ಮಾಜಿ ಸಿಎಂ ಜಯಲಲಿತಾರಿಂದ ವಶಪಡಿಸಿಕೊಂಡ ಸೀರೆ, ಬೆಳ್ಳಿ-ಬಂಗಾರ ಹರಾಜು ಹಾಕಲು ಸಿಜೆಐಗೆ ಪತ್ರ

ಈ ವಸ್ತುಗಳು ನ್ಯಾಯಾಲಯಕ್ಕೆ ಸಾಕ್ಷಿ ಅಥವಾ ಮತ್ತಿತರ ರೂಪದಲ್ಲಿ ಅವಶ್ಯಕತೆ ಇಲ್ಲದಿದ್ದರೆ ಅವುಗಳನ್ನು ವಿಲೇವಾರಿ ಮಾಡಿ, ಅದರಿಂದ ಬರುವ ಹಣವನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬಹುದು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರಿಂದ ಪತ್ರ.
Tamilnadu former CM J. Jayalalithaa
Tamilnadu former CM J. Jayalalithaa

ಭ್ರಷ್ಟಾಚಾರ ಪ್ರಕರಣದಲ್ಲಿ ಅಪರಾಧಿಯಾಗಿದ್ದ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾಗಿರುವ ಸಾವಿರಾರು ಸೀರೆಗಳು, ವಜ್ರ-ವೈಢೂರ್ಯ, ಬೆಳ್ಳಿ-ಬಂಗಾರ, ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ಕಾನೂನು ಪ್ರಕಾರ ಅಥವಾ ನ್ಯಾಯಾಲಯದ ವಿವೇಚನೆಯ ಪ್ರಕಾರ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡಬೇಕು. ಇದನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬಹುದಾಗಿದೆ ಎಂದು ವಿವರಿಸಿ ಸಾಮಾಜಿಕ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ), ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹಾಗೂ ಬೆಂಗಳೂರಿನ ಪ್ರಧಾನ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಿಗೆ ಈಚೆಗೆ ಪತ್ರ ಬರೆದಿದ್ದಾರೆ.

ಜಯಲಲಿತಾ ಅವರ ಚೆನ್ನೈನ ಪೋಯಸ್‌ ಗಾರ್ಡನ್‌ ನಿವಾಸದಿಂದ 11,344 ದುಬಾರಿ ಮೌಲ್ಯದ ಸೀರೆಗಳು, 44 ಹವಾನಿಯಂತ್ರಕಗಳು, 33 ಟೆಲಿಫೋನ್‌/ಇಂಟರ್‌ಕಾಮ್‌, 131 ಸೂಟ್‌ಕೇಸ್‌, 91 ವಾಚ್‌, 27 ಗಡಿಯಾರ, 86 ಫ್ಯಾನ್, 146 ಆಲಂಕಾರಿಕ ಕುರ್ಚಿ, 34 ಟೀಪಾಯಿ, 31 ಟೇಬಲ್‌, 24 ಮಂಚ, 9 ಡ್ರೆಸಿಂಗ್‌ ಟೇಬಲ್‌, ನೇತಾಡುವ 81 ವರ್ಣರಂಜಿತ ದೀಪಗಳು, 20 ಸೋಫಾ ಸೆಟ್‌, 750 ಚಪ್ಪಲಿ, 31 ಡ್ರೆಸ್ಸಿಂಗ್‌ ಟೇಬಲ್‌ ಮಿರರ್‌, 215 ಕ್ರಿಸ್ಟಲ್‌ ಕಟ್‌ ಗ್ಲಾಸ್‌, 3 ಐರಾನ್‌ ಲಾಕರ್‌, 250 ಶಾಲು, 12 ರೆಫ್ರಿಜರೇಟರ್‌, 10 ಟಿವಿ, 8 ವಿಸಿಆರ್‌, 1 ವಿಡಿಯೊ ಕ್ಯಾಮೆರಾ, 4 ಸಿ ಡಿ ಪ್ಲೇಯರ್‌, 2 ಆಡಿಯೊ ಡೆಕ್‌, 24 ಟು ಇನ್‌ ಒನ್‌ ಟೇಪ್‌ರೆಕಾರ್ಡರ್‌, 1,020 ವಿಡಿಯೊ ಕ್ಯಾಸೆಟ್‌ ವಶಪಡಿಸಿಕೊಳ್ಳಲಾಗಿತ್ತು.

ಇವುಗಳಲ್ಲದೇ, ಬೆಲೆಬಾಳುವ ಬಳೆ, ಬ್ರೇಸ್‌ಲೆಟ್‌, ಕಿವಿ ಓಲೆ, ಡ್ರಾಪ್ಸ್‌, ನೆಕ್ಲೇಸ್‌, ಮೂಗುತಿ, ಕತ್ತಿ, ಪೀಕಾಕ್‌, ಪನ್ನೀರ್‌ ಸೋಂಬು, ರೋಪ್‌ ಚೈನ್‌, ಸಂದನ ಕಿನ್ನಮ್‌, ಚಿನ್ನದ ಲೇಖನಿ, ಗೋಲ್ಡ್‌ ಶೀಟ್‌, ಗೋಲ್ಡ್‌ ಟ್ರೇ, ಕುಂಕುಮ ಚಿಮಿಲಿ, ಡಾಬು, ಉಂಗುರಗಳು, ಗೋಲ್ಡ್‌ ಕುಸುಮಾಲೈ, ಬೋಲ್ಡ್‌ ಬೆಲ್ಟ್‌, ದೇವರು-ದೇವತೆಗಳ ಚಿನ್ನದ ಮೂರ್ತಿಗಳು, ಕಾಮಾಕ್ಷಿ ವಿಲಕು, ಗೋಲ್ಡ್‌ ಕೀ ಚೈನ್‌, ಗೋಲ್ಡ್‌ ಮ್ಯಾಂಗೊ, ಚಿನ್ನದ ವಾಚು ಸೇರಿದಂತೆ 468 ದುಬಾರಿ ಬೆಲೆಬಾಳುವ ವಸ್ತುಗಳು ಹಾಗೂ 700 ಕೆ ಜಿ ಬೆಳ್ಳಿ ಪದಾರ್ಥಗಳು ಹಾಗೂ 1.93 ಲಕ್ಷ ರೂಪಾಯಿಯನ್ನೂ ತನಿಖಾ ಸಂಸ್ಥೆಗಳು ವಶಕ್ಕೆ ಪಡೆದಿದ್ದವು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸೀರೆ, ಶಾಲು ಹಾಗೂ ಚಪ್ಪಲಿಗಳನ್ನು ಬಳಸದೇ ಇಟ್ಟರೆ ಅವುಗಳ ಗುಣಮಟ್ಟ ಕುಸಿಯಲಿದ್ದು, ಉಪಯೋಗಕ್ಕೆ ಬರುವುದಿಲ್ಲ ಎಂದು ಜವಳಿ ತಜ್ಞರು ಅಭಿಪ್ರಾಯಟ್ಟಿದ್ದು, ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಈ ಎಲ್ಲಾ ವಸ್ತುಗಳು ಕಳೆದ 26 ವರ್ಷಗಳಿಂದ ನ್ಯಾಯಾಲಯದ ವಶದಲ್ಲಿವೆ. ಈ ವಸ್ತುಗಳು ನ್ಯಾಯಾಲಯಕ್ಕೆ ಸಾಕ್ಷಿ ಅಥವಾ ಮತ್ತಿತರ ರೂಪದಲ್ಲಿ ಅವಶ್ಯಕತೆ ಇಲ್ಲದಿದ್ದರೆ ಅವುಗಳನ್ನು ವಿಲೇವಾರಿ ಮಾಡಿ, ಅದರಿಂದ ಬರುವ ಹಣವನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಬಹುದು ಎಂದು ಹೇಳಲಾಗಿದೆ.

ಜಯಲಲಿತಾ ಅವರ ವಸ್ತುಗಳನ್ನು ಹರಾಜಿಗೆ ಇಡುವುದರಿಂದ ಜಯಲಲಿತಾ ಅವರನ್ನು ಅಪಾರವಾಗಿ ಪ್ರೀತಿಸುವ, ಭಾವನಾತ್ಮಕವಾದ ಸಂಬಂಧ ಹೊಂದಿರುವ ಅವರ ಅಭಿಮಾನಿಗಳು ಅವುಗಳನ್ನು ಖರೀದಿಸಬಹುದು. ಇದರಿಂದ ಅನೂಹ್ಯವಾದ ಸಾರ್ವಜನಿಕ ಬಿಡ್‌ ಹಣ ಸಂಗ್ರಹವಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

2014ರ ಸೆಪ್ಟೆಂಬರ್‌ 27ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾ, ಅವರ ಗೆಳತಿ ವಿ ಕೆ ಶಶಿಕಲಾ, ಇಳವರಿಸಿ ಮತ್ತು ಜಯಲಲಿತಾ ಅವರ ಒಂದು ಕಾಲದ ದತ್ತು ಪುತ್ರ ಸುಧಾಕರನ್‌ ಅವರನ್ನು ಭ್ರಷ್ಟಾಚಾರ ಅಪರಾಧಿಗಳು ಎಂದು ಘೋಷಿಸಿತ್ತು. ಅಧೀನ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿತ್ತು.

Related Stories

No stories found.
Kannada Bar & Bench
kannada.barandbench.com