್ರ ಸಾರ್ವಜನಿಕ ಆರೋಗ್ಯ ಪರಿಸರ ಸಂಘಟನೆ ಹಾಗೂ ಸ್ವಚ್ಛ ಭಾರತ್ ಮಿಷನ್ ಮಾರ್ಗಸೂಚಿಗಳಂತೆ ಪ್ರತಿ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ಜನಸಂಖ್ಯೆಯಲ್ಲಿ ಶೇ.5ರಷ್ಟು, ಅಂದರೆ 250 ಮಂದಿ ಬಂದು ಹೋಗುವ ಜನಸಂಖ್ಯೆ ಎಂದು ಪರಿಗಣಿಸಬೇಕು. ಆ 250 ಜನಸಂಖ್ಯೆಗೆ ಒಂದು ಶೌಚಾಲಯ/ಮೂತ್ರಾಲಯ ಒದಗಿಸಬೇಕು ಎಂದು ತಿಳಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ 2011ರ ಜನಸಂಖ್ಯೆ ಪ್ರಕಾರ ರಾಜ್ಯದ ನಗರ ಪ್ರದೇಶಗಳ ಜನಸಂಖ್ಯೆ 1.57 ಕೋಟಿ ಇದ್ದು, 2026ರಲ್ಲಿ ಈ ಜನಸಂಖ್ಯೆ 2.01 ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಇದರ ಅನ್ವಯ ಶೇ.5ರಂತೆ ಬಂದು ಹೋಗುವ ಜನಸಂಖ್ಯೆ 10 ಲಕ್ಷ ಆಗಲಿದೆ. ಈ ಶೇ.5ರಷ್ಟು ಬಂದು ಹೋಗುವ ಜನಸಂಖ್ಯೆ ಆಧರಿಸಿ ಪ್ರತಿ 250 ಮಂದಿಗೆ ಸಾರ್ವಜನಿಕ ಶೌಚಾಲಯದ ಒಂದು ಸೀಟು ಒದಗಿಸಬೇಕಾಗಿದೆ. ಅದಕ್ಕಾಗಿ, 3,081 ಸೀಟುಗಳ 384 ಹೊಸ ಸಾರ್ವಜನಿಕ ಶೌಚಾಲಯಗಳನ್ನು 37.22 ಕೋಟಿ ರೂಪಾಯಿ ವೆಚ್ಚದಲ್ಲಿ, 2,726 ಮೂತ್ರಾಲಯಗಳಿರುವ 635 ಮೂತ್ರಾಲಯ ಬ್ಲಾಕ್‌ಗಳನ್ನು 8.72 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹೆಚ್ಚು ಜನ ಬಂದ ಹೋಗುವ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ 1,223 ಸೀಟುಗಳನ್ನು 199 ಇ-ಶೌಚಾಲಯಗಳನ್ನು 30.58 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಲಾಗಿದೆ.

ಈ ಕ್ರಿಯಾ ಯೋಜನೆಗೆ ಸ್ವಚ್ಛ ಭಾರತ್ ಮಿಷನ್‌ನ ತಾಂತ್ರಿಕ ಸಮಿತಿ ಅನುಮೋದನೆ ನೀಡಿದೆ. ಅಲ್ಲದೇ, ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯದ 9ನೇ ರಾಷ್ಟ್ರೀಯ ಸಲಹಾ ಹಾಗೂ ಪರಿಶೀಲನಾ ಸಮಿತಿಯ ಒಪ್ಪಿಗೆಯೂ ದೊರಕಿದೆ. ಈ ಕ್ರಿಯಾ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 9 ಕೋಟಿ ರೂಪಾಯಿ ವೆಚ್ಚದಲ್ಲಿ 600 ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಶೌಚಾಲಯ, ಮೂತ್ರಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಅಕ್ಟೋಬರ್‌ 3ರಂದು ಸುತ್ತೋಲೆ ಹೊರಡಿಸಲಾಗಿದೆ. ಇದಕ್ಕಾಗಿ ಪಾಲಿಕೆ ಆಯುಕ್ತರು, ಮುಖ್ಯಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಮಿತಿ ರಚಿಸುವಂತೆ ಅಕ್ಟೋಬರ್‌ 5ರಂದು ಆದೇಶ ಹೊರಡಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಈ ಅಫಿಡವಿಟ್‌ ದಾಖಲಿಸಿಕೊಂಡ ಪೀಠವು ಅರ್ಜಿಯಲ್ಲಿ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರತಿವಾದಿಯನ್ನಾಗಿಸಿತು. ಅಲ್ಲದೇ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ರಾಜ್ಯ ಸರ್ಕಾರದ ಕ್ರಿಯಾ ಯೋಜನೆ ಬಗ್ಗೆ ಸ್ಥಳಕ್ಕೆ ಭೇಟಿ ಕೊಟ್ಟು ಸ್ವತಂತ್ರ ಪರಿಶೀಲನಾ ವರದಿ ಸಲ್ಲಿಸಬೇಕು. ಅಲ್ಲದೇ ಕ್ರಿಯಾ ಯೋಜನೆಗೆ ಕೇಂದ್ರ ಸರ್ಕಾರದ ಹಣವೆಷ್ಟು, ರಾಜ್ಯದ ಪಾಲಿನ ಅನುದಾನ ಎಷ್ಟು, ಅದನ್ನು ಹೇಗೆ ಬಳಸಲಾಗುತ್ತಿದೆ. ಕ್ರಿಯಾ ಯೋಜನೆಯ ಅನುಷ್ಠಾನ ಹೇಗೆ ಎಂಬ ವಿವರವಾದ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು 2024ರ ಜನವರಿ 11ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com