ನಟ ಚೇತನ್ ಅವರ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ರದ್ದುಗೊಳಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಮತ್ತೆ ಮುಂದುವರಿಸಿದೆ.
ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕ ಸದಸ್ಯ ಪೀಠವು ವಿಚಾರಣೆ ನಡೆಸಿತು.
ಕೇಂದ್ರ ಸರ್ಕಾರ ಒಸಿಐ ರದ್ದು ಮಾಡಿ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಲಾಗಿದೆ. ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ನ್ಯಾಯಾಲಯವು ವಿಚಾರಣೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು, ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಅರ್ಜಿದಾರರು ಪಾಲಿಸಿದ್ದಾರೆ. ಹೀಗಾಗಿ, ಹಿಂದೆ ನೀಡಿರುವ ತಡೆಯಾಜ್ಞೆಯನ್ನು ವಿಸ್ತರಿಸಬೇಕು ಎಂದು ಕೋರಿದರು.
ಚೇತನ್‌ಗೆ 2018ರಲ್ಲಿ ಸಾಗರೋತ್ತರ ಭಾರತೀಯ ಪ್ರಜೆ ಕಾರ್ಡ್ ನೀಡಲಾಗಿತ್ತು. ಆದರೆ, ಅವರ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಮತ್ತು ಭಾರತ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೇಂದ್ರ ಸರ್ಕಾರ ಚೇತನ್‌ಗೆ 2022ರ ಜೂನ್ 8ರಂದು ನೋಟಿಸ್ ನೀಡಿ, ಉತ್ತರ ಪಡೆದಿತ್ತು.
ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲ ಎಂದು ಕೇಂದ್ರ ಸರ್ಕಾರವು ಅವರ ಒಸಿಐ ಕಾರ್ಡ್ ರದ್ದುಪಡಿಸಿತ್ತು. ಇದನ್ನು ಚೇತನ್ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕಳೆದ ಏಪ್ರಿಲ್ 21ರಂದು ನಟ ಚೇತನ್‌ಗೆ ಷರತ್ತುಬದ್ಧ ಪರಿಹಾರ ನೀಡಿದ್ದ ಹೈಕೋರ್ಟ್, ನ್ಯಾಯಾಂಗದ ಬಗ್ಗೆ ಟ್ವೀಟ್ ಮಾಡುವಂತಿಲ್ಲ. ಬಾಕಿಯಿರುವ ಪ್ರಕರಣಗಳ ಬಗ್ಗೆ ಟ್ವೀಟ್ ಮಾಡುವಂತಿಲ್ಲ ಎಂದು ಷರತ್ತು ವಿಧಿಸಿತ್ತು.